ದೇಹದ ತೂಕ ಕಡಿಮೆಯಾಗಬೇಕೇ...? ಹಾಗಿದ್ದರೆ ಇದನ್ನು ಸೇವಿಸಿ

Update: 2018-01-05 10:53 GMT

ಸುಂದರವಾದ ಶರೀರ ಹೊಂದಿರಬೇಕು ಎಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಆದರೆ ಅದಕ್ಕಾಗಿ ಕಠಿಣ ಶ್ರಮ ಮತ್ತು ಅರ್ಪಣಾ ಮನೋಭಾವ ಅಗತ್ಯವಾಗುತ್ತದೆ. ನಿಯಮಿತ ವ್ಯಾಯಾಮದೊಂದಿಗೆ ಆಹಾರ ಸೇವನೆಯು ಹಿತಮಿತವಾಗಿರಬೇಕು. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಒಂದೇ ಬಗೆಯ ಜೀವನಶೈಲಿಯನ್ನು ಉಳಿಸಿಕೊಳ್ಳುವುದು ಕಷ್ಟ. ಹಸಿವಾದಾಗಲೆಲ್ಲ ಕುರಕುಲು ತಿಂಡಿಗಳನ್ನು ತಿನ್ನುವುದೇ ಅಭ್ಯಾಸವಾಗಿರುತ್ತದೆ. ಹೀಗಾಗಿ ಅನಗತ್ಯ ಕ್ಯಾಲೊರಿಗಳು ದೇಹದಲ್ಲಿ ಸೇರಿಕೊಳ್ಳುತ್ತವೆ. ಇದನ್ನು ಕರಗಿಸುವಷ್ಟು ವ್ಯಾಯಾಮ ಶರೀರಕ್ಕೆ ದೊರೆಯದ ಕಾರಣ ಬೊಜ್ಜು ಬೆಳೆಯುತ್ತದೆ. ಶರೀರದಲ್ಲಿ ಸಂಗ್ರಹಗೊಳ್ಳುವ ಕೊಬ್ಬಿನಿಂದಾಗಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚುತ್ತದೆ ಮತ್ತು ಧಮನಿಗಳಿಗೆ ರಕ್ತದ ಹರಿವಿಗೆ ತಡೆಯುಂಟಾಗುತ್ತದೆ. ಅಂತಿಮವಾಗಿ ಹೃದಯ ಸಮಸ್ಯೆಗಳು ಆರಂಭ ಗೊಳ್ಳುತ್ತವೆ.

► ದೇಹದ ತೂಕ ಇಳಿಸಿಕೊಳ್ಳಲು ಬೆಳ್ಳಂಬೆಳಿಗ್ಗೆ ಲಿಂಬೆ ನೀರು ಮತ್ತು ಬೆಲ್ಲದ ಸೇವನೆ ಸುಲಭದ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಲಿಂಬೆ ಮತ್ತು ಬೆಲ್ಲ ಇವೆರಡೂ ಆರೋಗ್ಯವರ್ಧಕಗಳಾಗಿವೆ.

►ಲಿಂಬೆಹಣ್ಣಿನಲ್ಲಿ ವಿಟಾಮಿನ್‌ಗಳು ಹೇರಳವಾಗಿವೆ. ಅದರಲ್ಲಿನ ಆಮ್ಲವು ಕ್ಯಾಲೊರಿ ಗಳನ್ನು ಕರಗಿಸುವಲ್ಲಿ ನೆರವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ಪೂರಕವಾಗಿದೆ.

►ಲಿಂಬೆಹಣ್ಣಿನ ರಸ ಬೆರೆತ ನೀರಿನ ಸೇವನೆಯು ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ನೀರು ನಮ್ಮ ಶರೀರಕ್ಕೆ ಅತ್ಯಂತ ಅಗತ್ಯವಾಗಿದ್ದು, ಅದು ವಿಷಪದಾರ್ಥಗಳನ್ನು ಹೊರಗೆ ಹಾಕುತ್ತದೆ. ಹೆಚ್ಚಿನವರು ಲೀಟರ್‌ಗಟ್ಟಲೆ ನೀರು ಕುಡಿಯುವುದನ್ನು ಇಷ್ಟ ಪಡುವುದಿಲ್ಲ. ಹೀಗಾಗಿ ಲಿಂಬೆಯ ರಸವನ್ನು ನೀರಿಗೆ ಬೆರೆಸಿ ಕುಡಿಯುವುದು ಹಿತಕರ.

►ವಿಟಾಮಿನ್ ಸಿ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಲಿಂಬೆ ಹೃದಯ ಸಮಸ್ಯೆಗಳನ್ನು ತಡೆಯುತ್ತದೆ, ಆಘಾತದ ಅಪಾಯವನ್ನು ತಗ್ಗಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್‌ಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

►ಲಿಂಬೆಯು ಚರ್ಮದಲ್ಲಿನ ಸುಕ್ಕುಗಳನ್ನು ನಿವಾರಿಸುತ್ತದೆ ಮತ್ತು ಒಣಚರ್ಮದ ಕಿರಿಕಿರಿಯನ್ನು ತಪ್ಪಿಸುತ್ತದೆ. ಬಾಯಿಯ ದುರ್ವಾಸನೆಯ ಸಮಸ್ಯೆಯಿರುವವರಿಗೆ ಲಿಂಬೆ ವರದಾನವಾಗಿದೆ. ಅದು ಹೆಚ್ಚಿನ ಜೊಲ್ಲಿನ ಉತ್ಪಾದನೆಗೆ ನೆರವಾಗುತ್ತದೆ ಮತ್ತು ಬಾಯಿ ಒಣಗುವ ಸಮಸ್ಯೆಯನ್ನು ನಿವಾರಿಸುತ್ತದೆ. ಒಣಗಿದ ಬಾಯಿಯು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ.

►ಇತರ ಹಲವಾರು ಆರೋಗ್ಯಲಾಭಗಳ ಜೊತೆಗೆ ಲಿಂಬೆಯಲ್ಲಿನ ಸಿಟ್ರಿಕ್ ಆಮ್ಲವು ಮೂತ್ರಕೋಶದಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ ಮತ್ತು ವಿಷಪದಾರ್ಥಗಳನ್ನು ಶರೀರದಿಂದ ಹೊರಕ್ಕೆ ಹಾಕಲು ನೆರವಾಗುತ್ತದೆ.

►ಬೆಲ್ಲವೂ ಹಲವು ಆರೋಗ್ಯಲಾಭಗಳನ್ನು ನೀಡುತ್ತದೆ. ಸಕ್ಕರೆಯ ನೇರವಾದ ಸೇವನೆಯು ಶರೀರಕ್ಕೆ ಹಾನಿಯನ್ನುಂಟು ಮಾಡಬಹುದಾದ್ದರಿಂದ ಹೆಚ್ಚಿನವರು ತಮ್ಮ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಲು ಸಕ್ಕರೆ ಮತ್ತು ಅದನ್ನು ಬಳಸಿ ತಯಾರಿಸಿದ ಆಹಾರಗಳಿಂದ ದೂರವಿರುತ್ತಾರೆ. ಆದರೆ ಬೆಲ್ಲದ ಸೇವನೆ ನಿಜಕ್ಕೂ ಲಾಭಕಾರಿಯಾಗಿದೆ. ಅದರಲ್ಲಿ ಯಾವುದೇ ಕೃತಕ ಸಿಹಿಕಾರಕವಿರುವುದಿಲ್ಲ ಎನ್ನುವುದು ಧನಾತ್ಮಕ ಅಂಶವಾಗಿದೆ. ನೈಸರ್ಗಿಕ ಸುಕ್ರೋಸ್ ಹೊಂದಿರುವ ಬೆಲ್ಲ ಸಕ್ಕರೆಗೆ ಪರ್ಯಾಯವಾಗಿರುವ ಜೊತೆಗೆ ಅಧಿಕ ನಾರು, ಖನಿಜಗಳು ಮತ್ತು ಪ್ರೋಟಿನ್‌ಗಳನ್ನು ಒಳಗೊಂಡಿದೆ.

►ಬೆಲ್ಲವೂ ಹೆಚ್ಚಿನ ಕೊಬ್ಬನ್ನು ಕರಗಿಸುವ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಮೂಲಕ ದೇಹದ ತೂಕವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಅದು ಶರೀರದಲ್ಲಿಯ ವಿಷವಸ್ತುಗಳನ್ನು ನಿವಾರಿಸುವ ಮೂಲಕ ರಕ್ತವನ್ನು ಶುದ್ಧಗೊಳಿಸುತ್ತದೆ. ಪೊಟ್ಯಾಷಿಯಂ ಅನ್ನು ಒಳಗೊಂಡಿರುವ ಬೆಲ್ಲವು ಶರೀರದಲ್ಲಿ ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅದು ಶರೀರದಲ್ಲಿ ಎಲೆಕ್ಟ್ರೋಲೈಟ್ ಮಟ್ಟದ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗದಂತೆ ನೋಡಿ ಕೊಳ್ಳುತ್ತದೆ.

►ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಲಿಂಬೆ ಹಣ್ಣನ್ನು ಹಿಂಡಿ. ಇದಕ್ಕೆ ಒಂದು ಟೇಬಲ್‌ಸ್ಪೂನ್ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಪ್ರತಿದಿನ ಬೆಳಿಗ್ಗೆ ಈ ಪೇಯವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ ಮತ್ತು ದೇಹದ ತೂಕ ಇಳಿಯುತ್ತದೆ. ಜೊತೆಗೆ ನಾವು ಕ್ರಿಯಾಶೀಲರಾಗಿರಲು ಮತ್ತು ಆರೋಗ್ಯಯುತರಾಗಿರಲು ಸಾಕಷ್ಟು ಶಕ್ತಿಯನ್ನೂ ಈ ಪೇಯವು ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News