ನಾವು ಬ್ಲ್ಯಾಕ್‌ಮೇಲ್‌ಗೆ ಬಗ್ಗುವುದಿಲ್ಲ: ಟ್ರಂಪ್ ಗೆ ಫೆಲೆಸ್ತೀನ್ ನ ನಾಯಕಿ ಹನನ್ ತಿರುಗೇಟು
ಜೆರುಸಲೇಮ್, ಜ. 3: ಫೆಲೆಸ್ತೀನ್ ಪ್ರಾಧಿಕಾರಕ್ಕೆ ಅಮೆರಿಕ ನೀಡುತ್ತಿರುವ ಆರ್ಥಿಕ ನೆರವನ್ನು ನಿಲ್ಲಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬೆದರಿಕೆಯ ಬಗ್ಗೆ ಫೆಲೆಸ್ತೀನ್‌ನ ಹಿರಿಯ ನಾಯಕಿ ಹನನ್ ಅಶ್ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವ ಮೂಲಕ ಶಾಂತಿಯ ಪಂಚಾಂಗವನ್ನೇ ಟ್ರಂಪ್ ಒಬ್ಬಂಟಿಯಾಗಿ ಹಾಳುಗೆಡವಿದರು ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅಶ್ರವಿ ಹೇಳಿದ್ದಾರೆ.
ಟ್ರಂಪ್ ಮಾಡಿರುವ ಟ್ವೀಟ್‌ಗಳನ್ನು ‘ಬ್ಲ್ಯಾಕ್‌ಮೇಲ್’ ಎಂಬುದಾಗಿ ಬಣ್ಣಿಸಿರುವ ಅವರು, ‘ಫೆಲೆಸ್ತೀನೀಯರು ಬ್ಲ್ಯಾಕ್‌ಮೇಲ್‌ಗೆ ಒಳಗಾಗುವುದಿಲ್ಲ’ ಎಂದರು.
‘‘ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿನ ನಮ್ಮ ಶೋಧವನ್ನು ಟ್ರಂಪ್ ಬುಡಮೇಲುಗೊಳಿಸಿದ್ದಾರೆ’’ ಎಂದು ಅಶ್ರವಿ ಹೇಳಿದರು.
1990ರ ದಶಕದ ಮಧ್ಯ ಭಾಗದ ಬಳಿಕ ಅಮೆರಿಕವು ಫೆಲೆಸ್ತೀನ್ ಗೆ ಆರ್ಥಿಕ ಮತ್ತು ಭದ್ರತಾ ನಿಧಿಯಾಗಿ 500 ಕೋಟಿ ಡಾಲರ್ (ಸುಮಾರು 31,750 ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ನೀಡಿದೆ.