ನ್ಯೂಟನ್ ಗಿಂತ 1000 ವರ್ಷ ಮೊದಲು ಬ್ರಹ್ಮಗುಪ್ತ ಗುರುತ್ವಾಕರ್ಷಣೆಯ ಸೂತ್ರ ಕಂಡು ಹಿಡಿದಿದ್ದ

Update: 2018-01-09 08:07 GMT

ಜೈಪುರ್, ಜ.9: ಖ್ಯಾತ ವಿಜ್ಞಾನಿ ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆಯ ಸೂತ್ರವನ್ನು ಕಂಡು ಹಿಡಿಯುವ ಒಂದು ಸಾವಿರ ವರ್ಷಗಳಷ್ಟು ಹಿಂದೆಯೇ ಎರಡನೇ ಬ್ರಹ್ಮಗುಪ್ತ  ಅದನ್ನು ಪತ್ತೆ ಹಚ್ಚಿದ್ದ ಎಂದು ರಾಜಸ್ಥಾನದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವರಾಗಿರುವ ವಾಸುದೇವ ದೇವ್ನಾನಿ ಹೇಳಿದ್ದಾರೆ.

ರಾಜಸ್ಥಾನ ವಿಶ್ವವಿದ್ಯಾಲಯದ 72ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಕೆಲ ದಿನಗಳ ಹಿಂದೆ ನಾನು ನ್ಯೂಟನ್ ಬಗ್ಗೆ ಓದುತ್ತಿದ್ದೆ. ಗುರುತ್ವಾಕರ್ಷಣೆಯ ಸೂತ್ರವನ್ನು ಕಂಡು ಹಿಡಿದವರ್ಯಾರು... ನ್ಯೂಟನ್- ಹಾಗೆಂದು ನಾನು ಓದಿದ್ದೇನೆ, ನೀವು ಕೂಡ. ಆದರೆ ನೀವು ಇನ್ನೂ ಆಳಕ್ಕಿಳಿದರೆ, ಈ  ಸೂತ್ರವನ್ನು ಎರಡನೇ ಬ್ರಹ್ಮಗುಪ್ತ ನ್ಯೂಟನ್ ಗಿಂತ ಒಂದು ಸಾವಿರ ವರ್ಷ ಮುಂಚಿತವಾಗಿಯೇ ನಮಗೆ ನೀಡಿದ್ದಾನೆ'' ಎಂದು ಹೇಳಿದರು.

"ಈ ವಿಚಾರವನ್ನು ಪಠ್ಯಪುಸ್ತಕಗಳಲ್ಲೇಕೆ ಸೇರಿಸಲಾಗಿಲ್ಲ?. ಹೌದು, ಆಧುನಿಕ ವಿಜ್ಞಾನಿಗಳು ನಂತರ ಅದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಕಲಿಸಬೇಕು'' ಎಂದವರು ಹೇಳಿದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಒಂದನೇ ತರಗತಿಯಿಂದ 12ನೇ ತರಗತಿ ತನಕದ ಪಠ್ಯಗಳಲ್ಲಿ ಬದಲಾವಣೆ ತರಲಾಗಿದೆ. ಹಲವು ವರ್ಷಗಳ ಕಾಲ ರಾಜಸ್ಥಾನದಲ್ಲಿಯೂ ಅಕ್ಬರ್ ಒಬ್ಬ ಮಹಾನ್ ದೊರೆಯಾಗಿದ್ದ ಎಂಬ ಪಾಠವಿತ್ತು,. ಈಗ ನಾವು ಆ ಪಾಠದ ಬದಲು ಮಹಾರಾಣಾ ಪ್ರತಾಪ್ ಬಗೆಗಿನ ಪಾಠ ಸೇರಿಸಿದ್ದೇವೆ'' ಎಂದರು.

ಕೆಲ ಸಮಯದ ಹಿಂದೆ ನಡೆದ ಜೆಎನ್‍ಯು ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು ರಾಜಸ್ಥಾನದಲ್ಲಿ ಯಾವುದೇ ಕನ್ಹಯ್ಯಾ ಹುಟ್ಟಬಾರದು ಎಂದು ವಿವಾದ ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News