ದಲಿತರು ‘ಹೊಸ ಪೇಶ್ವೆ’ಗಳ ವಿರುದ್ಧ ಹೋರಾಡಬೇಕಾಗಿದೆ

Update: 2018-01-06 18:32 GMT

ಹಿಂದುತ್ವ ದಾಳಿಕೋರರಿಂದ ಸೃಷ್ಟಿಯಾಗಿರುವ ಈ ಹೊಸ ಪೇಶ್ವೆಗಳ ವಿರುದ್ಧ ದಲಿತರು ನಿಜವಾಗಿಯೂ ಹೋರಾಟ ನಡೆಸಬೇಕಾಗಿದೆ. ಇದಕ್ಕಾಗಿ ಅವರು ವಾಸ್ತವವನ್ನು ಅರಿತುಕೊಳ್ಳಬೇಕು. ಮಿಥ್ಯೆಯ ಗತ ಕಾಲವನ್ನು ಸರಿಯಾಗಿ ನೋಡದೆ ತಮ್ಮ ಶ್ರೇಷ್ಠತೆಯನ್ನು ಕಲ್ಪಿಸಿಕೊಳ್ಳುವುದನ್ನು ಬಿಟ್ಟು ಕಣ್ಣು ತೆರೆಯುವುದು ಒಳ್ಳೆಯದು.

200 ವರ್ಷಗಳ ಹಿಂದೆ ಪೂನಾದ ಸಮೀಪ ಭೀಮಾ ನದಿಯ ದಡದಲ್ಲಿ ಆಂಗ್ಲೊ-ಮರಾಠ ಯುದ್ಧದ ಕೊನೆಯ ಕದನ ನಡೆಯಿತು. ಆ ಕದನವು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಹಿಡಿತವನ್ನು ಭದ್ರವಾಗಿಸಿತು. ಕದನ ರಂಗದಲ್ಲಿ ಮೃತಪಟ್ಟವರ ಸ್ಮರಣಾರ್ಥ ಬ್ರಿಟಿಷರು ಒಂದು ಸ್ಮಾರಕ ಸ್ತಂಭ ನೆಟ್ಟರು. ಅದರಲ್ಲಿ 49 ಹೆಸರುಗಳಿವೆ. 22 ಹೆಸರುಗಳ ಮುಂದೆ ಮಹಾರ್ ಎಂದು ಬರೆಯಲಾಗಿದೆ. ಮಹಾರ್ ಸೈನಿಕರ ಕೆಚ್ಚೆದೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಆ ಸ್ಮಾರಕವನ್ನು ಮಹಾರ್ ನಾಯಕರ, ಭೋಪಾಲ್ ಬಾಬಾ ವಾಲಂಗ್‌ಕರ್, ಶಿವರಾಮ್ ಜನ್ಬಾಕಾಂಬ್ಳೆ ಮತ್ತು ಬಿ. ಆರ್. ಅಂಬೇಡ್ಕರ್‌ರವರ ತಂದೆ ರಾಮ್‌ಜಿ ಸಕ್ಪಾಲ್‌ರಂತಹ ಮೊದಲ ತಂಡದ ನಾಯಕರು, 1893ರಲ್ಲಿ ಬ್ರಿಟಿಷರು ತಮ್ಮ ಸೇನೆಯಲ್ಲಿ ಮಹರ್ ಸೈನಿಕರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿದಾಗ, ಅವರನ್ನು ಸೇನೆಗೆ ಸೇರಿಸಿಕೊಳ್ಳುವಂತೆ ಬ್ರಿಟಿಷರನ್ನು ನಿವೇದಿಸಿಕೊಳ್ಳುವಾಗ ಆ ಸ್ತಂಭವನ್ನು ತಮ್ಮ ವಾದದ ಪುಷ್ಟಿಗೆ ಬಳಸಿಕೊಂಡರು. 1857ರ ಸಿಪಾಯಿ ದಂಗೆಯ ಪರಿಣಾಮವಾಗಿ ಮಹಾರ್‌ರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಲಾಗಿತ್ತು.

ಸಿಪಾಯಿ ದಂಗೆಯ ಅಥವಾ ಭಾರತದ ಪ್ರಪ್ರಥಮ ಸ್ವಾತಂತ್ರ ಹೋರಾಟದ ಬಳಿಕ ಬ್ರಿಟಿಷರು ತಮ್ಮ ಸೇನಾ ನೇಮಕಾತಿಯ ತಂತ್ರಗಳನ್ನು ಬದಲಿಸಿ ‘ಯುದ್ಧ ಜನಾಂಗ’ಗಳಿಗೆ ಸೇರಿದವರನ್ನು ಮಾತ್ರ ತಮ್ಮ ಸೇನೆಗೆ ನೇಮಕ ಮಾಡಿಕೊಳ್ಳಲು ಆರಂಭಿಸಿದ್ದರು.

ಆದರೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಭೀಮಾ ಕೋರೆಗಾಂವ್ ಕದನವನ್ನು ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ದಮನದ ವಿರುದ್ಧ ಮಹಾರ್ ಸೈನಿಕರು ನಡೆಸಿದ ಸಮರವೆಂದು ಅರ್ಥೈಸಿದಾಗ, ಅವರು ಒಂದು ಶುದ್ಧ ಮಿಥ್ಯೆಯನ್ನು ಸೃಷ್ಟಿಸುತ್ತಿದ್ದರು. ಚಳವಳಿಗಳನ್ನು ನಡೆಸಲು ಬಲಪಡಿಸಲು ಮಿಥ್ಯೆಗಳು ಬೇಕಾಗುವುದರಿಂದ, ಆಗ ಅವರಿಗೆ ಪ್ರಾಯಶಃ ಇಂತಹ ಒಂದು ಮಿಥ್ಯೆ ಆವಶ್ಯಕ ಅನ್ನಿಸಿರಬಹುದು. ಆದರೆ ಒಂದು ಶತಮಾನದ ಬಳಿಕ ಅದು ಅರೆ-ಇತಿಹಾಸವಾಗಿ ಘನೀಕೃತಗೊಂಡಾಗ ಅದು ಸ್ವಲ್ಪ ಆತಂಕದ ವಿಷಯವಾಗಬೇಕು. ಹಲವು ದಲಿತ ಸಂಘಟನೆಗಳು ಆ ಕದನದ 200ನೇ ವರ್ಷಾಚರಣೆ ನಡೆಸಲು ಮತ್ತು ಅದನ್ನು ಹೊಸ ಪೇಶ್ವೆಗಳ, ಅಂದರೆ ಹಿಂದುತ್ವ ಶಕ್ತಿಗಳ ಹೆಚ್ಚುತ್ತಿರುವ ಬ್ರಾಹ್ಮಣ ಆಡಳಿತದ ವಿರುದ್ಧ ದಾಳಿ ನಡೆಸಲು ಒಂದು ಜಂಟಿರಂಗವನ್ನು ರಚಿಸಿಕೊಂಡವು. ದಲಿತರ ದೀರ್ಘ ನಡಿಗೆಗಳು ಡಿಸೆಂಬರ್ 31ರಂದು ಪೂನಾದಲ್ಲಿ ನಡೆದ ಒಂದು ಅಧಿವೇಶನದಲ್ಲಿ ಕೊನೆಗೊಂಡವು. ಹಿಂದುತ್ವ ಶಕ್ತಿಗಳ ವಿರುದ್ಧ ಹೋರಾಡುವ ನಿರ್ಧಾರ ಶ್ಲಾಘನೀಯವೇ ಆದರೂ ಈ ಉದ್ದೇಶಕ್ಕಾಗಿ ಬಳಸಿಕೊಂಡ ಮಿಥ್ಯೆ ಮಾತ್ರ ಸರಿಯಲ್ಲ. ಯಾಕೆಂದರೆ, ನಾವು ಅನನ್ಯತೆಯ ಐಡೆಂಟಿಟಿಯ ಪ್ರವೃತ್ತಿಗಳನ್ನು ಮೀರಬೇಕಾಗಿರುವಾಗ ಈ ಮಿಥ್ಯೆ ಅವುಗಳನ್ನು ಇನ್ನಷ್ಟು ಬಲಪಡಿಸುತ್ತದೆ.

ಇತಿಹಾಸದ ಬಗ್ಗೆ ಹೇಳುವುದಾದರೆ, ಈಸ್ಟ್ ಇಂಡಿಯಾ ಕಂಪೆನಿಯ ಮಿಲಿಟರಿ ಆಕಾಂಕ್ಷೆಗಳು ಹೆಚ್ಚಿದಾಗ, ಅದು ಬೃಹತ್ ಸಂಖ್ಯೆಯಲ್ಲಿ ದಲಿತರನ್ನು ಸೇನೆಗೆ ನೇಮಕ ಮಾಡಿಕೊಂಡಿತು. ಪ್ರಾಯಶಃ ಅವರ ಅಗಾಧವಾದ ಸ್ವಾಮಿನಿಷ್ಠೆ ಹಾಗೂ ವಿಶ್ವಾಸಾರ್ಹತೆ ಮತ್ತು ಅವರಿಗೆ ತುಂಬ ಕಡಿಮೆ ವೇತನ ಸಿಗುತ್ತಿದ್ದದ್ದು ಈ ನೇಮಕಾತಿಗೆ ಕಾರಣವಿರಬಹುದು.

ಪ್ಲಾಸಿಯಲ್ಲಿ 1757ರಲ್ಲಿ ಮೊದಲ ಯುದ್ಧದಲ್ಲಿ ಆರಂಭಿಸಿ ಈಸ್ಟ್ ಇಂಡಿಯಾ ಕಂಪೆನಿ ಕೊನೆಯ ಆಂಗ್ಲ-ಮರಾಠಾ ಯುದ್ಧದವರೆಗೆ ಹಲವು ಯುದ್ಧಗಳನ್ನು ಮಾಡಿ ಗೆದ್ದಿತ್ತು. ಆ ಎಲ್ಲ ಯುದ್ಧಗಳೂ ಪೇಶ್ವೆಗಳ ವಿರುದ್ಧ ಮಾಡಿದ ಯುದ್ಧಗಳಲ್ಲ ಎಂಬುದು ಸ್ಪಷ್ಟ. ಅವುಗಳಲ್ಲಿ ಬಹುಪಾಲು ಯುದ್ಧಗಳು ಹಿಂದೂಗಳ ವಿರುದ್ಧ ಕೂಡ ಅಲ್ಲ. ಅವುಗಳು ಆಳುವ ಎರಡು ಶಕ್ತಿಗಳ ನಡುವೆ ನಡೆದ, ಸೈನಿಕರು ಕೇವಲ ತಮ್ಮ ಕರ್ತವ್ಯವೆಂದು ಹೋರಾಡಿದ ಯುದ್ಧಗಳು. ಅವುಗಳನ್ನು ಜಾತಿ-ವಿರೋಧಿ ಅಥವಾ ಧರ್ಮ-ವಿರೋಧಿ ಎಂದು ಕಾಣುವಂತೆ ಚಿತ್ರಿಸುವುದು ಕೇವಲ ವಾಸ್ತವಿಕವಾಗಿಯಷ್ಟೆ ಸರಿಯಲ್ಲ. ಬದಲಾಗಿ, ಜಾತಿಯನ್ನು ಐತಿಹಾಸಿಕವಾಗಿ ತಪ್ಪಾಗಿ ಅರ್ಥಮಾಡಿಕೊಳ್ಳುವುದು ಕೂಡ ಆಗುತ್ತದೆ.

ಜಾತಿಯು 19ನೇ ಶತಮಾನದ ಕೊನೆಯವರೆಗೆ ಜನರ ಜೀವನ-ಜಗತ್ತು ಆಗಿತ್ತು. ಜನರು ಜಾತಿಯನ್ನು ಒಂದು ಸಹಜ ವ್ಯವಸ್ಥೆ ಎಂದು ತಿಳಿದಿದ್ದರು ಮತ್ತು ಜಾತಿಯ ಕಾರಣಕ್ಕಾಗಿ ನಡೆಯುತ್ತಿದ್ದ ದಮನವನ್ನು ತಾವು ಸಹಿಸಿಕೊಳ್ಳಬೇಕಾದ ತಮ್ಮ ವಿಧಿ, ಹಣೆಬರಹ ಎಂದು ತಿಳಿದಿದ್ದರು.

ಯುದ್ಧದಲ್ಲಿ ಹೋರಾಡುವ ಸೈನಿಕರ ನೇಮಕಾತಿ ಕೋಮುವಾದಿ ನೆಲೆಯಲ್ಲಿ ನಡೆಯುತ್ತಿರಲಿಲ್ಲ. ಬ್ರಿಟಿಷ್ ಸೇನೆಯಲ್ಲಿ ದಲಿತರು, ತುಲನಾತ್ಮಕವಾಗಿ, ಹೆಚ್ಚಿನ ಸಂಖ್ಯೆಯಲ್ಲಿದ್ದಿರಬಹುದು, ಅವರು ಮುಸ್ಲಿಂ ಅಥವಾ ಮರಾಠಾ ಸೇನೆಯಲ್ಲಿ ಇರಲೇ ಇಲ್ಲ ಎಂದು ಇದರ ಅರ್ಥವಲ್ಲ. ಕೋರೆಗಾಂವ್ ಯುದ್ಧದಲ್ಲಿ ಪೇಶ್ವೆಗಳ ಪದಾತಿದಳದ ಮೂರು ದಳಗಳಲ್ಲಿ ಒಂದು ದಳ ಅರಬರ ದಳವಾಗಿತ್ತು. ಅರಬರ ತುಕಡಿ ಉಗ್ರವಾಗಿ ಹೋರಾಡಿತ್ತು; ಸತ್ತ ಸೈನಿಕರಲ್ಲಿ ಹೆಚ್ಚಿನವರು ಅರಬ್ ಸೈನಿಕರಾಗಿದ್ದರು. ಆ ಸೈನಿಕರ ಪ್ರೇರಣೆ ಏನಾಗಿತ್ತು? ಅವರು ಪೇಶ್ವೆಗಳ ಬ್ರಾಹ್ಮಣವಾದಿ ಆಡಳಿತ ಗೆಲ್ಲಬೇಕೆಂದು ಕಾದಾಡಿದ್ದರೆ? ವಾಸ್ತವ ಏನೆಂದರೆ, ದಲಿತರು ತಮ್ಮ ಯಜಮಾನರಿಗಾಗಿ ಕಾದಾಡಿದ ಹಾಗೆಯೇ, ಅವರು (ಅರಬರು) ಕೇವಲ ಸೈನಿಕರಿಗಾಗಿ ತಮ್ಮ ಯಜಮಾನರಿಗಾಗಿ ಕಾದಾಡಿದರು. ಅವರ ಕಾದಾಟಕ್ಕೆ ಇದಕ್ಕಿಂತ ಮಿಗಿಲಾದ ಉದ್ದೇಶಗಳನ್ನು ಹೊರಿಸುವುದು ತಪ್ಪಾಗುತ್ತದೆ.

1818ರ ಜನವರಿ 1ರಂದು ನಡೆದ ಕೋರೆಗಾಂವ್ ಕದನದ ಮೊದಲು ನಡೆದ ಎರಡು ಆಂಗ್ಲ ಮರಾಠಾ ಯುದ್ಧಗಳಲ್ಲಿ ಪೇಶ್ವೆಗಳು ಸುಸ್ತಾಗಿ ದುರ್ಬಲಗೊಂಡಿದ್ದರು. ಎಷ್ಟರ ಮಟ್ಟಿಗೆ ಎಂದರೆ ಎರಡನೆಯ ಪೇಶ್ವೆ ಬಾಜಿರಾವ್ ಪೂನಾದಿಂದ ಪಲಾಯಣಗೈದು ಪೂನಾದ ಹೊರಗಿನಿಂದ ದಾಳಿ ಮಾಡಲು ಪ್ರಯತ್ನಿಸುತ್ತಿದ್ದ. ಪೇಶ್ವೆಯ ಸೇನೆಯಲ್ಲಿ 20,000 ಅಶ್ವಾರೋಹಿ ಸೈನಿಕರು ಮತ್ತು 8,000 ಪದಾತಿಗಳು ಇದ್ದರು. ಇವರಲ್ಲಿ 2,000 ಮಂದಿ ಮೂರು ಪದಾತಿಗಳಿದ್ದು ಪ್ರತಿಯೊಂದರಲ್ಲಿ 600 ಅರಬರು, ಗೊಸಾಯಿನ್‌ಗಳು ಮತ್ತು ಸೈನಿಕರಿದ್ದರು. ದಾಳಿ ನಡೆಸಿದ ಈ ಮೂರು ತಂಡಗಳಲ್ಲಿ ಹೆಚ್ಚಿನ ದಾಳಿಕೋರರು ಅರಬರಾಗಿದ್ದರು. ಒಟ್ಟಿನಲ್ಲಿ ಅವರೆಲ್ಲರೂ ಮಹಾರರು ಅಲ್ಲ ಎಂಬುದು ಸ್ಪಷ್ಟ ಮತ್ತು ಕದನದಲ್ಲಿ ಮೃತಪಟ್ಟ 49ಸೈನಿಕರಲ್ಲಿ 27 ಸೈನಿಕರು ಮಹಾರರಲ್ಲ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಕೋರೆಗಾಂವ್ ಕದನವನ್ನು ಪೇಶ್ವೆಗಳ ಬ್ರಾಹ್ಮಣವಾದಿ ಆಡಳಿತದ ವಿರುದ್ಧ ವ್ಯಕ್ತವಾದ ಮಹಾರರ ಪ್ರತೀಕಾರ ಎಂದು ಚಿತ್ರಿಸುವುದು ತಪ್ಪು ಮಾಹಿತಿ ನೀಡಿದಂತಾಗುತ್ತದೆ.

ಅಷ್ಟೇ ಅಲ್ಲದೆ ಪೇಶ್ವೆಗಳನ್ನು ಸೋಲಿಸಿದ ನಂತರ ಮಹಾರರಿಗೆ ದಮನದಿಂದ ಯಾವುದೇ ಬಿಡುಗಡೆ ದೊರಕಿತು ಎಂಬುದಕ್ಕೂ ಯಾವುದೇ ಪುರಾವೆ ಇಲ್ಲ. ಅವರ ಜಾತಿ ದಮನ, ತಾರತಮ್ಯ ಹಿಂದಿನಂತೆಯೇ ಮುಂದುವರಿಯಿತು. ಅಲ್ಲದೆ, ಅವರ ಗತ ಶೌರ್ಯವನ್ನು ಗುರುತಿಸದ ಕೃತಘ್ನ ಬ್ರಿಟಿಷರು ಅವರನ್ನು ಸೇನೆಗೆ ನೇಮಿಸಿಕೊಳ್ಳುವುದನ್ನು ನಿಲ್ಲಿಸಿದರು. 2ನೇ ಮಹಾ ಯುದ್ಧ ಆರಂಭವಾಗುವಾಗಲಷ್ಟೆ ಅವರು ಈ ನೇಮಕಾತಿಯನ್ನು ಪುನಾರಂಭಿಸಿದರು.

ಬ್ರಿಟಿಷರ ವಸಾಹತುಶಾಹಿ ಆಡಳಿತವು ದಲಿತರಿಗೆ ಹಲವು ಸವಲತ್ತುಗಳನ್ನು ತಂದಿತು ಎಂಬ ಬಗ್ಗೆ ಎರಡು ಮಾತಿಲ್ಲ. ಎಷ್ಟರ ಮಟ್ಟಿಗೆ ಎಂದರೆ ದಲಿತ ಚಳವಳಿಯ ಜನನವೇ ಬ್ರಿಟಿಷರ ಆಡಳಿತದಿಂದಾಗಿ ಸಾಧ್ಯವಾಯಿತೆಂದರೆ ತಪ್ಪಾಗಲಾರದು. ಆದರೆ ಅದೇ ವೇಳೆ ಇದು ಬ್ರಿಟಿಷರ ಉದ್ದೇಶ ವಾಗಿರಲಿಲ್ಲ ಮತ್ತು ಅವರ ವಸಾಹತುಶಾಹಿ ತರ್ಕವಷ್ಟೆ ಈ ಬೆಳವಣಿಗೆಗಳ ಹಿಂದೆ ಕೆಲಸ ಮಾಡಿತೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದಲಿತರು ತಮ್ಮ ಅನನ್ಯತೆಯ ಕಾರಣಗಳಿಗಾಗಿ ಈ ವಾಸ್ತವಕ್ಕೆ ಕುರುಡಾಗುತ್ತಿರುವುದು ದುರದೃಷ್ಟಕರ.

ಅದೇ ರೀತಿಯಾಗಿ, ಪೇಶ್ವಾಪಡೆಗಳು ಮರಾಠಾ ಪಡೆಗಳಿಗೆ ಸೇರಿದ್ದರಿಂದ, ಅವರು ರಾಷ್ಟ್ರೀಯವಾದಿಗಳು; ಬ್ರಿಟಿಷರು ಸಾಮ್ರಾಜ್ಯಶಾಹಿಗಳು ಎಂದು ಹೇಳುವುದು ಸರಿಯಲ್ಲ. ಆಗ ಭಾರತ ರಾಷ್ಟ್ರದ ಒಂದು ಕಲ್ಪನೆಯೇ ಇರಲಿಲ್ಲ. ವಿರೋಧಾಭಾಸವೆಂದರೆ, ಭಾರತೀಯ ಉಪಖಂಡದ ವಿಸ್ತಾರವಾದ ಭೂ ಪ್ರದೇಶಗಳನ್ನು ರಾಜಕೀಯವಾಗಿ ಒಗ್ಗೂಡಿಸಿದ ಬ್ರಿಟಿಷ್ ಆಡಳಿತದ ಒಂದು ಕೊಡುಗೆ, ಇಂಡಿಯಾ. ತಮ್ಮ ಸ್ವಾರ್ಥಗಳಿಗಾಗಿ ಅದನ್ನು ಒಂದು ರಾಷ್ಟ್ರವಾಗಿ ಬಳಸಿಕೊಳ್ಳುತ್ತಿರುವವರು, ಪೇಶ್ವೆಗಳ ಹಾಗೆ ಲಂಪಟರು ಾಗೂ ಅತಿದೊಡ್ಡ ರಾಷ್ಟ್ರದ್ರೋಹಿಗಳು.

ಹಿಂದುತ್ವ ದಾಳಿಕೋರರಿಂದ ಸೃಷ್ಟಿಯಾಗಿರುವ ಈ ಹೊಸ ಪೇಶ್ವೆಗಳ ವಿರುದ್ಧ ದಲಿತರು ನಿಜವಾಗಿಯೂ ಹೋರಾಟ ನಡೆಸಬೇಕಾಗಿದೆ. ಇದಕ್ಕಾಗಿ ಅವರು ವಾಸ್ತವವನ್ನು ಅರಿತುಕೊಳ್ಳಬೇಕು. ಮಿಥ್ಯೆಯ ಗತ ಕಾಲವನ್ನು ಸರಿಯಾಗಿ ನೋಡದೆ ತಮ್ಮ ಶ್ರೇಷ್ಠತೆಯನ್ನು ಕಲ್ಪಿಸಿಕೊಳ್ಳುವುದನ್ನು ಬಿಟ್ಟು ಕಣ್ಣು ತೆರೆಯುವುದು ಒಳ್ಳೆಯದು.

(ಆನಂದ್ ತೆಲ್‌ತುಂಬ್ಡೆ ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.)

ಕೃಪೆ: thewire.in

Writer - ಆನಂದ್ ತೇಲ್ತುಂಬ್ಡೆ

contributor

Editor - ಆನಂದ್ ತೇಲ್ತುಂಬ್ಡೆ

contributor

Similar News

ಜಗದಗಲ
ಜಗ ದಗಲ