ಮಂಗಳೂರಿನ ಗೃಹಿಣಿಯ ಮೊಬೈಲ್ ಕ್ಯಾಂಟೀನ್ ಉದ್ಯಮದಲ್ಲಿ ಹೂಡಿಕೆ ಮಾಡಲಿದ್ದಾರೆ ಮಹೀಂದ್ರಾದ ಮಾಲಕ!

Update: 2018-01-02 16:00 GMT

ಮಂಗಳೂರು, ಜ.2: ಸಾಧಿಸಬೇಕು ಎನ್ನುವ ಛಲವಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆಯಂತಿದ್ದಾರೆ ಈ ಮಹಿಳೆ. ಜೀವನಾಧಾರವಾಗಿದ್ದ ಗಂಡ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಬೇರೆ ದಾರಿ ಕಾಣದೆ ಜೀವನದ ಬಂಡಿ ಸಾಗಿಸಲು ಮೊಬೈಲ್ ಕ್ಯಾಂಟೀನೊಂದನ್ನು ಆರಂಭಿಸಿದ್ದ ಈಕೆ ಇಂದು ಮಹೀಂದ್ರಾ ಕಂಪೆನಿಯ ಮಾಲಕ ಆನಂದ್ ಮಹೀಂದ್ರಾ ಮೆಚ್ಚುವಂತಹ ಸಾಧನೆಯನ್ನು ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

ಇವರ ಹೆಸರು ಶಿಲ್ಪಾ. ಕೆಲವು ವರ್ಷಗಳ ಹಿಂದೆ ಗೃಹಿಣಿಯಾಗಿದ್ದ ಇವರು ಇಂದು ಯಶಸ್ವಿ ಉದ್ಯಮಿ ಎಂದೇ ಹೇಳಬಹುದು. ಎಸೆಸೆಲ್ಸಿ ಉತ್ತೀರ್ಣರಾಗದ ಶಿಲ್ಪಾ ತಾನು ಇಷ್ಟರ ಮಟ್ಟಿಗೆ ಸಾಧಿಸುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಕ್ಕಿಲ್ಲ. ಅವರ ಛಲ ಹಾಗು ಕಠಿಣ ಶ್ರಮವೇ ಅವರಿಗೆ ಇಂದು ಯಶಸ್ವಿ ಮಹಿಳೆ ಎಂಬ ಬಿರುದು ನೀಡಿದೆ.

“ನಾನು ಉದ್ಯಮಿಯಾಗಬೇಕೆನ್ನುವುದನ್ನು ಪರಿಸ್ಥಿತಿಯೇ ನಿರ್ಧರಿಸಿತ್ತು. ಸ್ಥಳೀಯರು ನನಗೆ ಸಹಕಾರ ನೀಡಿದರು” ಎನ್ನುತ್ತಾರೆ 34ರ ಹರೆಯದ ಶಿಲ್ಪಾ. ಹಾಸನ ಮೂಲದವರಾದ ಇವರು 2005ರಲ್ಲಿ ತನ್ನ ಮೂರು ವರ್ಷದ ಪುತ್ರನ ಜೊತೆ ಮಂಗಳೂರಿಗೆ ಆಗಮಿಸಿದರು. ಅವರ ಪತಿ ರಾಜಶೇಖರ್ ಮಂಗಳೂರಿನಲ್ಲಿ  ಉದ್ಯಮಿಯಾಗಿದ್ದರು. ಕೆಲ ಸಮಯದ ಕಾಲ ಎಲ್ಲವೂ ಸರಿಯಾಗಿತ್ತು. 2008ರಲ್ಲಿ ರಾಜಶೇಖರ್ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. “ಅಂದೇ ನಾವು ಅವರನ್ನು ಕೊನೆಯ ಬಾರಿ ನೋಡಿದ್ದು” ಎನ್ನುತ್ತಾರೆ ಶಿಲ್ಪಾ.

ನಂತರ ರಾಜಶೇಖರ್ ಸಂಪರ್ಕಕ್ಕೇ ಸಿಗಲಿಲ್ಲ. ಶಿಲ್ಪಾ ಹಾಗು ರಾಜಶೇಖರ್ ಕುಟುಂಬ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕುಟುಂಬಸ್ಥರು ನಾಪತ್ತೆಯ ಬಗ್ಗೆ ದೂರನ್ನೂ ನೀಡಿದ್ದರು.

ಪೋಷಕರು, ಮಗು ಹಾಗು ಕುಟುಂಬದ ಜವಾಬ್ದಾರಿಯ ನೊಗ ಶಿಲ್ಪಾರ ಹೆಗಲ ಮೇಲಿತ್ತು. ಸ್ಥಳೀಯ ಸೈಬರ್ ಕೆಫೆಯೊಂದರಲ್ಲಿ ಅವರು ಕೆಲಸಕ್ಕೆ ಸೇರಿದರು. ನಂತರ ಅಂಗಡಿಯೊಂದರಲ್ಲಿ ಕೆಲಸ ಮಾಡಿದರು. ಆದರೆ ಅಲ್ಲಿ ಸಿಗುತ್ತಿದ್ದ 6000 ರೂ. ಯಾವುದೇ ಖರ್ಚಿಗೂ ಸಾಕಾಗಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಶಿಲ್ಪಾ ಮೊಬೈಲ್ ಕ್ಯಾಂಟೀನೊಂದನ್ನು ಆರಂಭಿಸಿದರು. ಶಿಲ್ಪಾ ಒಳ್ಳೆಯ ಅಡುಗೆ ಮಾಡುತ್ತಿದ್ದುದನ್ನು ಸಂಬಂಧಿಕರು ಒಂದು ಬಾರಿ ಹೊಗಳಿದ್ದರು. ಉತ್ತರ ಕರ್ನಾಟಕದ ಆಹಾರಗಳನ್ನು ಮಂಗಳೂರಿನ ಗ್ರಾಹಕರಿಗೆ ಒದಗಿಸುವಂತೆ ಪ್ರೇರೇಪಿಸಿದರು.

ತನ್ನ ಸಹೋದರನ ಮನವೊಲಿಸಿದ ಶಿಲ್ಪಾ ಮಗುವಿನ ಶಿಕ್ಷಣಕ್ಕಾಗಿ ಇಟ್ಟಿದ್ದ ಒಂದು ಲಕ್ಷ ರೂ.ಗಳ ಸಹಾಯದಿಂದ ಮಹೀಂದ್ರಾ ಬೊಲೆರೊ ಪಿಕ್ ಅಪ್ ಒಂದನ್ನು ಖರೀದಿಸಿ, ಮೊಬೈಲ್ ಕ್ಯಾಂಟೀನನ್ನು ಆರಂಭಿಸಿದರು.

ಈ ರೀತಿಯ ಸಾಹಸಕ್ಕಿಳಿದ ಶಿಲ್ಪಾರ ನಿರ್ಧಾರ ಸರಿಯಿಲ್ಲ ಎಂದು ಮೊದಮೊದಲು ಹಲವರು ಹೇಳಿದ್ದರೂ ನಂತರ ಶಿಲ್ಪಾರ ಮೊಬೈಲ್ ಕ್ಯಾಂಟೀನ್ ಜನಪ್ರಿಯವಾಯಿತು. 2015ರಲ್ಲಿ ಆರಂಭಗೊಂಡ ಈ ಉದ್ಯಮ ಇಂದು ಯಶಸ್ಸಿನತ್ತ ಮುಖ ಮಾಡಿದೆ. ಪ್ರತಿದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರಿಗೆ ಶಿಲ್ಪಾ ಅವರ ಮೊಬೈಲ್ ಕ್ಯಾಂಟೀನ್ ಗ್ರಾಹಕರಿಗೆ ಉತ್ತರ ಕರ್ನಾಟಕದ ಆಹಾರಗಳನ್ನು ನೀಡುತ್ತದೆ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಶಿಲ್ಪಾರ ‘ಹಳ್ಳಿ ಮನೆ ರೊಟ್ಟಿಸ್’ ವಾಹನ ನಿಂತಿರುತ್ತದೆ.

ಶಿಲ್ಪಾರ ಕಥೆಯನ್ನು ನ್ಯೂಸ್ ಮಿನಿಟ್ ವರದಿ ಮಾಡಿದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಮಹೀಂದ್ರಾ ಕಂಪೆನಿಯ ಸಿಇಒ ಆನಂದ್ ಮಹೀಂದ್ರಾ ಈ ಬಗ್ಗೆ ಟ್ವೀಟ್ ಮಾಡಿ ಶಿಲ್ಪಾರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

“ಉದ್ಯಮ ರಂಗದ ಅದ್ಭುತ ಕಥೆಯಿದು. ಬೊಲೆರೊ ಕೂಡ ಈ ಕಥೆಯಲ್ಲಿ ಸಣ್ಣ ಪಾತ್ರ ವಹಿಸಿದ್ದರಿಂದ ನಾನು ಸಂತೋಷಗೊಂಡಿದ್ದೇನೆ. ಅವರು ಇನ್ನೊಂದು ಮೊಬೈಲ್ ಕ್ಯಾಂಟೀನ್ ತೆರೆಯಲು ಆಲೋಚಿಸುತ್ತಿದ್ದರೆ ಬೊಲೆರೂ ವಾಹನವೊಂದನ್ನು ನೀಡುವ ಮೂಲಕ ನಾನು ವೈಯಕ್ತಿಕವಾಗಿ ಅವರ ಉದ್ದಿಮೆಯಲ್ಲಿ ಹೂಡಿಕೆ ಮಾಡುತ್ತೇನೆ” ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾರ ಪ್ರತಿಕ್ರಿಯೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಸಾಮಾನ್ಯ ಮಹಿಳೆಯೊಬ್ಬರು ತನ್ನ ಪರಿಶ್ರಮ ಹಾಗು ಕೆಲಸದ ಮೇಲಿಟ್ಟಿದ್ದ ನಂಬಿಕೆ ಇಂದು ಅವರನ್ನು ಸಾಧನೆಯ ಉತ್ತುಂಗಕ್ಕೇರುವಂತೆ ಮಾಡಿದೆ. ತನ್ನಿಂದ ಸಾಧ್ಯವಾಗದು, ಕಷ್ಟಗಳನ್ನು ಎದುರಿಸುವುದು ತುಂಬಾ ಕಷ್ಟ ಎಂದು ಆಲೋಚಿಸುವವರಿಗೆ ಶಿಲ್ಪಾ ಎಂದಿಗೂ ಮಾದರಿಯಾಗಿರುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News