ರಣಜಿ ಟ್ರೋಫಿ ನನ್ನ ಪಾಲಿಗೆ ಸರ್ವಶ್ರೇಷ್ಠ: ಫೈಝ್ ಫಝಲ್

Update: 2018-01-02 18:30 GMT

ಇಂದೋರ್, ಜ.2: ‘‘ವಿದರ್ಭ ತಂಡ ಮೊದಲ ಬಾರಿ ರಣಜಿ ಟ್ರೋಫಿ ಗೆಲ್ಲುವತ್ತ ತಂಡವನ್ನು ನಾಯಕನಾಗಿ ಮುನ್ನಡೆಸಿರುವುದು ವೃತ್ತಿಜೀವನದ ಬಹುದೊಡ್ಡ ಸಾಧನೆ. ಇದು ಝಿಂಬಾಬ್ವೆ ವಿರುದ್ಧ ಏಕೈಕ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕಿಂತಲೂ ಮಿಗಿಲಾದುದು’’ ಎಂದು ವಿದರ್ಭ ನಾಯಕ ಫೈಝ್ ಫಝಲ್ ಅಭಿಪ್ರಾಯಪಟ್ಟರು.

ದಿಲ್ಲಿ ವಿರುದ್ಧ ರಣಜಿ ಟ್ರೋಫಿ ಫೈನಲ್‌ನಲ್ಲಿ 9 ವಿಕೆಟ್‌ಗಳ ಜಯ ಸಾಧಿಸಿರುವ ವಿದರ್ಭ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ನೂತನ ಅಧ್ಯಾಯ ತೆರೆದಿದೆ.

ಫಝಲ್ 2016ರಲ್ಲಿ ಝಿಂಬಾಬ್ವೆ ಪ್ರವಾಸಕೈಗೊಂಡಿದ್ದ ಎರಡನೇ ದರ್ಜೆಯ ಭಾರತ ತಂಡದ ಸದಸ್ಯರಾಗಿದ್ದರು. ತಾನಾಡಿರುವ ಏಕೈಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ 32ರ ಹರೆಯದ ಎಡಗೈ ಬ್ಯಾಟ್ಸ್ ಮನ್ ಅರ್ಧಶತಕ ಸಿಡಿಸಿದ್ದರು.

‘‘ರಣಜಿ ಟ್ರೋಫಿ ಜಯಿಸಿರುವುದು ನನ್ನ ವೃತ್ತಿಜೀವನದ ದೊಡ್ಡ ಸಾಧನೆ. ಟ್ರೋಫಿ ಜಯಿಸಲು ಇಡೀ ತಂಡದ ಪರಿಶ್ರಮವಿದೆ. ವಯೋಮಿತಿ ಕ್ರಿಕೆಟ್‌ನಲ್ಲಿ ನಾನು ವಿದರ್ಭ ತಂಡದ ನಾಯಕನಾಗಿದ್ದೆ. ರಣಜಿಯಲ್ಲಿ ತಂಡವನ್ನು ಮುನ್ನಡೆಸುವುದು ಸುಲಭದ ಮಾತಲ್ಲ’’ ಎಂದರು.

ವಿದರ್ಭ ಚೊಚ್ಚಲ ಪ್ರಶಸ್ತಿ ಗೆಲುವಿನ ರೂವಾರಿಗಳು

►ಫೈಝ್ ಫಝಲ್: ವಿದರ್ಭ ನಾಯಕ ಫೈಝ್ ಫಝಲ್ ರಣಜಿ ಟ್ರೋಫಿಯಲ್ಲಿ ಒಟ್ಟು 912 ರನ್ ಗಳಿಸುವ ಮೂಲಕ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರು. ಸೆಮಿಫೈನಲ್ ಹೊರತುಪಡಿಸಿ ಟೂರ್ನಿಯ ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದ್ದರು. ಈ ಋತುವಿನ ರಣಜಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಫಝಲ್ ಎರಡನೇ ಸ್ಥಾನದಲ್ಲಿದ್ದಾರೆ.

►ರಜನೀಶ್ ಗುರ್ಬಾನಿ: 

ಬಲಗೈ ವೇಗದ ಬೌಲರ್ ಗುರ್ಬಾನಿ ವರ್ಷದ ಆಟಗಾರನಾಗಿ ಹೊರಹೊಮ್ಮಿದ್ದು, ನಾಕೌಟ್ ಹಂತದಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ್ದರು. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಕರ್ನಾಟಕ ವಿರುದ್ಧದ ಸೆಮಿಫೈಲ್‌ನಲ್ಲಿ ಜೀವನಶ್ರೇಷ್ಠ ಬೌಲಿಂಗ್(7/58) ಮಾಡಿದ್ದರು. ಫೈನಲ್‌ನಲ್ಲಿ ಹ್ಯಾಟ್ರಿಕ್ ಸಹಿತ 59 ರನ್‌ಗೆ 6 ವಿಕೆಟ್‌ಗಳನ್ನು ಕಬಳಿಸಿ ದಿಲ್ಲಿಯ ಪ್ರಶಸ್ತಿ ಕನಸನ್ನು ಭಗ್ನಗೊಳಿಸಿದ್ದರು. ಮೂರು ನಾಕೌಟ್ ಪಂದ್ಯಗಳಲ್ಲಿ ಒಟ್ಟು 27 ವಿಕೆಟ್‌ಗಳನ್ನು ಕಬಳಿಸಿರುವ ಗುರ್ಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

►ಗಣೇಶ್ ಸತೀಶ್:

ಗಣೇಶ್ ಸತೀಶ್ ವಿದರ್ಭದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದು, ತವರು ರಾಜ್ಯಕರ್ನಾಟಕ ವಿರುದ್ಧ ಸೆಮಿಫೈನಲ್‌ನಲ್ಲಿ ನಿರ್ಣಾಯಕ 81 ರನ್ ಗಳಿಸಿದ್ದರು. ಬಲಗೈ ಬ್ಯಾಟ್ಸ್ ಮನ್ ಪಂಜಾಬ್ ವಿರುದ್ಧ 164 ರನ್ ಗಳಿಸಿದ್ದರು. ಫೈನಲ್‌ನಲ್ಲಿ 79 ರನ್ ಗಳಿಸಿ ವಿದರ್ಭ 547 ರನ್ ಗಳಿಸಲು ನೆರವಾಗಿದ್ದರು. 4ನೇ ದಿನದಾಟದಲ್ಲಿ 3 ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News