×
Ad

ಬ್ರಿಸ್ಬೇನ್ ಟೆನಿಸ್ ಟೂರ್ನಿ: ಕಿರ್ಗಿಯೊಸ್ ಚಾಂಪಿಯನ್

Update: 2018-01-07 23:54 IST

ಬ್ರಿಸ್ಬೇನ್, ಜ.7: ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ರಿಯಾನ್ ಹ್ಯಾರಿಸನ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ತವರು ನೆಲದಲ್ಲಿ ಮೊದಲ ಚೊಚ್ಚಲ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕಿರ್ಗಿಯೊಸ್ ಅಮೆರಿಕದ ಹ್ಯಾರಿಸನ್‌ರನ್ನು 6-4, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಬ್ರಿಸ್ಬೇನ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಜ.15 ರಿಂದ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಗ್ರಾನ್‌ಸ್ಲಾಮ್ ಟೂರ್ನಿಗೆ ಉತ್ತಮ ತಯಾರಿ ನಡೆಸಿದ್ದಾರೆ. 22ರ ಹರೆಯದ ಕಿರ್ಗಿ ಯೊಸ್ ಪಂದ್ಯದ ನಡುವೆ ಮಂಡಿನೋವು ಕಾಣಿಸಿಕೊಂಡ ಹೊರತಾಗಿಯೂ ಫೈನಲ್ ಪಂದ್ಯದಲ್ಲಿ ಮೊದಲ ಸೆಟ್‌ನ್ನು 6-4 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದರು. ಅಮೆರಿಕ ಆಟಗಾರ ಹ್ಯಾರಿಸನ್ ಎರಡನೇ ಸೆಟ್‌ನ ಆರಂಭದಲ್ಲಿ ಎಡವಿದರು. ಇದರ ಲಾಭ ಪಡೆದ ವಿಶ್ವದ ನಂ.21ನೇ ಆಟಗಾರ ಕಿರ್ಗಿಯೊಸ್ 2ನೇ ಸೆಟ್‌ನ್ನು ಸುಲಭವಾಗಿ ವಶಪಡಿಸಿಕೊಂಡು ಟ್ರೋಫಿ ಜಯಿಸಿದರು.

ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.3ನೇ ಆಟಗಾರ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ ಜಯ ಸಾಧಿಸಿರುವ ಕಿರ್ಗಿಯೊಸ್ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News