ಅಮೆರಿಕದಿಂದ ಅರಾಜಕತೆಗೆ ಪ್ರೋತ್ಸಾಹ: ವಿಶ್ವಸಂಸ್ಥೆಗೆ ಇರಾನ್ ದೂರು
ವಿಶ್ವಸಂಸ್ಥೆ, ಜ. 4: ಇರಾನ್ ಸರಕಾರದ ವಿರುದ್ಧದ ಪ್ರತಿಭಟನಕಾರರಿಗೆ ಬೆಂಬಲ ನೀಡುವ ಮೂಲಕ ಅಂತಾರಾಷ್ಟ್ರೀಯ ಸಂಬಂಧಗಳ ಪ್ರತಿಯೊಂದು ಮಿತಿಯನ್ನು ಅಮೆರಿಕ ದಾಟಿದೆ ಎಂದು ಇರಾನ್ ಗುರುವಾರ ಆರೋಪಿಸಿದೆ ಹಾಗೂ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ಅಸಂಬದ್ಧ ಟ್ವೀಟ್’ಗಳು ಅರಾಜಕತೆಗೆ ಪ್ರೋತ್ಸಾಹ ನೀಡಿವೆ ಎಂದು ಹೇಳಿದೆ.
ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಅಸಹ್ಯ ರೂಪದಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ಸಲ್ಲಿಸಿದ ಪತ್ರವೊಂದರಲ್ಲಿ ಇರಾನ್ ರಾಯಭಾರಿ ಗೊಲಮಾಲಿ ಖುಸ್ರೂ ದೂರಿದ್ದಾರೆ.
ಸ್ವತಃ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಇರಾನ್‌ನಲ್ಲಿ ತೊಂದರೆ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
‘‘ಅಮೆರಿಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತಮ್ಮ ಅಸಂಖ್ಯಾತ ಅಸಂಬದ್ಧ ಟ್ವೀಟ್‌ಗಳ ಮೂಲಕ ಬುಡಮೇಲು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಇರಾನಿಯನ್ನರನ್ನು ಪ್ರಚೋದಿಸುತ್ತಿದ್ದಾರೆ’’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಹಾಗೂ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್‌ಗೆ ಬರೆದ ಪತ್ರದಲ್ಲಿ ಇರಾನ್ ರಾಯಭಾರಿ ಹೇಳಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅಧಿಕಾರಿಗಳ ಭ್ರಷ್ಟಾಚಾರವನ್ನು ವಿರೋಧಿಸಿ ಇರಾನ್‌ನಲ್ಲಿ ಒಂದು ವಾರ ಕಾಲ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿಯನ್ನು ಬಂಧಿಸಲಾಗಿದೆ.