ಏನಿದು ಭೀಮಾ ಕೋರೆಗಾಂವ್ ಸಂಘರ್ಷ..?

Update: 2018-01-06 18:33 GMT

ತಲೆತಲಾಂತರದ ಬಳುವಳಿ ಎಂಬಂತೆ ದಲಿತರ ಮೇಲಿನ ದೌರ್ಜನ್ಯ 21ನೇ ಶತಮಾನದಲ್ಲೂ ಮುಂದುವರಿದಿದೆ! ಪ್ರತಿವರ್ಷ ಜನವರಿ 1ನೇ ತಾರೀಕನ್ನು ಭೀಮಾ ಕೋರೆಗಾಂವ್‌ನಲ್ಲಿ ದಲಿತರ ವಿಜಯೋತ್ಸವದ ದಿನವಾಗಿ ಆಚರಿಸಲಾಗುತ್ತಿದೆ. ಈ ಆಚರಣೆಗೆ 200 ವರ್ಷಗಳ ಇತಿಹಾಸವೂ ಇದೆ. ಈ ಬಾರಿಯ 200ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲು ಹೊರಟಿದ್ದ ದಲಿತರ ಗುಂಪಿನ ಮೇಲೆ ಹಿಂದೂ ಏಕತಾ ಅಘಾಡಿ ಹೆಸರಿನ ಸಂಘ ಪರಿವಾರದ ಸಂಘಟನೆಯವರು ಅಮಾನವೀಯವಾಗಿ ಕಲ್ಲು ತೂರಾಟ ನಡೆಸಿ ಸಾವು ನೋವಿಗೆ ಕಾರಣರಾಗಿದ್ದಾರೆ. ಈ ವಿಜಯೋತ್ಸವವನ್ನು ತಲೆತಲಾಂತರದಿಂದ ತುಳಿತಕ್ಕೊಳಗಾಗಿರುವ ದಲಿತರು ತಮ್ಮ ಆತ್ಮಾಭಿಮಾನದ ಸಂಕೇತವೆಂಬಂತೆ ಆಚರಿಸಿಕೊಂಡು ಬರುತ್ತಿದ್ದರು. ಅದಕ್ಕಾಗಿ ದೇಶದ ಮೂಲೆ ಮೂಲೆಯಿಂದ ಭಾರೀ ಸಂಖ್ಯೆಯಲ್ಲಿ ದಲಿತರ ಸಮಾಗಮವಾಗುತ್ತದೆ. ಈ ಬಾರಿಯ ಕಲ್ಲು ತೂರಾಟ ಇಡೀ ದೇಶದ ದಲಿತರ ಮೇಲಿನ ಮೇಲ್ವರ್ಗದವರ ಆಕ್ರೋಶಕ್ಕೆ ಕಳಶವಿಟ್ಟಂತಿದೆ.

ಇಡೀ ಘಟನೆಯ ಹಿನ್ನ್ನೆಲೆಯನ್ನು ಸೂಕ್ಷ್ಮವಾಗಿ ಗಮ ನಿಸುತ್ತಾ ಹೋದರೆ ಈ ವಿಜಯೋತ್ಸವ ದಿವಸಕ್ಕೊಂದು ಐತಿಹಾಸಿಕ ಹಿನ್ನೆಲೆಯಿದೆ. ಸ್ವಾತಂತ್ರ ಪೂರ್ವ ಭಾರತದಲ್ಲಿ ಹಲವಾರು ುುದ್ಧಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆೆ. ಅವುಗಳಲ್ಲಿ ಬಹಳಷ್ಟು ಯುದ್ಧಗಳು ಬ್ರಿಟಿಷರ ವಿರುದ್ಧ ಡೆದಿದ್ದರೆ, ಇನ್ನೂ ಅನೇಕ ಯುದ್ಧಗಳು ತಮ್ಮ ಸ್ವಂತ ಲಾಭಕ್ಕಾಗಿ ಬ್ರಿಟಿಷರ ಜೊತೆ ಕೈ ಜೋಡಿಸಿ ತಮ್ಮದೇ ದೇಶದೊಳಗಿನ ಇತರ ರಾಜರುಗಳೊಂದಿಗೆ ಕಿತ್ತಾಡಿದ್ದಾರೆ. ಇವೆಲ್ಲವುಗಳಿಗೂ ವಿಭಿನ್ನವಾಗಿ ನಡೆದದ್ದು ಭೀಮಾ ಕೋರೆಗಾಂವ್. ಇದೊಂದು ಜನಾಂಗದ ಅಳಿವು ಉಳಿವಿನ ಸಂಕೇತ ವಾಗಿ ನಡೆದ ಯುದ್ಧವಾಗಿದ್ದೆ.

ಜಾತೀಯತೆಯ ಚಕ್ರವ್ಯೆಹದಲ್ಲಿ ಸಿಲುಕಿ, ಅಸ್ಪಶ್ಯರೆಂಬ ಹಣೆ ಟ್ಟಿ ಹೊತ್ತು ನಿರಂತರ ತುಳಿತಕ್ಕೆ ಒಳಗಾಗಿ ತುತ್ತು ಅನ್ನಕ್ಕೂ ಪರದಾುವ ಪರಿಸ್ಥಿತಿಯಲ್ಲಿ ಕೆಲಸ ಕೇಳಿಕೊಂಡು,ನ್ಯಾಯ ಕೇಳಿಕೊಂಡು ಆಗ ಆಡಳಿತ ನಡೆಸುತ್ತಿದ್ದ ಪೇಶ್ವೆ ಎರಡನೇ ಬಾಜಿರಾಯ ನಲ್ಲಿಗೆ ಹೋದ ಮಹಾರ್ ಜನಾಂಗದ ಜನರನ್ನು ಅಸ್ಪಶ್ಯರು ಅನ್ನುವ ಕಾರಣಕ್ಕೆ ಹೊಡೆದೋಡಿಸುತ್ತಾನೆ ಎರಡನೇ ಬಾಜೀರಾಯ. ಆಗ ಅವರ ಸಹಾಯಕ್ಕೆ ನಿಂತ ಬ್ರಿಟಿಷರು ಈ ಮಹಾರರ ಸೇನೆ ಕಟ್ಟಿ ಕೇವಲ 500 ಜನ ಮಹಾರ್ ಸೈನಿಕರನ್ನು ಬಿಟ್ಟು ಸುಮಾರು ಇಪ್ಪತ್ತೈದು ಸಾವಿರದಷ್ಟಿದ್ದ ಪೇಶ್ವೆಯ ಸೇನೆಯನ್ನು ಸೋಲಿಸುತ್ತಾರೆ. 1818 ರ ಜನವರಿ 1 ರಂದು ಪೇಶ್ವೆಗಳ ದುರಾಡಳಿತದ ವಿರುದ್ಧ ದಂಗೆಯೆದ್ದು ಈ ಯುದ್ಧ ಗೆದ್ದ ಮಹಾರರು ಬ್ರಿಟಿಷರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ಇತಿಹಾಸದ ಪುಟದಲ್ಲಿ ಈ ಘಟನೆ ಚಿರಸ್ಥಾಯಿಯಾಗುತ್ತದೆ.
ಅದಾದ ಮೇಲೆ ನಿರಂತರವಾಗಿ 1893ರವರೆಗೆ ಅಂದರೆ ಭಾರತದಲ್ಲಿ 1857ರ ನಂತರ ಸ್ವಾತಂತ್ರದ ಹೋರಾಟ ತೀವ್ರವಾಗುವವರೆಗೂ ಬ್ರಿಟಿಷ್ ಸೇನೆಯಲ್ಲಿ ಮಹಾರ್ ದಳವಾಗಿ ಕೆಲಸಮಾಡುತ್ತಾರೆ. 1851ರಲ್ಲಿ ಈ ವಿಜಯೋತ್ಸವದ ಸಂಕೇತವಾಗಿ ಕೋರೆಗಾಂವ್ ನಲ್ಲಿ ಸ್ಥಂಭವೊಂದನ್ನು ಸ್ಥಾಪಿಸಿದ ಬ್ರಿಟಿಷರು ಅದರಲ್ಲಿ ಯುದ್ಧದಲ್ಲಿ ಮಡಿದ ಮಹಾರ್ ಯೋಧರ ಹೆಸರನ್ನು ಕೆತ್ತಿಸಿ ವಿಜಯೋತ್ಸವವನ್ನು ಆಚರಿಸಲು ಮಹಾರ್ ಜನರಿಗೆ ಅನುವು ಮಾಡಿಕೊಡುತ್ತಾರೆ. ಈ ಗೆಲುವು ದಲಿತ ದಮನಿತ ವರ್ಗಗಳ ಆತ್ಮಾಭಿಮಾನಕ್ಕೆ ಕಿರೀಟ ತಂದಿಟ್ಟ ಘಟನೆಯಾಗುತ್ತದೆ.

ಶೂದ್ರ ದೊರೆಯಾಗಿ ಬಲಿಷ್ಠ ಮರಾಠಾ ಸಾಮ್ರಾಜ್ಯವನ್ನೇ ಕಟ್ಟಿ ಪ್ರತಿಯೊಬ್ಬರನ್ನೂ ಸಮಾನರಾಗಿ ಕಾಣುತ್ತಿದ್ದ ಶಿವಾಜಿ ಮಹಾರಾಜನಿಂದ ಕುತಂತ್ರದಿಂದ ಆಡಳಿತ ಕಿತ್ತುಕೊಂಡು ಅವರನ್ನು ಕೇವಲ ನಾಮಕಾವಸ್ಥೆಯ ರಾಜನನ್ನಾಗಿಸಿ ರಾಜ್ಯವಾಳುತ್ತಿದ್ದ ಪುರೋಹಿತಶಾಹಿ ಪೇಶ್ವೆಗಳ ಮನಸ್ಥಿತಿ ಮರಾಠ ದೊರೆ ಶಿವಾಜಿಗೆ ತದ್ವಿರುದ್ಧವಾಗಿತ್ತು. ಶಿವಾಜಿಯ ಕಾಲದಲ್ಲಿ ಸುಸ್ಥಿತಿಯಲ್ಲಿದ್ದ ಸಮಾಜದ ಕೆಳವರ್ಗದ ಜನ ಅತೀವ ಜಾತಿವಾದಿಯಾಗಿದ್ದ ಪೇಶ್ವೆಗಳ ಕಾಲದಲ್ಲಿ ನಲುಗಿಹೋಗಿದ್ದರು. ಆಗ ಮಹಾರ್ ಜನಾಂಗಕ್ಕೆ ಘನತೆ ತಂದುಕೊಟ್ಟ ಬ್ರಿಟಿಷರು ಅವರದ್ದೊಂದು ಪ್ರತ್ಯೇಕ ಸೇನಾ ದಳವನ್ನೇ ಸ್ಖಾಪಿಸಿ ಯೋಧರನ್ನಾಗಿಸಿ ಬದುಕು ಕಟ್ಟಿ ಕೊಟ್ಟಿದ್ದರು. ಇಂತಹ ಮಹಾರ್ ಕುಟುಂಬವೊಂದರಲ್ಲೇ ಜನಿಸಿದ್ದು ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅಂಬೇಡ್ಕರ್ ಬದುಕಿರುವವರೆಗೂ ಜನವರಿ 1 ರಂದು ಈ ವಿಜಯೋತ್ಸವದಲ್ಲಿ ಭಾಗಿಯಾಗುತ್ತಿದ್ದುದು ವಿಶೇಷವಾಗಿತ್ತು.

 ಅಂದಿನಿಂದ ಇಂದಿನವರೆಗೂ ಇದು ಈ ದೇಶದ ಮೇಲ್ವರ್ಗದ ಜನರಿಗೆ ನುಂಗಲಾರದ ತುತ್ತಾಗಿದೆ. ಪುರೋಹಿತ ಶಾಹಿ ಮನಸ್ಥಿತಿಯ ಮನುವಾದಿಗಳಿಗೆ ಅಂಬೇಡ್ಕರ್ ಅನ್ನುವುದೇ ಗಂಟಲಿನ ಮುಳ್ಳಾಗಿರುವಾಗ ದಲಿತ ಸಮುದಾಯವೊಂದು ವಿಜಯೋತ್ಸವ ಆಚರಿಸುವುದನ್ನು ಹೇಗೆ ತಾನೆ ಸಹಿಸಿಕೊಂಡಾರು!! ಹಾಗಾಗಿ ಪ್ರತೀ ಬಾರಿಯೂ ಸಣ್ಣ ಪುಟ್ಟ ಕಿರಿಕಿರಿಗಳ ನಡುವೆಯೇ ನಡೆಯುತ್ತಿದ್ದ ಸಂಭ್ರಮಾಚರಣೆಗೆ ಈ ಬಾರಿ ಕಲ್ಲು ತೂರುವ ಮೂಲಕ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ಹೊರಹಾಕಿದರು ಮನುವಾದಿಗಳು!!
  ಇಲ್ಲೊಂದು ವಿಚಾರವನ್ನು ಗಮನಿಸಬೇಕಾಗಿದೆ. ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವ ಅಲ್ಪ ಸಂಖ್ಯಾತರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುವ ಸಂಘ ಪರಿವಾರಕ್ಕೆ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಒಬ್ಬ ದೇಶದ್ರೋಹಿಯಾಗಿ ಕಾಣಿಸುತ್ತಾನೆ. ಸಂಸ್ಕೃತಿಯನ್ನು ಹಾಳುಗೆಡವಿದ ಕೊಲೆಗಡುಕನಂತೆ ಕಾಣುತ್ತಾನೆ. ಅಲ್ಲಿ ಮಹಾರಾಷ್ಟ್ರದಲ್ಲಿ ಬ್ರಿಟಿಷರಜೊತೆ ಸೇರಿ ಉಳಿವಿಗಾಗಿ ಹೋರಾಡಿದ ದಲಿತರೂ ಇವರ ದೃಷ್ಟಿಯಲ್ಲಿ ದೇಶದ್ರೋಹಿಗಳು! ಇಲ್ಲಿ ನಿಜವಾಗಲೂ ಗೊಂದಲ ಹುಟ್ಟಿಸುವುದು ಸಂಘಿಗಳ ದ್ವಂದ್ವ ನಿಲುವು.

ಬ್ರಿಟಿಷರ ವಿರುದ್ಧ ಹೋರಾಡಿದರೂ ದೇಶದ್ರೋಹ, ತಮ್ಮದೇ ಕೆಟ್ಟ ಆಡಳಿತದ ವಿರುದ್ಧ ವಾಗಿ ಬ್ರಿಟಿಷರ ಜತೆ ಸೇರಿ ಹೋರಾಡಿದರೂ ದೇಶದ್ರೋಹವೆಂದಾದರೆ, ಸಂಘ ಪರಿವಾರದವರ ಲೆಕ್ಕದಲ್ಲಿ ದೇಶಪ್ರೇಮವೆಂದೇನು?! ಮೇಲ್ವರ್ಗಿಗಳ ಕಪಿಮುಷ್ಟಿಯಲ್ಲಿ ಎಲ್ಲವೂ ನಿಯಂತ್ರಿಸಲ್ಪಡುವ ಪುರೋಹಿತ ಶಾಹಿ ಮನಸ್ಥಿತಿಯಲ್ಲಿ ನಿದೇಣಿಸುವ ಪ್ರತಿಯೊಂದ ನ್ನೂ ಒಪ್ಪಿಕೊಂಡರೆ ಅದು ದೇಶ ಪ್ರೇಮವೆನಿಸಿಕೊಳ್ಳು ತ್ತದೆಯೇ?! ಹಾಗಾದರೆ, ಇದರರ್ಥ ಸಂಘಿಗಳ ಹೋರಾಟ ದೇಶಕ್ಕಾಗಿ ಅಲ್ಲ ಬದಲಿಗೆ ದೇಶದ ಹೆಸರಿ ನಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಪ್ರತಿಯೊಂದನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡು ಸಾವಿರಾರು ವರ್ಷಗಳ ಇತಿಹಾಸವಿರುವ ಮೂಲ ನಿವಾಸಿಗಳೆನಿಸಿಕೊಂಡ ದೀನ ದಲಿತರನ್ನು ಕೆಳವರ್ಗದ ಜನರನ್ನು, ನೂರಾರು ವರ್ಷಗಳಿಂದ ಇಲ್ಲಿಯೇ ಹುಟ್ಟಿ ಬೆಳೆದು ಬದುಕು ಕಟ್ಟಿಕೊಂಡಿರುವ ಅಲ್ಪ ಸಂಖ್ಯಾತರನ್ನು ತುಳಿಯುವುದು ಎಂದಾಯಿತಲ್ಲವೇ?! ?

Writer - ಪಲ್ಲವಿ ಐದೂರ್

contributor

Editor - ಪಲ್ಲವಿ ಐದೂರ್

contributor

Similar News

ಜಗದಗಲ
ಜಗ ದಗಲ