ಕೋರೆಗಾಂವ್ ಹಿಂಸಾಚಾರ: ಓರ್ವ ಬಲಿ, 40ಕ್ಕೂ ಅಧಿಕ ವಾಹನಗಳು ಜಖಂ

Update: 2018-01-02 05:27 GMT

 ಪುಣೆ, ಜ.3: ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ಸೋಮವಾರ ನಡೆಯುತ್ತಿದ್ದ ಭೀಮ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ಮೆರವಣಿಗೆ ಮೇಳೆ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಕಲ್ಲೆಸೆತ ಪ್ರಕರಣದಲ್ಲಿ ಓರ್ವ ಮೃತಪಟ್ಟಿದ್ದು, 40ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಘಟನೆಗೆ ಸಂಬಂಧಿಸಿ ಈತನಕ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಓರ್ವ ಸೋಮವಾರ ಸಂಜೆ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘‘ಪೊಲೀಸ್ ವ್ಯಾನ್ ಹಾಗೂ ದ್ವಿ-ಚಕ್ರ ವಾಹನ ಸೇರಿದಂತೆ ಸುಮಾರು 40 ವಾಹನಗಳಿಗೆ ಹಾನಿಗೊಳಿಸಲಾಗಿದೆ. ಪರಿಸ್ಥಿತಿ ರಾತ್ರಿ 7ರ ವೇಳೆ ನಿಯಂತ್ರಣಕ್ಕೆ ಬಂದಿದೆ. ಕೋರೆಗಾಂವ್ ಸ್ಮಾರಕದತ್ತ ಸಾಗುವ ರಸ್ತೆಗಳನ್ನು ತಡೆಹಾಕಲಾಗಿದೆ. ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.’’ ಎಂದು ಕೊಲ್ಲಾಪುರ ವಲಯದ ಐಜಿಪಿ ವಿಶ್ವಾಸ್ ಪಾಟೀಲ್ ಹೇಳಿದ್ದಾರೆ.

ಹಿಂಸಾಚಾರ ತನಿಖೆಗೆ ಕೇಂದ್ರ ಸಚಿವ ಅಠವಲೆ ಆಗ್ರಹ

ದಲಿತರ ರ್ಯಾಲಿ ಮೇಲೆ ಸಂಘಪರಿವಾರ ಕಲ್ಲೆಸೆದಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಧ್ಯಪ್ರವೇಶಿಸಬೇಕು. ತನಿಖೆಯನ್ನು ಕೈಗೆತ್ತಿಕೊಂಡು, ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೇಂದ್ರ ಸಚಿವ ರಾಮ್‌ದಾಸ್ ಅಠವಳೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News