ನೀರು, ಅಡುಗೆ ಇಂಧನದ ಕೊರತೆಯಿಂದ ಗ್ರಾಮೀಣ ಮಹಿಳೆಯರ ಆರೋಗ್ಯಕ್ಕೆ ಕುತ್ತು

Update: 2018-01-08 18:34 GMT

ನಾವು ಆಗಾಗ್ಗೆ ಇಂಧನ ಹಾಗೂ ನೀರನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತೇವೆ. ಆದರೆ ಎಲ್ಲರಿಗೂ ಈ ಮೂಲಭೂತ ಆವಶ್ಯಕತೆಗಳು ಸುಲಭವಾಗಿ ದೊರೆಯುವ ಭಾಗ್ಯವಿಲ್ಲ. ನೀರು ಹಾಗೂ ಕಟ್ಟಿಗೆಯನ್ನು ಸಂಗ್ರಹಿಸಲು ಮಹಿಳೆಯರು ಹಲವು ತಾಸುಗಳವರೆಗೆ ಕಷ್ಟಪಟ್ಟು ದುಡಿಯಬೇಕಾದಂತಹ ಪ್ರದೇಶಗಳು ಭಾರತದಲ್ಲಿ ಸಾಕಷ್ಟಿವೆ. ಅಡಿಗೆಯೆಂಬ ಸರಳ ಕೆಲಸವನ್ನು ಮಾಡಲು ಗ್ರಾಮೀಣಭಾಗದ ಮಹಿಳೆಯರು ಅಪಾರವಾದ ಶ್ರಮ ಪಡುತ್ತಿರುತ್ತಾರೆ.

ತನ್ನ ಇಡೀ ಕುಟುಂಬ ಗಾಢ ನಿದ್ರೆಯಲ್ಲಿರುವಾಗ, ಆಕೆ ಮಾತ್ರ ನಸುಕಿನಲ್ಲಿ 5:00 ಗಂಟೆಗೆ ಏಳುತ್ತಾಳೆ. ನಾಲ್ಕು ಕಿ.ಮೀ.ದೂರದವರೆಗೆ ನಡೆದು ಗುಡ್ಡವನ್ನು ತಲುಪುತ್ತಾಳೆ. ಅಲ್ಲಿ ಆಕೆ ಕಟ್ಟಿಗೆ ಸಂಗ್ರಹಿಸಲು ಆರಂಭಿಸುತ್ತಾಳೆ. ಬೆಳಗಾಗುವುದರೊಳಗೆ ಮನೆಗೆ ಮರಳುತ್ತಾಳೆ ಹಾಗೂ ತನ್ನ ಕುಟುಂಬಕ್ಕಾಗಿ ಅಡುಗೆ ಮಾಡಲು ಆರಂಭಿಸುತ್ತಾಳೆ. ಇನ್ನು ಅಡುಗೆಗೆ ನೀರಿಗಾಗಿ ಏನು ಮಾಡುವುದು?. ಇದಕ್ಕಾಗಿ ಆಕೆ ಮತ್ತೊಮ್ಮೆ ಮಾರು ದೂರದವರೆಗೆ ನಡೆಯಬೇಕಾಗುತ್ತದೆ.

ನಾಸಿಕ್ ಜಿಲ್ಲೆಯ ಸರ್ಗಾನಾ ತಾಲೂಕಿನ ಬುಡಕಟ್ಟು ಜನರ ಗ್ರಾಮವಾದ ಬುಬ್ಲಿಯ ಬಹುತೇಕ ಮಹಿಳೆಯರ ಬವಣೆಗಳನ್ನು ಆಕೆ ಪ್ರತಿನಿಧಿಸುತ್ತಾಳೆ. ಈ ಗ್ರಾಮದಲ್ಲಿ ಹೆಚ್ಚಿನ ಮನೆಗಳಿಗೆ ಅಡುಗೆ ಅನಿಲ ಸಂಪರ್ಕವಿಲ್ಲ. ಕಟ್ಟಿಗೆ ಹಾಗೂ ನೀರಿಗಾಗಿ ಈ ಗ್ರಾಮದ ಮಹಿಳೆಯರ ಪಾದಯಾತ್ರೆಯು ವರ್ಷದ ಪ್ರತೀ ದಿನವೂ ಪುನರಾವರ್ತಿಸುತ್ತಿರುತ್ತದೆ. ದೀರ್ಘತಾಸುಗಳವರೆಗೆ ಬೆನ್ನು ಬಗ್ಗಿಸುವುದು, ಅತಿಯಾಗಿ ಹೊರೆಗಳನ್ನು ಹೊರುವುದು, ಅಸಮರ್ಪಕ ಭಂಗಿಗಳು ಹಾಗೂ ವಿಶ್ರಾಂತಿಗೆ ಅಲ್ಪ ಸಮಯದ ಲಭ್ಯತೆ ಇವೆಲ್ಲವೂ ಆ ಪ್ರದೇಶದ ಮಹಿಳೆಯರ ಆರೋಗ್ಯ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತಿವೆ.

ಆಹಾರವು ಮಾನವನ ಬದುಕಿನ ಕೇಂದ್ರಬಿಂದುವಾಗಿದೆ. ಆದರೆ ಅಡುಗೆಯ ಕೆಲಸಕ್ಕಾಗಿಯೇ ಬದುಕು ವ್ಯಯವಾಗಬೇಕೇ?. ನಾವು ಆಗಾಗ್ಗೆ ಇಂಧನ ಹಾಗೂ ನೀರನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತೇವೆ. ಆದರೆ ಎಲ್ಲರಿಗೂ ಈ ಮೂಲಭೂತ ಆವಶ್ಯಕತೆಗಳು ಸುಲಭವಾಗಿ ದೊರೆಯುವ ಭಾಗ್ಯವಿಲ್ಲ. ನೀರು ಹಾಗೂ ಕಟ್ಟಿಗೆಯನ್ನು ಸಂಗ್ರಹಿಸಲು ಮಹಿಳೆಯರು ಹಲವು ತಾಸುಗಳವರೆಗೆ ಕಷ್ಟಪಟ್ಟು ದುಡಿಯಬೇಕಾದಂತಹ ಪ್ರದೇಶಗಳು ಭಾರತದಲ್ಲಿ ಸಾಕಷ್ಟಿವೆ. ಅಡುಗೆಯೆಂಬ ಸರಳ ಕೆಲಸವನ್ನು ಮಾಡಲು ಗ್ರಾಮೀಣಭಾಗದ ಮಹಿಳೆಯರು ಅಪಾರವಾದ ಶ್ರಮ ಪಡುತ್ತಿರುತ್ತಾರೆ.

ಓರ್ವ ಮಹಿಳೆ ಮನೆಗೆ ಕೊಂಡೊಯ್ಯುವ ಕಟ್ಟಿಗೆ ಹೊರೆಯು ಎಂಟು ಕೆ.ಜಿ.ಗಳಿಂದ 10 ಕೆ.ಜಿ.ವರೆಗೆ ಭಾರವಿರುತ್ತದೆ. ಈ ಕಟ್ಟಿಗೆ ಹೊರೆಯ ಪ್ರಮಾಣವು ಹಾಗೂ ಭಾರವು, ಕುಟುಂಬದ ಗಾತ್ರವನ್ನು ಅವಲಂಬಿಸಿರುತ್ತದೆ. ಒಂದು ಕುಟುಂಬವು ಜಾನುವಾರುಗಳನ್ನು ಹೊಂದಿದ್ದರೆ, ಒಲೆಯನ್ನು ಉರಿಸಲು ಸೆಗಣಿಯ ಬೆರಣಿಗಳನ್ನು ಬಳಸಲಾಗುವುದರಿಂದ, ಮಹಿಳೆ ಹೊರುವ ಕಟ್ಟಿಗೆಯ ಹೊರೆಯು ಸ್ವಲ್ಪಮಟ್ಟಿಗೆ ಕಡಿಮೆಯಿರುತ್ತದೆ. ಮನೆಗೆ ವಾಪಸಾದ ಬಳಿಕ, ಆಕೆ ಆಹಾರವನ್ನು ಸಿದ್ಧಪಡಿಸುತ್ತಾಳೆ ಹಾಗೂ ಪಾತ್ರೆಗಳನ್ನು ತೊಳೆದಿಡುತ್ತಾಳೆ. ಇದರಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನೀರು ಖಾಲಿಯಾಗಿಬಿಡುತ್ತದೆ. ಈಗ ನೀರು ತರಲು ಮತ್ತೆ ಆಕೆ ಹೊರಹೋಗುತ್ತಾಳೆ. ಈ ಕಾಲ್ನಡಿಗೆಯ ಪಯಣದ ಸಂಖ್ಯೆಯು ಆಯಾ ಋತುವನ್ನು, ಕುಟುಂಬದ ಸದಸ್ಯರ ಸಂಖ್ಯೆ ಹಾಗೂ ಮನೆಯಲ್ಲಿರುವ ಪ್ರಾಣಿಗಳನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಆಕೆ ಅದೃಷ್ಟಶಾಲಿಯಾಗಿದ್ದಲ್ಲಿ ಹಾಗೂ ಮನೆಯ ಆಸುಪಾಸಿನಲ್ಲಿ ಕೈಪಂಪ್ ಇದ್ದಲ್ಲಿ, ನೀರನ್ನು ತರಲು ಆಕೆ ನಡೆಸುವ ಪ್ರಯಾಣಗಳ ಸಂಖ್ಯೆ ಆರಕ್ಕೆ ಸೀಮಿತವಾಗಿರುತ್ತದೆ.

ಬೇಸಿಗೆಯಲ್ಲಿ ನೀರಿಗಾಗಿ ಆಕೆಯ ನಡೆಯುವ ದೂರದ ಅಂತರ ಹಾಗೂ ಮಾಡಬೇಕಾದ ಪ್ರಯಾಣಗಳ ಸಂಖ್ಯೆ ಅಧಿಕಗೊಳ್ಳುತ್ತದೆ. ಜನರು ಹಾಗೂ ಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸುತ್ತಾರೆ. ಒಂದು ವೇಳೆ ಆರೋಗ್ಯವಂತಳಾಗಿದ್ದಲ್ಲಿ, ಆಕೆ ಒಂದೇ ಪ್ರಯಾಣದಲ್ಲಿ ಎರಡು ಕೊಡಗಳಲ್ಲಿ ನೀರನ್ನು ಒಯ್ಯುತ್ತಾಳೆ. ಆ ಮೂಲಕ ಆಕೆಯ ನೀರಿಗಾಗಿ ಕೈಗೊಳ್ಳುವ ಪ್ರಯಾಣದ ಸಂಖ್ಯೆಯೂ ಕಡಿಮೆಯಾಗಿರುತ್ತದೆ. ಆಹಾರ ತಯಾರಿಸಲು, ಪಾತ್ರೆಗಳನ್ನು ತೊಳೆಯಲು ಮತ್ತಿತರ ಮನೆಯ ಅಗತ್ಯಗಳಿಗಾಗಿ ನೀರಿನ ಅಪಾರ ಅಗತ್ಯವಿರುತ್ತದೆ.

ಭಾರತೀಯ ಮಾನದಂಡಗಳ ಇಲಾಖೆಯು ಸಿದ್ಧಪಡಿಸಿರುವ ವರದಿಯೊಂದರ ಪ್ರಕಾರ ಫ್ಲಶ್ ಟಾಯ್ಲೆಟ್ ಇಲ್ಲದ ಗ್ರಾಮೀಣ ಮನೆಯೊಂದರಲ್ಲಿ ದಿನಕ್ಕೆ 40 ಲೀಟರ್ ನೀರು ಬೇಕಾಗುತ್ತದೆ. ಒಂದು ವೇಳೆ ಕುಟುಂಬವು ಕನಿಷ್ಠ ಪ್ರಮಾಣದ ನೀರನ್ನು ಉಪಯೋಗಿಸಲು ನಿರ್ಧರಿಸಿದರೂ, ಮಹಿಳೆಯು ಇಡೀ ಕುಟುಂಬಕ್ಕಾಗಿ 200 ಲೀಟರ್ ನೀರನ್ನು ತರಬೇಕಾದ ಅಗತ್ಯವಿರುತ್ತದೆ. ನೀರನ್ನು ತರುವುದಕ್ಕಾಗಿಯೇ ಆಕೆ ದಿನಕ್ಕೆ ಎರಡರಿಂದ ನಾಲ್ಕು ತಾಸುಗಳನ್ನು ವ್ಯಯಿಸುತ್ತಾಳೆ. ಕೆಲವೊಮ್ಮೆ, ಸಣ್ಣ ಪ್ರಾಯದ ಮಕ್ಕಳು ತಮ್ಮ ತಾಯಿಯ ಹೊರೆಯನ್ನು ಕಡಿಮೆಗೊಳಿಸಲು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ನೆರವಾಗುತ್ತಾರೆ.

ಬುಬ್ಲಿ ಗ್ರಾಮಕ್ಕೆ ಕೇವಲ ಒಂದು ಬಾವಿಯಿದೆ. ಆದರೆ ಅದು ಇರುವುದು ಗ್ರಾಮದಿಂದ ತುಸು ದೂರದಲ್ಲಿರುವ ಬುಡಕಟ್ಟು ವಿದ್ಯಾರ್ಥಿಗಳ ವಸತಿ ಶಾಲೆಯ ಆವರಣದಲ್ಲಿ. ನೀರು ಬತ್ತುವವರೆಗೂ ಅದನ್ನು ಗ್ರಾಮಸ್ಥರು ಬಳಸಿಕೊಳ್ಳುತ್ತಾರೆ. ನೀರು ಬತ್ತಿದ ಬಳಿಕ ಗ್ರಾಮಸ್ಧರು ಟ್ಯಾಂಕರ್‌ಗಳಲ್ಲಿ ನೀರನ್ನು ತರಿಸಲು ಹಣಸಂಗ್ರಹಿಸುತ್ತಾರೆ. ಆದರೆ ಜಿಲ್ಲಾಡಳಿತವು ಕಳುಹಿಸುವ ಟ್ಯಾಂಕರ್‌ಗಳು ಈ ಗ್ರಾಮದಲ್ಲಿ ಕಾಣಿಸಿಕೊಳ್ಳುವುದೇ ತೀರಾ ಅಪರೂಪವಾಗಿದೆ.

ಆರೋಗ್ಯದ ಅಪಾಯಗಳು

ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶಗಳಿಂದ ವಂಚಿತರಾಗುವ ಹೊರತಾಗಿ ಈ ಅಗಾಧವಾದ ದೈಹಿಕ ಹೊರೆಯ ಇನ್ನೊಂದು ಕೆಟ್ಟ ಪರಿಣಾಮ ಇದೆ. ಇಂತಹ ಪ್ರಯಾಸಕರ ಹಾಗೂ ದೀರ್ಘಾವಧಿಯ ಕೆಲಸವು ಮಹಿಳೆಯರ ಆರೋಗ್ಯವನ್ನು ಬಲಿತೆಗೆದುಕೊಳ್ಳುತ್ತದೆ. ಬಹುತೇಕ ಪುರುಷರು ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ ಹಾಗೂ ಕುಟುಂಬದ ಎಲ್ಲಾ ರೀತಿಯ ಆವಶ್ಯಕತೆಗಳನ್ನು ಈಡೇರಿಸಲು ಮಹಿಳೆಯರು ಅನಿವಾರ್ಯವಾಗಿ ಕಠಿಣವಾದ ದುಡಿಮೆಯಲ್ಲಿ ತೊಡಗಬೇಕಾಗುತ್ತದೆ.

ವಯಸ್ಸಾದಂತೆ ಮಹಿಳೆಯರು ವಿವಿಧ ಆರೋಗ್ಯ ಸಮಸ್ಯೆಗಳಿಂದ ನರಳಲಾರಂಭಿಸುತ್ತಾರೆ. ಈ ದೀರ್ಘಾವಧಿಯ ಅನಾರೋಗ್ಯಗಳಿಂದಾಗಿ ಅವರಲ್ಲಿ ಅಂಗವೈಕಲ್ಯದ ತೊಂದರೆಗಳುಂಟಾಗುತ್ತವೆ. ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಜೀವನದ ಗುಟಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈ ಮಹಿಳೆಯರಲ್ಲಿ ಜನನಾಂಗದ, ಬೆನ್ನುಮೂಳೆಯ ಹಾಗೂ ಸ್ನಾಯು ಮೂಳೆಗೆ ಸಂಬಂಧಿಸಿದ ತೊಂದರೆಗಳು ಕಂಡುಬರುತ್ತವೆ.

 ಈ ಮಹಿಳೆಯರಲ್ಲಿ ದೇಹದ ಒಳಭಾಗದ ಅಂಗಾಂಗಗಳು ಯೋನಿನಾಳ ಹಾಗೂ ಗುದನಾಳಗಳಿಗೆ ಚಾಚಿಕೊಳ್ಳುವಂತಹ ತೊಂದರೆಗಳು ಕಾಣಿಸಿಕೊಳ್ಳುವುದು ಅಧಿಕವಾಗಿದೆ. ದಿನಾಲೂ ಕಟ್ಟಿಗೆಯನ್ನು ಹೆಕ್ಕಲು ಬಾಗುವುದು ಹಾಗೂ ಭಾರದ ವಸ್ತುಗಳನ್ನು ಹೊರುವುದರಿಂದ ಇಂತಹ ಸಮಸ್ಯೆಗಳುಂಟಾಗುತ್ತವೆ. ಇಂತಹ ಸಮಸ್ಯೆಗಳಿಗಾಗಿ ವೈದ್ಯರನ್ನು ಭೇಟಿಯಾಗಲು ಮಹಿಳೆಯರು ಹೆಚ್ಚಾಗಿ ನಾಚಿಕೊಳ್ಳುತ್ತಾರೆ. ಇದು ಅವರ ಆರೋಗ್ಯದ ಸಮಸ್ಯೆ ಇನ್ನಷ್ಟು ಹದಗೆಡಲು ಕಾರಣವಾಗುತ್ತದೆ.

ಈ ಮಹಿಳೆಯರ ಬೆನ್ನುಹುರಿಯ ಹಾಗೂ ಸ್ನಾಯು-ಮೂಳೆಗಳ ಸಮಸ್ಯೆಗಳಿಗೂ ಸಮರ್ಪಕವಾದ ಚಿಕಿತ್ಸೆ ದೊರೆಯುತ್ತಿಲ್ಲ. ನಿರಂತರವಾಗಿ ಪ್ರಯಾಸಕಾರಿಯಾದ ಮನೆಗೆಲಸವನ್ನು ನಿರ್ವಹಿಸುವ ಗ್ರಾಮೀಣ ಮಹಿಳೆಯರಲ್ಲಿಯೂ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ. ಬೆನ್ನಿನ ಕೆಳಭಾಗದಲ್ಲಿ ಹಾಗೂ ಕುತ್ತಿಗೆಯ ಭಾಗದಲ್ಲಿ ಡಿಸ್ಕ್ ಜಾರುವುದು, ಕಟಿ ಭಾಗದಿಂದ ತೊಡೆಯ ಹಿಂಭಾಗಕ್ಕೆ ಹಾದುಹೋಗುವ ನರವು ಸಂಕುಚಿತಗೊಳ್ಳುವುದು, ಮೊಣಕಾಲ ಸಂಧಿಗಳಲ್ಲಿ ನೋವು ಹಾಗೂ ಭುಜದ ಸಮಸ್ಯೆಗಳು, ಇವರಲ್ಲಿ ಕಂಡುಬರುವ ಸಾಮಾನ್ಯ ತೊಂದರೆಗಳಾಗಿವೆ. ಒಂದು ವೇಳೆ ಅವುಗಳನ್ನು ನಿರ್ಲಕ್ಷಿಸಿದಲ್ಲಿ, ಅವು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತವೆ.

ಭಾಗಶಃ ಅಥವಾ ಸಂಪೂರ್ಣವಾಗಿ ಅಂಗವೈಕಲ್ಯಕ್ಕೊಳಗಾದ ಹಳೆಯ ತಲೆಮಾರುಗಳ ಕೆಲವು ಮಹಿಳೆಯರು ಸಾಮಾನ್ಯವಾಗಿ ಕಾಣಸಿಗುತ್ತಾರೆ. ತಾವು ಹೊಗೆಸೊಪ್ಪು ಸಹಿತ ವೀಳ್ಯ ಸೇವಿಸುವ ಮೂಲಕ ತಮ್ಮ ನೋವನ್ನು ಸಹಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ಈ ಮಹಿಳೆಯರು ಹೇಳಿಕೊಳ್ಳುತ್ತಾರೆ. ನಗರಪ್ರದೇಶಗಳ ಕ್ಲಿನಿಕ್‌ಗಳಿಗೆ ತೆರಳಿ, ವೈದ್ಯಕೀಯ ತಪಾಸಣೆಗೊಳಪಡುವುದು ಹಾಗೂ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುವುದು ಅವರ ಪಾಲಿಗೆ ಅತ್ಯಂತ ದುಬಾರಿಯಾಗಿದೆ ಹಾಗೂ ಅವರನ್ನು ಕಂಗೆಡಿಸಿಬಿಡುತ್ತದೆ. ಕೇಂದ್ರ ಸರಕಾರದ ಆರೋಗ್ಯ ವಿಮಾ ಯೋಜನೆಯ ಅರಿವು ಅವರಿಗಿಲ್ಲ. ಅಧಿಕಾರಶಾಹಿಯ ಕೆಂಪುಪಟ್ಟಿಯ ತಡೆಬೇಲಿಯನ್ನು ದಾಟುವಷ್ಟು ಅವರು ಸಶಕ್ತರಾಗಿಲ್ಲ ಹಾಗೂ ತಮ್ಮ ಆವಶ್ಯಕತೆಗಳಿಗಾಗಿ ಅವರು ಪಟ್ಟುಹಿಡಿಯುವುದಿಲ್ಲ.

ತುರ್ತು ಕಾರ್ಯಾಚರಣೆ ಅಗತ್ಯ

ಅಡುಗೆ ಇಂಧನ, ನೀರು ಹಾಗೂ ಆರೋಗ್ಯ ಪಾಲನೆ ಸೌಲಭ್ಯದ ಕೊರತೆಯು ಈ ಮಹಿಳೆಯರಲ್ಲಿ ಆರೋಗ್ಯದ ಸಮಸ್ಯೆಗಳು ತಲೆದೋರುವುದಕ್ಕೆ ಕಾರಣವಾಗಿದೆ. ವಿವಿಧ ಸಾಮಗ್ರಿಗಳು ಹಾಗೂ ಸೇವೆಗಳ ಗೃಹಬಳಕೆಯ ಕುರಿತ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಾರ್ಯಾಲಯದ 2011-12ನೇ ಸಾಲಿನ ವರದಿಯ ಪ್ರಕಾರ ಶೇ. 21ರಷ್ಟು ಗ್ರಾಮೀಣ ಕುಟುಂಬಗಳ ಪೈಕಿ ಶೇ.21ರಷ್ಟು ಗ್ರಾಮಾಂತರ ಕುಟುಂಬಗಳಿಗೆ ಮಾತ್ರವೇ ಎಲ್‌ಪಿಜಿ ಸಂಪರ್ಕವಿದೆ. ಆದರೆ ನಗರ ಪ್ರದೇಶಗಳ ಶೇ.71ರಷ್ಟು ಕುಟುಂಬಗಳು ಎಲ್‌ಪಿಜಿ ಸಂಪರ್ಕವನ್ನು ಹೊಂದಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಜಾರಿಯ ಬಳಿಕ ಪರಿಸ್ಥಿತಿಯಲ್ಲಿ ತುಸು ಸುಧಾರಣೆಯಾಗಿದೆಯಾದರೂ, ಹಲವಾರು ಜನರು ಇನ್ನಷ್ಟೇ ಈ ಕಾರ್ಯಕ್ರಮದ ಸೌಲಭ್ಯಗಳನ್ನು ಪಡೆಯ ಬೇಕಾಗಿದೆ.

ಬುಬ್ಲಿ ಗ್ರಾಮದ ಮಹಿಳೆಯರು ಕಳೆದ ಎರಡು ವರ್ಷಗಳಿಂದ ಎಲ್‌ಪಿಜಿ ಸಂಪರ್ಕವನ್ನು ನಿರೀಕ್ಷಿಸುತ್ತಿದ್ದಾರೆ. ಎಲ್‌ಪಿಜಿ ಸಂಪರ್ಕಕ್ಕಾಗಿ ದಸ್ತಾವೇಜು ದಾಖಲೆಗಳನ್ನು ಸಲ್ಲಿಸಿದ್ದಾರೆ ಹಾಗೂ ಅದಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿಸಿದ್ದಾರೆ. ನಿಕಟಭವಿಷ್ಯದಲ್ಲಿ ಅವರು ನಳ್ಳಿನೀರಿನ ಸಂಪರ್ಕವನ್ನು ನಿರೀಕ್ಷಿಸುವಂತಿಲ್ಲ. ರಾಜಕೀಯ ಒತ್ತಡವನ್ನು ಸೃಷ್ಟಿಸುವಷ್ಟು ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳ ಧ್ವನಿ ಬಲಿಷ್ಠವಾಗಿಲ್ಲ. ಇದಕ್ಕೆ ಬುಬ್ಲಿ ಗ್ರಾಮ ಪಂಚಾಯತ್ ಪ್ರಧಾನನೂ ಹೊರತಾಗಿಲ್ಲ. ಆತ ಕೂಡಾ ಈ ರೀತಿಯ ಪರಿಶ್ರಮದಾಯಕ ಕೆಲಸಗಳನ್ನು ಮಾಡುತ್ತಿರುತ್ತಾನೆ.

 ಈ ದುರ್ಗಮವಾದ ಪ್ರದೇಶದಲ್ಲಿ ನೆಲೆಸಿರುವ ಈ ಗ್ರಾಮೀಣ ಸಮುದಾಯದಿಂದ ಅಭಿವೃದ್ಧಿಯುತವಾದ ಹಾಗೂ ಸೃಜನಶೀಲ ಚಟುವಟಿಕೆಗಳನ್ನು ನಿರೀಕ್ಷಿಸುವಂತಿಲ್ಲ. ಎಡೆಬಿಡದೆ ಮನೆಗೆಲಸ ಗಳಲ್ಲಿಯೇ ಸಿಕ್ಕಿಹಾಕಿಕೊಳ್ಳುವ ಅವರಿಗೆ ಸಮಯ ಹಾಗೂ ಶಕ್ತಿಯ ಕೊರತೆಯಿದೆ. ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಪ್ರತಿಪಾದಿಸುವ ನಮ್ಮ ಪ್ರಜಾಪ್ರಭುತ್ವದಲ್ಲಿ, ಇಂತಹ ಜನರನ್ನು ತಲುಪಲು ಮತ್ತು ಅವರನ್ನು ಮುಖ್ಯವಾಹಿನಿಗೆ ಕರೆತರುವಂತಹ ಯಾವ ವ್ಯವಸ್ಥೆಯೂ ಇಲ್ಲ. ಸರಕಾರ, ಸಂಸ್ಥೆಗಳು ಹಾಗೂ ನಾಗರಿಕ ಸಮಾಜವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸಲು, ಇಂಧನ ಮತ್ತು ನೀರಿನ ಅಭಾವದಿಂದ ಮಹಿಳೆಯರು ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸಲು ಇದು ಸಕಾಲವಾಗಿದೆ.

ಕೃಪೆ: scroll.in

Writer - ಅಭಿಜಿತ್ ಜಾಧವ್

contributor

Editor - ಅಭಿಜಿತ್ ಜಾಧವ್

contributor

Similar News

ಜಗದಗಲ
ಜಗ ದಗಲ