ಕನ್ನ ಹಾಕುವವರಿಗೆ ಕನ್ನಡಿಯ ಭಯ

Update: 2018-01-09 04:16 GMT

ಆಧಾರ್ ಸೋರಿಕೆ ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಹೇಳಿಕೆಗಳ ಮೇಲೆ ಹೇಳಿಕೆ ನೀಡಿ ಜನರನ್ನು ನಂಬಿಸಲು ಯತ್ನಿಸುತ್ತಿರುವಾಗ, ಬರೇ 500 ರೂಪಾಯಿಗೆ ಹೇಗೆ ಜನರ ಆಧಾರ್ ಮಾಹಿತಿಗಳು ಸೋರಿಕೆಯಾಗುತ್ತಿವೆ ಎನ್ನುವುದನ್ನು ‘ಟ್ರಿಬ್ಯೂನ್’ ವರದಿಗಾರ್ತಿ ಬಹಿರಂಗ ಪಡಿಸಿದ್ದರು. ದತ್ತಾಂಶ ಕೋಶಕ್ಕೆ ಅನಧಿಕೃತ ಪ್ರವೇಶ ಕ್ರಿಮಿನಲ್ ಅಪರಾಧವಾಗಿರುವುದರಿಂದ ಯುಐಡಿಎಐ ಪ್ರಕರಣವನ್ನು ದಾಖಲಿಸಿದೆ ಎಂದು ಹೇಳಲಾಗುತ್ತಿದೆ. ವರದಿಗಾರ್ತಿಯ ಉದ್ದೇಶ ಆಧಾರ್ ಮಾಹಿತಿಗಳನ್ನು ತನ್ನದಾಗಿಸುವುದು ಆಗಿರಲಿಲ್ಲ. ಆಧಾರ್ ಮಾಹಿತಿಗಳ ಸೋರಿಕೆ ಸಾಧ್ಯ ಎನ್ನುವುದನ್ನು ನಿರೂಪಿಸುವುದು ಅವರ ಗುರಿಯಾಗಿತ್ತು.

ಆಧಾರ್ ಸೋರಿಕೆ ಸಾಧ್ಯವೇ ಇಲ್ಲ ಎಂದು ಯುಐಡಿಎಐ ಹೇಳುತ್ತಿರುವಾಗ ಮತ್ತು ಸರಕಾರ ಅದರ ರಾಗಕ್ಕೆ ಪೂರಕವಾಗಿ ತಾಳವನ್ನು ಹಾಕುತ್ತಿರುವಾಗ, ಈ ಸೋರಿಕೆಯ ಅಪಸ್ವರ ಸರಕಾರಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಆದುದರಿಂದ ವರದಿಗಾರ್ತಿಯನ್ನೇ ಅಪರಾಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ. ಇಲ್ಲಿ ಮುಖ್ಯವಾದ ಅಂಶವೆಂದರೆ, ವರದಿಗಾರ್ತಿಯ ಗುರಿ ಮಾಹಿತಿಯ ದುರುಪಯೋಗ ಆಗಿರಲಿಲ್ಲ. ಬದಲಿಗೆ, ಬೇರೆಯವರೂ ಇದೇ ರೀತಿಯಲ್ಲಿ ದುರುಪಯೋಗ ಮಾಡಬಹುದು ಎನ್ನುವುದನ್ನು ಸರಕಾರಕ್ಕೆ ತೋರಿಸಿ ಕೊಡುವುದು ಮತ್ತು ಜನರಲ್ಲಿ ಆಧಾರ್ ಕುರಿತಂತೆ ಜಾಗೃತಿಯನ್ನು ಬಿತ್ತುವುದು ಉದ್ದೇಶವಾಗಿತ್ತು.

ಟ್ರಿಬ್ಯೂನ್ ವರದಿಗಾರ್ತಿಯ ಕಾರ್ಯವನ್ನು ಧನಾತ್ಮಕವಾಗಿ ತೆಗೆದುಕೊಂಡು, ಸೋರಿಕೆಯಾಗುತ್ತಿರುವ ತೂತುಗಳನ್ನು ಭದ್ರಪಡಿಸುವ ಬದಲು, ವರದಿಗಾರ್ತಿಯ ಮೇಲೆಯೇ ಕೇಸು ದಾಖಲಿಸಿದ್ದು ಪರೋಕ್ಷವಾಗಿ ಆಧಾರ್‌ನ ಮೇಲಿರುವ ಜನರ ಶಂಕೆಗಳನ್ನು ಹೆಚ್ಚಿಸಿದೆ. ಟ್ರಿಬ್ಯೂನ್ ವರದಿಯ ಆಧಾರದಲ್ಲಿ ಆಧಾರ್‌ನ್ನು ಮರುವಿಮರ್ಶಿಸಬೇಕಾಗಿದ್ದ ಸರಕಾರ, ಲೋಪವನ್ನು ದೇಶದ ಮುಂದೆ ತೆರೆದಿಟ್ಟ ವರದಿಗಾರ್ತಿಯನ್ನೇ ಆರೋಪಿಯನ್ನಾಗಿಸಲು ನೋಡುತ್ತಿದೆ. ಇದು ಆಧಾರ್‌ನ ಲೋಪದೋಷಗಳನ್ನು ಎತ್ತಿ ತೋರಿಸುವವರಿಗೆ ಸರಕಾರ ನೀಡಿರುವ ಎಚ್ಚರಿಕೆಯಾಗಿದೆ. ಅಂದರೆ ಸರಕಾರದ ದೃಷ್ಟಿಯಲ್ಲಿ ಲೋಪಗಳಿದ್ದರೆ ತೊಂದರೆಯಿಲ್ಲ, ಅದನ್ನು ದೇಶದ ಜನರ ಮುಂದೆ ಎತ್ತಿ ತೋರಿಸಿದರೆ ಮಾತ್ರ ಅಪರಾಧ. ಇಂದು ದೇಶದ ಜನರಿಗೆ ಬೇಕಾಗಿರುವುದು ವರದಿಗಾರ್ತಿಯ ಮೇಲೆ ಕೇಸು ದಾಖಲಿಸಿ ಅವರನ್ನು ಜೈಲು ಪಾಲಾಗಿಸುವುದಲ್ಲ. ವರದಿಗಾರ್ತಿ ಎತ್ತಿ ತೋರಿಸಿದ ಲೋಪಕ್ಕೆ ಸರಕಾರದ ಉತ್ತರವನ್ನು ಜನರು ನಿರೀಕ್ಷಿಸುತ್ತಿದ್ದಾರೆ.

ವರದಿಗಾರ್ತಿಯ ಮೂಲಕ ಮಾಹಿತಿ ಸೋರಿಕೆಯಾಗಿರುವುದು ಯಾವುದೇ ತನಿಖೆಯಿಂದ ಬಹಿರಂಗವಾಗಿರುವುದಲ್ಲ. ಸ್ವತಃ ವರದಿಗಾರ್ತಿಯೇ ಹೇಳಿಕೊಂಡ ಬಳಿಕ ಅದು ಸರಕಾರಕ್ಕೂ ಜನರಿಗೂ ಗೊತ್ತಾಗಿದೆ. ಅವರ ಸ್ಥಾನದಲ್ಲಿ ನಿಜಕ್ಕೂ ದುರ್ಬಳಕೆ ಮಾಡುವ ಅಪರಾಧಿಯೊಬ್ಬನಿದ್ದಿದ್ದರೆ ಆತನೇನೂ ಅದನ್ನು ಜನರ ಮುಂದೆ ಹೇಳುತ್ತಿರಲಿಲ್ಲ. ಅಷ್ಟೇ ಏಕೆ, ಒಬ್ಬ ವರದಿಗಾರ್ತಿಗೆ ಸಾಧ್ಯವಾಗಿರುವುದು ದೇಶಾದ್ಯಂತ ವಿಸ್ತರಿಸಿಕೊಂಡಿರುವ ದುಷ್ಕರ್ಮಿ ಜಾಲಗಳಿಗೆ ಸಾಧ್ಯವಾಗದೇ ಇರುತ್ತದೆಯೇ? 500 ರೂಪಾಯಿಗೆ ಮಾಹಿತಿಯನ್ನು ಸೋರಿಕೆ ಮಾಡುವವರು ಇರುವ ಇಲಾಖೆಯಲ್ಲಿ, ಅದಕ್ಕಿಂತ ಹೆಚ್ಚು ಹಣ ನೀಡಿದರೆ ಇನ್ನೇನೇನು ಸೋರಿಕೆಯಾಗಬಹುದು? ಸರಕಾರ ಇವೆಲ್ಲದರ ಕಡೆಗೆ ಗಮನ ಹರಿಸುವ ಬದಲು, ವರದಿಗಾರ್ತಿಯೆನ್ನುವ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೊರಟಿರುವುದು ಅದರ ಹತಾಶೆಯನ್ನು ತೋರಿಸುತ್ತದೆ.

ಆಧಾರ್ ಹೇರಿಕೆಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿರುವುದು, ಈ ಗುರುತು ಚೀಟಿಯ ಬಗ್ಗೆ ಇನ್ನಷ್ಟು ವಿಮರ್ಶೆ ಮಾಡಲು ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕೆ ಕಾರಣರಾಗಿರುವ ಪತ್ರಕರ್ತೆ ಅಭಿನಂದನಾರ್ಹರೆೇ ಹೊರತು, ಯಾವ ಕಾರಣಕ್ಕೂ ಆರೋಪಿಯಲ್ಲ. ಎತ್ತಿಗೆ ಜ್ವರ ಬಂತೆಂದು ಎಮ್ಮೆಗೆ ಬರೆ ಹಾಕಿದರೆ ಎತ್ತಿನ ಕಾಯಿಲೆ ಗುಣವಾಗುವುದೇ? ಈ ಹಿಂದೆ ರಕ್ಷಣಾ ಇಲಾಖೆಯಲ್ಲಿ ತೆಹಲ್ಕಾ ನಡೆಸಿದ ಕುಟುಕು ಕಾರ್ಯಾಚರಣೆಯೂ ಇದೇ ರೀತಿಯಲ್ಲಿ ಚರ್ಚೆಗೊಳಗಾಗಿತ್ತು. ರಕ್ಷಣಾ ಇಲಾಖೆಯಲ್ಲಿ ಶಸ್ತ್ರಾಸ್ತ್ರ ಖರೀದಿ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಹಿನ್ನೆಲೆಯಲ್ಲಿ ತೆಹಲ್ಕಾ ತಂಡ ಕೆಲಸ ಮಾಡಿತ್ತು. ಹೇಗೆ ದೇಶದ ಭದ್ರತೆಯನ್ನೇ ಭ್ರಷ್ಟಾಚಾರ ಕೊರೆಯುತ್ತಿದೆ ಎನ್ನುವ ಅಂಶ ಇದರಿಂದ ಬಹಿರಂಗವಾಯಿತು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ತೀವ್ರ ಮುಖಭಂಗಕ್ಕೆ ಒಳಗಾಯಿತು. ಆದರೆ ಒಂದು ಗುಂಪು ಮಾತ್ರ, ಕುಟುಕು ಕಾರ್ಯಾಚರಣೆ ಮಾಡಿದ ಪತ್ರಕರ್ತರನ್ನೇ ಆರೋಪಿಸ್ಥಾನದಲ್ಲಿ ನಿಲ್ಲಿಸಲು ಹವಣಿಸಿತು. ನಿಜವಾದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ಇದು ನಡೆಯಿತು. ಸಿಬಿಐ ಸೇರಿದಂತೆ ಬೇರೆ ಬೇರೆ ತನಿಖಾಸಂಸ್ಥೆಗಳನ್ನು ಬಳಸಿ ತೆಹಲ್ಕಾ ಪತ್ರಕರ್ತರಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಯಿತು. ಕೊನೆಗೂ, ಹಲವು ತಂತ್ರಗಳ ಮೂಲಕ ತೆಹಲ್ಕಾ ಎನ್ನುವ ಪತ್ರಿಕೆಯನ್ನೇ ವ್ಯವಸ್ಥೆ ಮುಚ್ಚಿಸಿತು. ವರದಿಗಾರರ ತನಿಖಾ ರೀತಿಯನ್ನೇ ಪ್ರಶ್ನಿಸುವ ಪ್ರವೃತ್ತಿ ಇದೀಗ ಮೋದಿ ನೇತೃತ್ವದ ಸರಕಾರದಲ್ಲಿ ಇನ್ನಷ್ಟು ತೀವ್ರವಾಗಿದೆ. ಸತ್ಯವನ್ನು ಬಹಿರಂಗಪಡಿಸುವ ಪತ್ರಕರ್ತರ ಮೇಲೆ ಪ್ರಕರಣವನ್ನು ದಾಖಲಿಸಿ ಅವರ ಕೈ ಕಟ್ಟಿ ಹಾಕುವ ಹುನ್ನಾರದಲ್ಲಿದೆ ವ್ಯವಸ್ಥೆ. ಅಮಿತ್ ಶಾ ಮಗನ ಅಕ್ರಮ ವ್ಯವಹಾರಗಳನ್ನು ಬಹಿರಂಗ ಪಡಿಸಿದ ‘ದಿ ವೈರ್’ ವೆಬ್‌ಸೈಟ್‌ನ ಮೇಲೆಯೂ ಇತ್ತೀಚೆಗೆ ಇಂತಹದ್ದೇ ದಾಳಿ ನಡೆಯಿತು. ಇದೇ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಅವರ ಪುತ್ರ ಮಾತ್ರ ಯಾವ ನಾಚಿಕೆಯೂ ಇಲ್ಲದೆ ಗಣ್ಯರಾಗಿ ಓಡಾಡಿಕೊಂಡಿದ್ದಾರೆ.

ಒಂದು ಮಾತ್ರ ಸತ್ಯ. ವಾಸ್ತವವನ್ನು ಎತ್ತಿತೋರಿಸುವ ಕನ್ನಡಿಗಳಾಗಿದ್ದಾರೆ ಪತ್ರಕರ್ತರು. ಕನ್ನಡಿಯನ್ನು ಒಡೆಯುವುದರಿಂದ ಅಥವಾ ಅದಕ್ಕೆ ಕಪ್ಪು ಬಳಿಯುವುದರಿಂದ ವಾಸ್ತವಗಳನ್ನು ಬಚ್ಚಿಡಲಾಗುವುದಿಲ್ಲ. ಒಬ್ಬನಲ್ಲ ನೂರು ವರದಿಗಾರರ ಮೇಲೆ ಪ್ರಕರಣ ದಾಖಲಿಸಿದರೂ ಆಧಾರ್‌ನಲ್ಲಿ ನಡೆದ ಗಂಭೀರ ಸೋರಿಕೆಯನ್ನು ಸರಿ ಎಂದು ನಿರೂಪಿಸಲು ಸರಕಾರಕ್ಕೆ ಸಾಧ್ಯವಿಲ್ಲ. ಅಮಿತ್ ಶಾರ ಪುತ್ರನ ಅವ್ಯವಹಾರವನ್ನು ತೆರೆದಿಟ್ಟ ಪತ್ರಕರ್ತ ಜೈಲಿಗೆ ಸೇರುವುದರಿಂದ ಅಮಿತ್ ಶಾ ತಮ್ಮ ಕಪ್ಪು ಮುಖವನ್ನು ಮುಚ್ಚಿಡಲಾಗುವುದಿಲ್ಲ. ತನಿಖಾ ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ತೀವ್ರವಾಗುತ್ತಿವೆ. ಸರಕಾರದ ಬೆದರಿಕೆಗೆ ಅಂಜುವವರು ಅಂತಹದೊಂದು ಸಾಹಸಕ್ಕೆ ಇಳಿಯುವುದೇ ಇಲ್ಲ. ತಪ್ಪು ಮಾಡುವವರಿಗೇ ನಾಚಿಕೆ, ಭಯವಿಲ್ಲ ಎಂದ ಮೇಲೆ, ತಪ್ಪನ್ನು ಎತ್ತಿ ತೋರಿಸಿ ತನ್ನ ಪತ್ರಿಕಾಧರ್ಮವನ್ನು ಕಾಪಾಡುವ ಪತ್ರಕರ್ತ ಯಾಕೆ ಭಯಪಡಬೇಕು? ಮಾಧ್ಯಮ ಹಕ್ಕುಗಳನ್ನು ನಿಯಂತ್ರಿಸಿದಷ್ಟೂ ರಾಜಕಾರಣಿಗಳು ಸಮಾಜದ ಮುಂದೆ ಇನ್ನಷ್ಟು ಬೆತ್ತಲಾಗುತ್ತಾ ಹೋಗುತ್ತಾರೆ. ಒಂದು ದೊಡ್ಡ ಕನ್ನಡಿ ಒಡೆದರೆ ಅದರಿಂದ ಹತ್ತು ಸಣ್ಣ ಕನ್ನಡಿಗಳು ಹುಟ್ಟಿಕೊಳ್ಳುತ್ತವೆ ಎನ್ನುವುದನ್ನು ನಮ್ಮ ನಾಯಕರು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News