ಸೆಲೆಬ್ರಿಟಿಗಳನ್ನು ನಡುಗಿಸಿದ್ದ ಸಾಮಾನ್ಯ ಜನರ ಹೇಳಿಕೆಗಳಿವು…

Update: 2018-01-05 16:00 GMT

ಅಭಿಮಾನಿಗಳು ಬಾಲಿವುಡ್ ಸೂಪರ್ ಸ್ಟಾರ್‌ಗಳನ್ನು ಎಷ್ಟೊಂದು ಆರಾಧಿಸುತ್ತಾ ರೆಂದರೆ ಕೆಲವೊಮ್ಮೆ ಅದು ಅತಿರೇಕಕ್ಕೆ ತಲುಪುತ್ತದೆ. ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಅವರು ತಮ್ಮ ನೆಚ್ಚಿನ ನಟರ ಮೇಲೆ ಪ್ರೀತಿಯ ಹೊಳೆಯನ್ನೇ ಹರಿಸುತ್ತಾರೆ. ಇದು ಅವರನ್ನು ಭ್ರಮೆಗೆ ಸಿಲುಕಿಸುತ್ತದೆ ಮತ್ತು ಅವರ ಆರಾಧ್ಯ ದೈವಗಳನ್ನು ಪೀಕಲಾಟಕ್ಕೆ ತಳ್ಳುತ್ತದೆ.

ಇತ್ತೀಚಿಗೆ ಆಂಧ್ರಪ್ರದೇಶದ ಸಂಗೀತ ಕುಮಾರ್(29) ಎಂಬಾತ ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನ ತಾಯಿ ಎಂದು ಹೇಳಿಕೊಂಡಿದ್ದಾನೆ. 1994ರಲ್ಲಿ ವಿಶ್ವಸುಂದರಿ ಪಟ್ಟಕ್ಕೇರುವ ಮೊದಲೇ 1988ರಲ್ಲಿ ಐಶ್ವರ್ಯಾ ಐವಿಎಫ್ ಮೂಲಕ ತನಗೆ ಲಂಡನ್‌ನಲ್ಲಿ ಜನ್ಮ ನೀಡಿದ್ದರು ಎಂದಾತ ಪ್ರತಿಪಾದಿಸಿದ್ದಾನೆ. ಈತನ ಹೇಳಿಕೆಗೆ ಐಶ್ವರ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಐಶ್ವರ್ಯಾ ಮಾತ್ರವಲ್ಲ, ಇತರರೂ ಪ್ರತಿಕ್ರಿಯೆ ನೀಡಲು ಈ ಸಂಗೀತ ಕುಮಾರ್‌ನ ಹೇಳಿಕೆ ಅರ್ಹವಾಗಿಲ್ಲ.

“ನಾನು ಶಾಹಿದ್ ಕಪೂರ್ ಪತ್ನಿ”

ನಟ ಶಾಹಿದ್ ಕಪೂರ್ 2012ರಲ್ಲಿ ತನ್ನ ಜೀವಮಾನದಲ್ಲಿಯೇ ಅತ್ಯಂತ ಮುಜುಗರದ ಸಮಯವನ್ನು ಎದುರಿಸಿದ್ದರು. ಆಗ ದಿವಂಗತ ನಟ ರಾಜಕುಮಾರ್ ಅವರ ಪುತ್ರಿ ವಾಸ್ತವಿಕಾ ಶಾಹಿದ್ ತನ್ನ ಪತಿ ಎಂದು ಪ್ರತಿಪಾದಿಸಿದ್ದಳು. ಶಾಹಿದ್ ಬಗ್ಗೆ ಆಕೆಯ ಗೀಳು ಯಾವ ಮಟ್ಟಕ್ಕೆ ತಲುಪಿತ್ತೆಂದರೆ ಆಕೆ ಆತ ಶೂಟಿಂಗ್‌ನಲ್ಲಿದ್ದ ಸ್ಥಳಗಳಿಗೆಲ್ಲ ಹೋಗುತ್ತಿದ್ದಳು ಮತ್ತು ಕಟ್ಟಡದ ಹೊರಗೆ ಆತನಿಗಾಗಿ ಗಂಟೆಗಟ್ಟಲೆ ಕಾದು ನಿಲ್ಲುತ್ತಿದ್ದಳು. ಶಾಹಿದ್ ವಾಸವಿದ್ದ ಕಟ್ಟಡವನ್ನು ಪೈಪ್‌ಗಳು ಮತ್ತು ಗೋಡೆಗಳ ಆಧಾರದಿಂದ ಹತ್ತಿ 13ನೇ ಅಂತಸ್ತಿನಲ್ಲಿದ್ದ ಅವರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಳು. ಇದರೊಂದಿಗೆ ಶಾಹಿದ್ ಕುರಿತು ವಾಸ್ತವಿಕಾಳಿಗೆ ಇದ್ದ ಹುಚ್ಚು ವಿಕೋಪಕ್ಕೆ ತಲುಪಿತ್ತು. ಶಾಹಿದ್ ಆಕೆಯ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿ ಆಕೆಯ ಕಾಟದಿಂದ ಪಾರಾಗಿದ್ದರು.

“ನಾನು ರವೀನಾ ಟಂಡನ್ ಗಂಡ”

2014ರಲ್ಲಿ ಅಭಿಮಾನಿಯೋರ್ವ ರವೀನಾ ಟಂಡನ್ ತನ್ನ ಪತ್ನಿ ಎಂದು ಭಾರೀ ಗುಲ್ಲು ಎಬ್ಬಿಸಿದ್ದ. ಆ ವೇಳೆಗಾಗಲೇ ರವೀನಾ ಚಿತ್ರ ವಿತರಕ ಅನಿಲ ಥಂಡಾನಿಯನ್ನು ಮದುವೆಯಾಗಿದ್ದರು. ಈ ಹುಚ್ಚು ಅಭಿಮಾನಿ ತನ್ನ ಮನೆಗೆ ಕಲ್ಲುಗಳನ್ನು ತೂರಿ ತನ್ನ ಪತಿ ಮನೆಗೆ ಮರಳುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ರವೀನಾ ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸರು ಅಭಿಮಾನಿಯ ಹುಚ್ಚು ಬಿಡಿಸಿದ್ದರು.

“ನಾನು ಶಾರುಖ್ ಖಾನ್ ತಾಯಿ”

1996ರಲ್ಲಿ ಮಹಾರಾಷ್ಟ್ರದ ಲಾತೂರಿನ ಮಹಿಳೆಯೋರ್ವಳು ತಾನು ಶಾರುಖ್ ಖಾನ್‌ರ ಕಳೆದು ಹೋಗಿದ್ದ ಮತ್ತು ಬೇರ್ಪಟ್ಟಿದ್ದ ತಾಯಿ ಎಂದು ಪ್ರತಿಪಾದಿಸಿದ್ದಳು. ಶಾರುಖ್ ಸಿನಿಮಾದ ಪೋಸ್ಟರ್‌ನ್ನು ನೋಡಿದ ಬಳಿಕ ತಾನು ಮಗನನ್ನು ಗುರುತಿಸಿದ್ದೆ ಎಂದಾಕೆ ಹೇಳಿಕೊಂಡಿದ್ದಳು. ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದ್ದ ಆಕೆ, 1960ರ ದಶಕದಲ್ಲಿ ಸಣ್ಣಮಗುವಾಗಿದ್ದ ಶಾರುಖ್‌ನನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾಗ ಆತನನ್ನು ಕಳೆದುಕೊಂಡಿದ್ದೆ ಎಂದು ವಾದಿಸಿದ್ದಳು. ಆದರೆ ಆಕೆಯ ವಾದದಲ್ಲಿ ಯಾವುದೇ ಹುರುಳಿಲ್ಲದಿರುವುದನ್ನು ಮನಗಂಡ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತ್ತು.

“ಧನುಷ್ ನಮ್ಮ ಮಗ”

ಖ್ಯಾತ ತಮಿಳು ನಟ ಧನುಷ್ ನಮ್ಮ ಮಗ ಎಂದು ಹೇಳಿಕೊಂಡು 2017, ಮಾರ್ಚ್‌ನಲ್ಲಿ ತಮಿಳುನಾಡಿನ ನಿವಾಸಿಗಳಾದ ಆರ್.ಕದಿರೇಶನ್(60) ಮತ್ತು ಕೆ.ಮೀನಾಕ್ಷಿ(55) ದಂಪತಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಧನುಷ್ 1985, ನ.7ರಂದು ಜನಿಸಿದ್ದ ಮತ್ತು ಆತನ ಮೂಲ ಹೆಸರು ಕಲೈಸೆಲ್ವನ್ ಎಂದಾಗಿತ್ತು ಎಂದು ತಿಳಿಸಿದ್ದ ಅವರು, ತಮ್ಮ ಹಕ್ಕುಮಂಡನೆಗೆ ಪುರಾವೆಯಾಗಿ ಜನನ ಪ್ರಮಾಣ ಪತ್ರ ಮತ್ತು ಮಗುವಿನೊಂದಿಗಿದ್ದ ತಮ್ಮ ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಧನುಷ್ ತಮ್ಮ ಮೂವರು ಪುತ್ರರಲ್ಲೋರ್ವನಾಗಿದ್ದು, ಮೇಲೂರಿನ ಆರ್.ಸಿ.ಹೈಯರ್ ಸೆಕೆಂಡರಿ ಸ್ಕೂಲ್ ಮತ್ತು ಸರಕಾರಿ ಗಂಡುಮಕ್ಕಳ ಪ್ರೌಢಶಾಲೆಯಲ್ಲಿ ಓದಿದ್ದ. 2012ರಲ್ಲಿ 11ನೆ ತರಗತಿಯ ಓದಿಗಾಗಿ ಶಿವಗಂಗಾ ಜಿಲ್ಲೆಯ ತಿರುಪತೂರ್‌ನ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿಸಿದಾಗ ಆತ ಅಲ್ಲಿಂದ ಪರಾರಿಯಾಗಿ ನಟನಾಗಲು ಚೆನ್ನೈ ಸೇರಿಕೊಂಡಿದ್ದ. ಬಳಿಕ ಆತ ತನ್ನ ಹೆಸರನ್ನು ಧನುಷ್ ಕೆ.ರಾಜಾ ಎಂದು ಬದಲಿಸಿಕೊಂಡಿದ್ದ ಮತ್ತು ಆತನ ಸಿನಿಮಾಗಳನ್ನು ನೋಡಿದ ಮೇಲಷ್ಟೇ ಆತ ತಮ್ಮ ಮಗ ಎನ್ನುವುದು ಗೊತ್ತಾಗಿತ್ತು ಎಂದು ಕದಿರೇಶನ್ ದಂಪತಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಆದರೆ ಮದ್ರಾಸ್ ಉಚ್ಚ ನ್ಯಾಯಾಲಯವು ಈ ಪ್ರಕರಣವನ್ನು ವಜಾಗೊಳಿಸಿದ್ದು, ಆ ಬಳಿಕವಷ್ಟೇ ಧನುಷ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

“ನಾನು ಅಭಿಷೇಕ್ ಬಚ್ಚನ್‌ರನ್ನು ಮದುವೆಯಾಗಿದ್ದೆ”

2007ರಲ್ಲಿ ತಾನು ಅಭಿಷೇಕ್ ಬಚ್ಚನ್ ಪತ್ನಿ ಎಂದು ಹೇಳಿಕೊಂಡಿದ್ದ ಮಾಡೆಲ್ ಝಾನ್ವಿ ಕಪೂರ್ ಅವರ ಮುಂಬೈನ ನಿವಾಸದ ಹೊರಗೆ ತನ್ನ ಮಣಿಗಂಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಮತ್ತು ಈ ಘಟನೆ ಅಭಿಷೇಕ್ ಮತ್ತು ಐಶ್ವರ್ಯಾ ರೈ ಮದುವೆಯ ದಿನವೇ ನಡೆದಿತ್ತು.

ಅಭಿಷೇಕ್ ನಟಿಸಿದ್ದ ‘ದಸ್’ ಸಿನಿಮಾದ ಸೆಟ್‌ನಲ್ಲಿ ತಾವಿಬ್ಬರೂ ಭೇಟಿಯಾಗಿದ್ದೆವು ಮತ್ತು ತಾನು ಆಗ ಹಾಡೊಂದರ ಚಿತ್ರೀಕರಣದಲ್ಲಿ ಗ್ರೂಪ್ ಡ್ಯಾನ್ಸರ್ ಆಗಿದ್ದೆ. ಕೆಲವೇ ಸ್ನೇಹಿತರ ಸಮ್ಮುಖ ಖಾಸಗಿ ಸಮಾರಂಭವೊಂದರಲ್ಲಿ ತಮ್ಮ ಮದುವೆ ನಡೆದಿತ್ತು ಎಂದು ಝಾನ್ವಿ ಪ್ರತಿಪಾದಿಸಿದ್ದಳು. ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಪುರಾವೆ ಆಕೆಯ ಬಳಿ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News