×
Ad

ಅಮೆರಿಕದ ಈಶಾನ್ಯ ಭಾಗಕ್ಕೆ ಅಪ್ಪಳಿಸಿದ ಭೀಕರ ಹಿಮ ಬಿರುಗಾಳಿ

Update: 2018-01-05 22:39 IST
ಸಾಂದರ್ಭಿಕ ಚಿತ್ರ

ಬೋಸ್ಟನ್/ನ್ಯೂಯಾರ್ಕ್, ಜ. 5: ಅಮೆರಿಕದ ಈಶಾನ್ಯ ಭಾಗಕ್ಕೆ ಗುರುವಾರ ಭೀಕರ ಹಿಮ ಬಿರುಗಾಳಿ ಅಪ್ಪಳಿಸಿದ್ದು, ಸಾವಿರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಯಾಗಿದೆ.

ಈಗಾಗಲೇ ಅಮೆರಿಕದ ಹೆಚ್ಚಿನ ಭಾಗವನ್ನು ಶೀತ ಮಾರುತ ವ್ಯಾಪಿಸಿದ್ದು, ಹೊಸ ಹಿಮ ಬಿರುಗಾಳಿಯು ಪರಿಸ್ಥಿತಿಯನ್ನು ಹದಗೆಡಿಸಿದೆ. ಈವರೆಗೆ ಭೀಕರ ಚಳಿಗೆ ಅಮೆರಿಕದಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹಿಮ ಬಿರುಗಾಳಿಯ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಸಾವಿರಾರು ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಬೋಸ್ಟನ್‌ನ ಪ್ರವಾಹಭರಿತ ಬೀದಿಗಳಲ್ಲಿ ಸಿಲುಕಿಕೊಂಡಿರುವ ವಾಹನ ಸವಾರರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ದೇಶದ ಈಶಾನ್ಯ ಭಾಗದಲ್ಲಿ ನ್ಯಾಶನಲ್ ಗಾರ್ಡ್ ಸೈನಿಕರನ್ನು ನಿಯೋಜಿಸಲಾಗಿದೆ.

  ಬಿರುಗಾಳಿ ಹಾದುಹೋದ ಬಳಿಕ ಉಷ್ಣಾಂಶದಲ್ಲಿ ತೀವ್ರ ಕುಸಿತ ಉಂಟಾಗುತ್ತಿದ್ದು, ರಸ್ತೆಗಳಲ್ಲಿ ಬಿದ್ದಿರುವ ಹಿಮವು ಮಂಜುಗಡ್ಡೆಯಾಗಿ ಪರಿವರ್ತನೆಯಾಗುವ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ಬೆದರಿಕೆಯ ಹಿನ್ನೆಲೆಯಲ್ಲಿ, ಹಿಮ ಪುಡಿ ಮಾಡುವ ಯಂತ್ರಗಳು ಮತ್ತು ಉಪ್ಪಿನ ಟ್ರಕ್‌ಗಳನ್ನು ರಸ್ತೆಗಳಲ್ಲಿ ಓಡಿಸಲಾಗಿದೆ.

 ನಾರ್ತ್ ಕ್ಯಾರಲೈನದಿಂದ ಮೇನ್ ರಾಜ್ಯದವರೆಗಿನ ಉತ್ತರ ಕರಾವಳಿಯಲ್ಲಿ ಹಿಮ ಬಿರುಗಾಳಿ ಎಚ್ಚರಿಕೆ ಜಾರಿಯಲ್ಲಿದೆ. ಗಂಟೆಗೆ 113 ಕಿ.ಮೀ. ವೇಗದಲ್ಲಿ ಹಿಮ ಬಿರುಗಾಳಿ ಬೀಸಿದೆ ಎಂದು ಅಮೆರಿಕದ ನ್ಯಾಶನಲ್ ವೆದರ್ ಸರ್ವಿಸ್ ತಿಳಿಸಿದೆ.

ವಿದ್ಯುತ್ ಪೂರೈಕೆ ನಿಲುಗಡೆ

ಅಮೆರಿಕದ ಈಶಾನ್ಯ ಮತ್ತು ಆಗ್ನೇಯ ಭಾಗಗಳಲ್ಲಿ ಸುಮಾರು 80,000 ಮನೆಗಳಿಗೆ ವಿದ್ಯುತ್ ಪೂರೈಕೆ ನಿಂತಿದೆ.

ಬೋಸ್ಟನ್ ಪ್ರದೇಶದಲ್ಲಿ 12 ಇಂಚು ಹಿಮ ಬಿದ್ದಿದೆ ಹಾಗೂ ಇನ್ನೂ ಬೀಳುತ್ತಲೇ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News