ಪೊಲೀಸರ ಲಾಠಿಚಾರ್ಜ್‌ನಿಂದ ನನ್ನ ಪುತ್ರ ಮೃತಪಟ್ಟ
ಮುಂಬೈ, ಜ. 5: ನಾಂದೇಡ್‌ನಲ್ಲಿ ದಲಿತ ಪ್ರತಿಭಟನಕಾರರನ್ನು ನಿಗ್ರಹಿಸಲು ಪೊಲೀಸರು ನಡೆಸಿದ ಲಾಠಿಚಾರ್ಜ್‌ನಿಂದ 15 ವರ್ಷದ ತನ್ನ ಪುತ್ರ ಮೃತಪಟ್ಟಿದ್ದಾನೆ ಎಂದು ಬಾಲಕನ ತಂದೆ ಪ್ರಹ್ಲಾದ್ ಜಾಧವ್ ಆರೋಪಿಸಿದ್ದಾರೆ.
ಪೊಲೀಸರ ವ್ಯಾನ್ ನೋಡಿದ ಬಳಿಕ ಪರಾರಿಯಾಗಲು ಪ್ರಯತ್ನಿಸಿದ ಬಾಲಕ ಯೋಗೇಶ್ ಜಾಧವ್ ಪ್ರತಿಭಟನಕಾರರ ಕಾಲ್ತುಳಿತಕ್ಕೆ ಸಿಲುಕಿದ ಬಳಿಕ ಮೃತಪಟ್ಟ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.ದಲಿತ ಗುಂಪು ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್‌ಗೆ ಪ್ರತಿಕ್ರಿಯೆಯಾಗಿ ಮರಾಠಾವಾಡ ವಲಯದ ನಾದೇಡ್‌ನ ತಮ್ಸಾ ಪೊಲೀಸ್ ಠಾಣೆ ಸಮೀಪ ಪ್ರತಿಭಟನಕಾರರು ಪ್ರತಿಭಟನೆ ನಡೆಸುತ್ತಿದ್ದರು.
“ಯೋಗೇಶ್ ಹಾಟ್‌ಗಾಂವ್ ಗ್ರಾಮದಲ್ಲಿರುವ ಜಿಲ್ಲಾ ಪರಿಷತ್ ಶಾಲೆಗೆ ಹೋಗುತ್ತಿದ್ದ. 10ನೇ ತರಗತಿಯಲ್ಲಿರುವ ಆತನಿಗೆ ಬುಧವಾರ ಇಂಗ್ಲಿಷ್ ಪರೀಕ್ಷೆ ಇತ್ತು. ಆತ ಪರೀಕ್ಷೆ ಬರೆದು ಮನೆಗೆ ಹಿಂದಿರುಗುತ್ತಿದ್ದ. ಈ ಸಂದರ್ಭ ಚೌಕದ ಸಮೀಪ ಸೇರಿದ್ದ ಪ್ರತಿಭಟನಕಾರ ಮೇಲೆ ರಾಜ್ಯ ಮೀಸಲು ಪಡೆಯ ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದ್ದರು. ನನ್ನ ಪುತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ರಾಜ್ಯ ಮೀಸಲು ಪಡೆಯ ಪೊಲೀಸರು ನನ್ನ ಪುತ್ರನ ಮೇಲೂ ಲಾಠಿ ಚಾರ್ಜ್ ನಡೆಸಿದರು. ಇದರಿಂದ ಆತನ ತಲೆ ಹಾಗೂ ಕುತ್ತಿಗೆಗೆ ಘಾಸಿಯಾಯಿತು. ಆತ ಕುಸಿದು ಬಿದ್ದ. ನಾವು ಆತನನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದೆವು. ಆದರೆ, ಆತ ದಾರಿ ಮಧ್ಯದಲ್ಲಿ ಮೃತಪಟ್ಟ” ಎಂದು ಪ್ರಹ್ಲಾದ್ ಜಾಧವ್ ತಿಳಿಸಿದ್ದಾರೆ.