ಅನೈತಿಕ ಪೊಲೀಸರ ಕೈಯಲ್ಲಿ ದ.ಕ.ಜಿಲ್ಲೆ

Update: 2018-01-03 05:03 GMT

ಒಂದು ಕಾಲದಲ್ಲಿ ಶಿವರಾಮ ಕಾರಂತ, ಗೋವಿಂದ ಪೈ ಮೊದಲಾದ ಖ್ಯಾತನಾಮರಿಗಾಗಿ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಸುದ್ದಿಯಲ್ಲಿತ್ತು. ತನ್ನ ಭಿನ್ನ ಸಂಸ್ಕೃತಿ, ಭಾಷೆ, ಪ್ರಬುದ್ಧತೆಯ ದೆಸೆಯಿಂದ ದಕ್ಷಿಣ ಕನ್ನಡಿಗರ ಕುರಿತಂತೆ ರಾಷ್ಟ್ರಮಟ್ಟದಲ್ಲಿ ಒಂದು ಸದಭಿಪ್ರಾಯ, ಹೆಮ್ಮೆಯಿತ್ತು. ಆದರೆ ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ತನ್ನ ಆ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಅಮಾನವೀಯ ಕಾರಣಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಪದೇ ಪದೇ ಸುದ್ದಿಯಾಗುತ್ತಿದೆ. ಮಂಗಳೂರು ಪಬ್ ಮೇಲಿನ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಾನ ರಾಷ್ಟ್ರ ಮಟ್ಟದ ಟಿವಿ ಚಾನೆಲ್‌ಗಳಲ್ಲಿ ಹರಾಜಾಗಿ ಹೋಯಿತು.

ಆ ದಿನಗಳ ಬಳಿಕ ಇಂತಹದ್ದೇ ಕಾರಣಗಳಿಗಾಗಿ ಕರಾವಳಿಯು ಮಾಧ್ಯಮಗಳಲ್ಲಿ ಮಿಂಚುತಿದೆ. ಸಂಸ್ಕೃತಿ, ಧರ್ಮದ ವೇಷದಲ್ಲಿ ಬೀದಿಗಳಲ್ಲಿ ಗೂಂಡಾಗಳು, ದುಷ್ಕರ್ಮಿಗಳು ಓಡಾಡುತ್ತಿದ್ದಾರೆ. ಸಜ್ಜನರು ಇವರ ವಿರುದ್ಧ ಬಾಯಿ ತೆರೆಯುವುದಕ್ಕೆ ಭಯಪಡುವಂತಹ ಸನ್ನಿವೇಶ ಎದುರಾಗಿದೆ. ಅಭಿವೃದ್ಧಿಗಾಗಿ ಸುದ್ದಿಯಲ್ಲಿದ್ದ ಮಂಗಳೂರಿಗೆ ಇಂದು ಉದ್ಯಮಿಗಳು ಕಾಲಿಡಲು ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ದೂರ ಪ್ರದೇಶದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ಒಂದು ಘಟನೆ ನಡೆಯಿತು. ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಚಿತ್ರ ನಟಿಯೊಬ್ಬಳು, ತನ್ನ ಪರಿಚಿತ ಕಲಾವಿದನೊಂದಿಗೆ ಮಾತನಾಡುತ್ತಿದ್ದುದು ಗೊತ್ತಾಗಿ, ಸಂಸ್ಕೃತಿ ರಕ್ಷಕರ ವೇಷದಲ್ಲಿದ್ದ ಸಂಘಪರಿವಾರದ ಗೂಂಡಾಗಳು ದಾಳಿ ನಡೆಸಿದರು.

ಇದರಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಯುವಕನ ಮೇಲೆ ಇವರು ಬರ್ಬರವಾಗಿ ದಾಳಿ ನಡೆಸಿದರು. ಯುವತಿಯ ಜೊತೆಗೂ ಅಮಾನವೀಯವಾಗಿ ವರ್ತಿಸಿದರು. ಈ ಗೂಂಡಾಗಳಿಂದ ಕಲಾವಿದರನ್ನು ರಕ್ಷಿಸುವುದು ಸ್ಥಳೀಯ ಪೊಲೀಸರ ಹೊಣೆಗಾರಿಕೆಯಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಖಾಕಿಯ ಮರೆಯಲ್ಲಿಯೂ ಈ ಸಂಘಪರಿವಾರದ ಗೂಂಡಾಗಳು ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದು ಈ ಘಟನೆಯಲ್ಲಿ ಬಹಿರಂಗವಾಯಿತು. ಸುಬ್ರಹ್ಮಣ್ಯದಲ್ಲಿ ಅಮಾಯಕ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳು ವರ್ತಿಸಿರುವುದಕ್ಕಿಂತಲೂ ಭೀಕರವಾಗಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎನ್ನುವ ಅಂಶ ಇದೀಗ ಹೊರಬಿದ್ದಿದೆ. ಸಂತ್ರಸ್ತರು ಈ ಭೀಕರ ಘಟನೆಗಳನ್ನು ಸಾಮಾಜಿಕ ತಾಣಗಳಲ್ಲೂ ಹಂಚಿಕೊಂಡಿದ್ದಾರೆ. ಗೂಂಡಾಗಳು, ದುಷ್ಕರ್ಮಿಗಳು ಕಾನೂನು ವ್ಯವಸ್ಥೆಯನ್ನು ಉಲ್ಲಂಘಿಸುವುದಕ್ಕೆಂದೇ ಇರುವವರು.

ಕರಾವಳಿಯಲ್ಲಿ ಸಂಘಪರಿವಾರದ ಗೂಂಡಾಗಿರಿ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಆದರೆ, ಪೊಲೀಸರೇ ಈ ದುಷ್ಕರ್ಮಿಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದರೆ? ಅಮಾಯಕರನ್ನು ರಕ್ಷಿಸಬೇಕಾದ ಪೊಲೀಸರು ಈ ಗೂಂಡಾಗಳ ಆಪ್ತರಂತೆ ವರ್ತಿಸಿದ್ದಾರೆ. ದುಷ್ಕರ್ಮಿಗಳು ಯುವಕನಿಗೆ ಹಲ್ಲೆ ನಡೆಸಿ ಆತನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಹಲ್ಲೆ ನಡೆಸುವ ಅಧಿಕಾರ ಯಾವ ಕಾರಣಕ್ಕೂ ದುಷ್ಕರ್ಮಿಗಳಿಗೆ ಕಾನೂನು ನೀಡಿಲ್ಲ. ಆದುದರಿಂದ, ಹಲ್ಲೆ ನಡೆಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಪೊಲೀಸರ ಕರ್ತವ್ಯವಾಗಿತ್ತು. ಆದರೆ, ಅದಕ್ಕೆ ಬದಲಾಗಿ ಹಲ್ಲೆ ಗೀಡಾದ ಯುವಕನ ಮೇಲೆಯೇ ಪೊಲೀಸರು ಬರ್ಬರವಾಗಿ ಮತ್ತೆ ದೌರ್ಜನ್ಯವೆಸಗಿದರು. ಸಂತ್ರಸ್ತ ಹೇಳುವಂತೇ ಇಡೀ ರಾತ್ರಿ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಆತನನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್ ಠಾಣೆಗೆ ಆಗಮಿಸಿದ ದುಷ್ಕರ್ಮಿಗಳು ಪೊಲೀಸರ ಎದುರೇ ಈ ಯುವಕನಿಗೆ ಮತ್ತೆ ಹಲ್ಲೆ ಮಾಡಿದ್ದಾರೆ. ಅಂದರೆ ಇಲ್ಲಿ ಪೊಲೀಸರು ಯಾರು, ಸಂಘಪರಿವಾರದ ಗೂಂಡಾಗಳು ಯಾರು? ಎನ್ನುವುದನ್ನು ಸಂತ್ರಸ್ತ ಯುವಕನಿಗೆ ಗುರುತಿಸುವುದೇ ಕಷ್ಟವಾಗಿತ್ತು.

ಯುವತಿಯ ಮೇಲೂ ದೌರ್ಜನ್ಯ ನಡೆದಿದೆ. ಬೆದರಿಕೆ ಹಾಕಲಾಗಿದೆ. ಬಲವಂತವಾಗಿ ಪೊಲೀಸರು ತಪ್ಪೊಪ್ಪಿಗೆಯನ್ನು ಪಡೆದಿದ್ದಾರೆ. ಎರಡನೆ ಘಟನೆ, ಮಂಗಳವಾರ ಮಂಗಳೂರಿನ ಪ್ರವಾಸಿ ಕೇಂದ್ರವಾಗಿರುವ ಪಿಲಿಕುಳದಲ್ಲಿ ನಡೆದಿದೆ. ಕಾಲೇಜೊಂದರ ಯುವಕ, ಯುವತಿಯರು ಪಿಲಿಕುಳವನ್ನು ವೀಕ್ಷಿಸುವುದಕ್ಕೆಂದು ಹೋಗಿದ್ದಾರೆ. ಬೇರೆ ಬೇರೆ ಸಮುದಾಯದ ಯುವಕ, ಯುವತಿಯರು ಈ ಗುಂಪಿನಲ್ಲಿದ್ದರು. ಸಂಘಪರಿವಾರದ ಕಾರ್ಯಕರ್ತರು ಇವರನ್ನು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲ, ಯುವತಿಯ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಬಂದು ಈ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನೇ ಠಾಣೆಗೆ ಒಯ್ದಿದ್ದಾರೆ. ವಿಪರ್ಯಾಸವೆಂದರೆ, ಇಲ್ಲೂ ಪೊಲೀಸರ ಸಮ್ಮುಖದಲ್ಲೇ ಸಂಘಪರಿವಾರದ ದುಷ್ಕರ್ಮಿಯೊಬ್ಬ ವಿದ್ಯಾರ್ಥಿನಿಗೆ ಥಳಿಸುವುದು ವೀಡಿಯೊದಲ್ಲಿ ಚಿತ್ರೀಕರಣವಾಗಿದೆ.

ಥಳಿಸಿದಾತನಿಗೂ ಕಾನೂನು ವ್ಯವಸ್ಥೆಗೂ ಯಾವ ಸಂಬಂಧವೂ ಇರಲಿಲ್ಲ. ಜೊತೆಗೆ ಯುವತಿಯ ಮೇಲೆ ಕೈ ಮಾಡುವಂತಹ ಯಾವ ಅಧಿಕಾರವೂ ಈತನಿಗಿರಲಿಲ್ಲ. ಈತ ಯುವತಿಯ ಪೋಷಕನಲ್ಲ, ಯುವತಿಯ ಸಂಬಂಧಿಕನೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯುವತಿಯ ಪರಿಚಯವೂ ಇಲ್ಲ. ಹೀಗಿರುವಾಗ, ಒಬ್ಬ ಅಪರಿಚಿತನಿಗೆ ಇನ್ನೊಬ್ಬ ಯುವತಿಯ ಮೇಲೆ ಹಲ್ಲೆ ನಡೆಸುವ, ಇನ್ನೊಬ್ಬ ಯುವತಿ ಯಾರ ಜೊತೆ ಬೆರೆಯಬೇಕು, ಬೆರೆಯಬಾರದು ಎಂದು ನಿರ್ದೇಶಿಸುವ ಹಕ್ಕನ್ನು ನೀಡಿದವರು ಯಾರು? ತಮ್ಮ ಮುಂದೆಯೇ ಯುವತಿಯ ಮೇಲೆ ಹಲ್ಲೆ ನಡೆಸಲು ಪೊಲೀಸರು ಆ ದುಷ್ಕರ್ಮಿಗೆ ಯಾಕೆ ಅವಕಾಶ ನೀಡಿದರು? ಅಂದರೆ ಈ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವುದು ಪೊಲೀಸರ ಸಮ್ಮತಿಯಿಂದಲೇ ಎಂದಾಯಿತಲ್ಲವೇ? ಸರಿ, ತಕ್ಷಣ ಹಲ್ಲೆ ಮಾಡಿದ ಯುವಕರನ್ನು ಬಂಧಿಸಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಪೊಲೀಸರ ಕರ್ತವ್ಯ. ಆದರೆ ಎಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಪೊಲೀಸರು ಕೊನೆಯವರೆಗೂ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ.

ಆದರೆ ವಿದ್ಯಾರ್ಥಿನಿಯರ ಪೋಷಕರು ಪೊಲೀಸ್ ಠಾಣೆಗೆ ಬಂದು ನಮ್ಮ ಸಮ್ಮತಿಯಿಂದಲೇ ವಿದ್ಯಾರ್ಥಿನಿಯರು ಪಿಲಿಕುಳಕ್ಕೆ ಹೋಗಿದ್ದಾರೆ ಎಂದಾಗ ಪೊಲೀಸರು ಕಕ್ಕಾಬಿಕ್ಕಿಯಾದರು. ಯುವತಿಯರಲ್ಲಿ ಒಬ್ಬಳು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದಾಕೆ. ಅಕೆಯ ಪೋಷಕರೂ ದುಷ್ಕರ್ಮಿಗಳ ವಿರುದ್ಧ ದೂರನ್ನು ನೀಡಿದರು. ಯುವತಿಯರ ಪೋಷಕರು ತಮ್ಮ ಮಕ್ಕಳ ಜೊತೆಗೆ ಬಲವಾಗಿ ನಿಂತ ಕಾರಣ ಅನಿರ್ವಾಯವಾಗಿ ಸಂಘಪರಿವಾರದ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡರು. ಮೇಲಿನ ಎರಡೂ ಘಟನೆಗಳಿಂದ ದಕ್ಷಿಣ ಕನ್ನಡದ ಕಾನೂನು ಉಲ್ಲಂಘನೆಗಳ ನಿಜವಾದ ಸಮಸ್ಯೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಕಾನೂನು ಉಲ್ಲಂಘಿಸುವ ದುಷ್ಕರ್ಮಿಗಳು, ಗೂಂಡಾಗಳ ಜೊತೆಗೆ ಪೊಲೀಸರು ಅನೈತಿಕ ಸಂಬಂಧವನ್ನು ಹೊಂದಿರುವುದೇ ಇಲ್ಲಿ ಅನೈತಿಕ ಪೊಲೀಸರು ಬೀದಿ ಬೀದಿಗಳಲ್ಲಿ ಸ್ವಚ್ಛಂದ ತಿರುಗಾಡುವುದಕ್ಕೆ ಸಾಧ್ಯವಾಗಿದೆ.

ಆದುದರಿಂದ ಹೊರಗಡೆ ಇರುವ ದುಷ್ಕರ್ಮಿಗಳು, ಗೂಂಡಾಗಳನ್ನು ಸರಿಪಡಿಸುವ ಮೊದಲು ತನ್ನ ಇಲಾಖೆಯ ಒಳಗಿರುವ ಸಂಘಪರಿವಾರವನ್ನು ಶುಚೀಕರಿಸುವ ಅಗತ್ಯ ಎದ್ದು ಕಾಣುತ್ತಿದೆ. ಇಂದು ಸಂಸ್ಕೃತಿ ರಕ್ಷಕರು ಎಂದು ಕರೆಸಿಕೊಂಡು ಯುವತಿ, ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ದುಷ್ಕರ್ಮಿಗಳ ಹಿನ್ನೆಲೆ ನೋಡಿದರೆ ತಲೆತಗ್ಗಿಸಬೇಕು. ಒಂದಲ್ಲ ಒಂದು ಗೂಂಡಾಗಿರಿ ಪ್ರಕರಣಗಳಲ್ಲಿ ಇವರು ಗುರುತಿಸಿಕೊಂಡವರು. ಹಗಲಲ್ಲಿ ಸಂಸ್ಕೃತಿ ರಕ್ಷಕರಂತೆ ಓಡಾಡುವ ಇವರ ರಾತ್ರಿಯ ದಂಧೆಯೇ ಬೇರೆಯಿದೆ. ಹಪ್ತಾ ವಸೂಲಿ, ಬೆದರಿಕೆ, ಜೂಜಾಟ, ಕುಡಿತ, ದರೋಡೆ ಇತ್ಯಾದಿಗಳೇ ಇವರ ಸಂಸ್ಕೃತಿ. ಇಂತಹ ಹಿನ್ನೆಲೆ ಇರುವ ಜನರು, ಸುಸಂಸ್ಕೃತ ಮನೆತನಗಳಿಂದ ಬರುವ ಯುವಕ ಯುವತಿಯರಿಗೆ ಸಂಸ್ಕೃತಿಯನ್ನು ಕಲಿಸಲು ಹೊರಡುವುದೇ ಸಂಸ್ಕೃತಿಗೆ ಮಾಡುವ ಅತಿ ದೊಡ್ಡ ಅವಮಾನ.

ಇಂತಹ ಹಿನ್ನೆಲೆಯಿರುವ ಜನರ ಜೊತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಅನೈತಿಕ ಸಂಬಂಧವನ್ನು ಹೊಂದಿರುವುದು ಈ ನಾಡಿನ ಖಾಕಿ ಬಟ್ಟೆ ಹೊಲಸೆದ್ದಿರುವುದಕ್ಕೆ ಸಾಕ್ಷಿಯಾಗಿದೆ. ಆದುದರಿಂದ ಪೊಲೀಸ್ ಇಲಾಖೆಯ ಮುಖ್ಯಸ್ಥರು, ಇಂತಹ ಸಿಬ್ಬಂದಿಯನ್ನು ಗುರುತಿಸಿ ಬಟ್ಟೆಯನ್ನು ಕಳಚಿ, ಅವರನ್ನು ಸೇರಬೇಕಾದ ಜಾಗಕ್ಕೆ ಸೇರಿಸಬೇಕು. ಅಷ್ಟಾದರೆ, ಪೊಲೀಸ್ ಇಲಾಖೆಯ ಕುರಿತಂತೆ ಈ ದುಷ್ಕರ್ಮಿಗಳಿಗೂ ಭಯ, ಗೌರವ ಸೃಷ್ಟಿಯಾಗುತ್ತದೆ. ಇಂತಹ ಕೃತ್ಯಕ್ಕೆ ಇಳಿಯುವುದಕ್ಕೆ ಸಾವಿರ ಬಾರಿ ಯೋಚಿಸತೊಡಗುತ್ತಾರೆ. ಆದುದರಿಂದ ತಕ್ಷಣ ಸರಕಾರ ಪೊಲೀಸ್ ಇಲಾಖೆಯ ಒಳಗನ್ನು ಸರಿಪಡಿಸಲು ಮುಂದಾಗಬೇಕು. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಕ್ರಿಮಿನಲ್‌ಗಳ ಆವಾಸಸ್ಥಾನವಾಗುವುದನ್ನು ತಪ್ಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News