ಫೆಲೆಸ್ತೀನ್‌ಗೆ ಆರ್ಥಿಕ ನೆರವು ನಿಲ್ಲಿಸುವೆ: ಡೊನಾಲ್ಡ್ ಟ್ರಂಪ್ ಬೆದರಿಕೆ

Update: 2018-01-03 16:51 GMT

ವಾಶಿಂಗ್ಟನ್, ಜ. 3: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ತನ್ನ ಪ್ರಯತ್ನಗಳು ಸ್ಥಗಿತಗೊಂಡಿವೆ ಎಂಬುದನ್ನು ಮಂಗಳವಾರ ಒಪ್ಪಿಕೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೆಲೆಸ್ತೀನ್ ಪ್ರಾಧಿಕಾರಕ್ಕೆ ನೀಡಲಾಗುತ್ತಿರುವ ಅಮೆರಿಕದ ನೆರವು ಹಣವನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ.

ಫೆಲೆಸ್ತೀನೀಯರು ಶಾಂತಿ ಮಾತುಕತೆಗೆ ಒಪ್ಪುತ್ತಿಲ್ಲ ಎಂದ ಮೇಲೆ, ಅಮೆರಿಕ ಈ ಬೃಹತ್ ಪ್ರಮಾಣದ ಆರ್ಥಿಕ ನೆರವನ್ನು ಯಾಕೆ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಅಮೆರಿಕ ಫೆಲೆಸ್ತೀನ್‌ಗೆ ವರ್ಷಕ್ಕೆ ನೂರಾರು ಕೋಟಿ ಡಾಲರ್‌ಗಳನ್ನು ನೀಡುತ್ತಿದೆ, ಆದರೆ, ಅದಕ್ಕೆ ಪ್ರತಿಯಾಗಿ ಕೃತಜ್ಞತೆಯಾಗಲಿ, ಗೌರವವಾಗಲಿ ಅದಕ್ಕೆ ಸಿಕ್ಕಿಲ್ಲ ಎಂದು ಎರಡು ಟ್ವೀಟ್‌ಗಳಲ್ಲಿ ಟ್ರಂಪ್ ಹೇಳಿದ್ದಾರೆ.

‘‘ಇಸ್ರೇಲ್ ಜೊತೆ ಯಾವಾಗಲೋ ನಡೆಯಬೇಕಿದ್ದ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಭಾಗವಹಿಸಲು ಅವರು ಬಯಸುತ್ತಿಲ್ಲ’’ ಎಂದು ಅವರು ದೂರಿದ್ದಾರೆ.

ಅಮೆರಿಕವು ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಪರಿಗಣಿಸುವುದು ಹಾಗೂ ತನ್ನ ರಾಯಭಾರ ಕಚೇರಿಯನ್ನು ಅಲ್ಲಿಗೆ ವರ್ಗಾಯಿಸುವುದು ಎಂಬುದಾಗಿ ಟ್ರಂಪ್ ಡಿಸೆಂಬರ್‌ನಲ್ಲಿ ಘೋಷಿಸಿದ ಬಳಿಕ ಫೆಲೆಸ್ತೀನೀಯರು ಅಮೆರಿಕದ ವಿರುದ್ಧ ತಿರುಗಿಬಿದ್ದಿದ್ದಾರೆ.

ಜೆರುಸಲೇಮನ್ನು ಭವಿಷ್ಯದ ಫೆಲೆಸ್ತೀನ್ ರಾಷ್ಟ್ರದ ರಾಜಧಾನಿಯಾಗಿ ಮಾಡುವ ಯೋಜನೆಯನ್ನು ಫೆಲೆಸ್ತೀನೀಯರು ಹೊಂದಿದ್ದರು.

ಟ್ರಂಪ್ ಪರವಾಗಿ ಅವರ ಅಳಿಯ ಜ್ಯಾರೆಡ್ ಕಶ್ನರ್ ಮಧ್ಯಪ್ರಾಚ್ಯ ಶಾಂತಿ ಮಾತುಕತೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಮಾತುಕತೆಗಳನ್ನು ಮುಂದುವರಿಸಿಕೊಂಡು ಹೋಗಲು ಟ್ರಂಪ್ ತನ್ನ ಮಾಜಿ ಅಟಾರ್ನಿ ಜ್ಯಾಸನ್ ಗ್ರೀಣ್‌ಬ್ಲಾಟ್‌ರನ್ನೂ ಶ್ವೇತಭವನಕ್ಕೆ ಕರೆದುಕೊಂಡು ಬಂದಿದ್ದರು. ಟ್ರಂಪ್‌ರ ಮಧ್ಯಪ್ರಾಚ್ಯ ಶಾಂತಿ ತಂಡವು ಇಸ್ರೇಲ್, ಫೆಲೆಸ್ತೀನ್ ಮತ್ತು ಅರಬ್ ನಾಯಕರೊಂದಿಗೆ ಮಾತುಕತೆಗಳನ್ನು ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News