ಜಾಗಿಂಗ್ ಮಾಡಿ... ಈ ಆರೋಗ್ಯ ಲಾಭಗಳನ್ನು ನಿಮ್ಮದಾಗಿಸಿ

Update: 2018-01-10 10:32 GMT

  ಬೆಳಗಿನ ಜಾವ ಜಾಗಿಂಗ್‌ನಲ್ಲಿ ತೊಡಗಿಕೊಳ್ಳುವುದು ಎಲ್ಲ ವಯೋಮಾನದ ವ್ಯಕ್ತಿಗಳು ಮಾಡಬಹುದಾದ ಅತ್ಯಂತ ಸರಳ ರೂಪದ ವ್ಯಾಯಾಮವಾಗಿದೆ. ಜಾಗಿಂಗ್ ಒತ್ತಡ ಶಮನಕ್ಕೆ ನೆರವಾಗುವ ಎಂಡಾರ್ಫಿನ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಮಿದುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಪೂರಕವಾಗಿದೆ. ಅದು ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮಗೊಳಿಸುತ್ತದೆ.

ನಿಯಮಿತವಾಗಿ ಜಾಗಿಂಗ್ ಮಾಡುವುದರಿಂದ ಪುರುಷರು ಮತ್ತು ಮಹಿಳೆಯರ ಆಯಸ್ಸು 5-6 ವರ್ಷ ಹೆಚ್ಚುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇಲ್ಲಿವೆ ಜಾಗಿಂಗ್‌ನ ಆರೋಗ್ಯಲಾಭಗಳು........

* ಹೃದಯದ ಆರೋಗ್ಯ

 ಜಾಗಿಂಗ್ ಹೃದಯದ ಸ್ನಾಯುಗಳನ್ನು ಬಲಗೊಳಿಸಿ ಅವು ಹೆಚ್ಚು ಪರಿಣಾಮಕಾರಿ ಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅದು ರಕ್ತದೊತ್ತಡ, ರಕ್ತದಲ್ಲಿಯ ಗ್ಲುಕೋಸ್ ಮಟ್ಟ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಅದು ಹೃದಯವು ರಕ್ತವನ್ನು ತ್ವರಿತವಾಗಿ ಪಂಪ್ ಮಾಡಲು ನೆರವಾಗುತ್ತದೆ ಮತ್ತು ಹೃದಯ ಕಾಯಿಲೆಗಳನ್ನು ತಡೆಯುತ್ತದೆ.

* ಮಾನಸಿಕ ಆರೋಗ್ಯ

ನೀವು ಜಾಗಿಂಗ್ ಮಾಡುತ್ತಿರುವಾಗ ನಿಮ್ಮ ಭಾವನೆಗಳನ್ನು ನಿರ್ಧರಿಸುವ ಎಂಡಾರ್ಫಿನ್ ಹಾರ್ಮೋನ್‌ಗಳು ಬಿಡುಗಡೆಗೊಳ್ಳುತ್ತವೆ. ಇವು ನಿಮ್ಮ ಒತ್ತಡವನ್ನು ನಿವಾರಿಸಿ ನೀವು ಸಹಜವಾಗಿರುವಂತೆ ಮಾಡುತ್ತವೆ. ಇದು ಜಾಗಿಂಗ್ ಮಾಡಿದ ನಂತರ ಶರೀರವು ಉಲ್ಲಸಿತವಾಗಿರುವುದಕ್ಕೆ ಕಾರಣಗಳಲ್ಲೊಂದಾಗಿದೆ.

* ಮೂಳೆಗಳಿಗೆ ಲಾಭ

ನೀವು ಜಾಗಿಂಗ್ ಮಾಡುವಾಗ ಶರೀರದಲ್ಲಿನ ಮೂಳೆಗಳು ಕೆಲ ಪ್ರಮಾಣದ ಒತ್ತಡವನ್ನು ಅನುಭವಿಸುತ್ತವೆ ಮತ್ತು ಇದು ಪ್ರತಿದಿನ ಹೆಚ್ಚುವರಿ ಹೊರೆಯನ್ನು ನಿರ್ವಹಿಸಲು ಮೂಳೆಗಳ ಅಂಗಾಂಶಗಳನ್ನು ಸಜ್ಜುಗೊಳಿಸುತ್ತದೆ. ಜಾಗಿಂಗ್ ಮೂಳೆಗಳನ್ನು ಸದೃಢಗೊಳಿಸುವ ಮೂಲಕ ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.

* ಮಾಂಸಖಂಡಗಳನ್ನು ಬಲಗೊಳಿಸುತ್ತದೆ

 ಜಾಗಿಂಗ್ ಶರೀರದ ದೊಡ್ಡ ಮಾಂಸಖಂಡಗಳನ್ನೊಳಗೊಂಡ ತೀವ್ರ ದೈಹಿಕ ಚಟುವಟಿಕೆಯಾಗಿದೆ. ಅದು ಮಂಡಿರಜ್ಜು, ಪ್ರಷ್ಠ, ಮೊಣಕಾಲು ಇತ್ಯಾದಿ ಮಾಂಸಖಂಡಗಳಿಗೆ ಅಗತ್ಯ ವ್ಯಾಯಾಮವನ್ನು ನೀಡುತ್ತದೆ. ಮಾಂಸಖಂಡಗಳನ್ನು ಉತ್ತಮವಾಗಿ ರೂಪುಗೊಳಿಸುವ ಮೂಲಕ ಶರೀರಕ್ಕೆ ಆಕರ್ಷಕ ನೋಟವನ್ನು ನೀಡುತ್ತದೆ.

* ದೇಹತೂಕವನ್ನು ಇಳಿಸುತ್ತದೆ

ಜಾಗಿಂಗ್ ಶರೀರದಲ್ಲಿಯ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ನೆರವಾಗುತ್ತದೆ. ನೀವು ಜಾಗಿಂಗ್‌ನ್ನಷ್ಟೇ ಮಾಡಿದರೆ ಅದು ಶರೀರದ ತೂಕವನ್ನು ತಗ್ಗಿಸುವುದಿಲ್ಲ. ಅದರೊಂದಿಗೆ ಸೂಕ್ತ ಆಹಾರವನ್ನು ಸೇವಿಸಿದರೆ ಮಾತ್ರ ಶರೀರದ ತೂಕ ಶೀಘ್ರವಾಗಿ ಕಡಿಮೆಯಾಗುತ್ತದೆ. ಇದೊಂದು ಎರೋಬಿಕ್ ವ್ಯಾಯಾಮವಾಗಿರುವುದರಿಂದ ಶರೀರದ ಚಯಾಪಚಯಕ್ಕೆ ವೇಗ ನೀಡಿ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸುವುದನ್ನು ಸುಲಭ ಗೊಳಿಸುತ್ತದೆ.

* ಉಸಿರಾಟ ವ್ಯವಸ್ಥೆ

ಜಾಗಿಂಗ್ ಶರೀರದ ಉಸಿರಾಟ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅದು ಹೆಚ್ಚು ಆಮ್ಲಜನಕವನ್ನು ಒಳಗೆ ತೆಗೆದುಕೊಳ್ಳುವ ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉಸಿರಾಟದ ತೊಂದರೆಯಿರುವರಿಗೆ ಜಾಗಿಂಗ್ ಒಳ್ಳೆಯ ಆಯ್ಕೆಯಾಗಿದೆ.

* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಮ್ಮ ಶರೀರದ ರೋಗ ನಿರೋಧಕ ಶಕ್ತಿಯು ಉತ್ತಮವಾಗಿದ್ದರೆ ಅದು ಎಲ್ಲ ಬಗೆಯ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಜಾಗಿಂಗ್ ಹೆಚ್ಚಿನ ದೈಹಿಕ ಶಕ್ತಿಯನ್ನು ನೀಡುವ ಜೊತೆಗೆ ಬಿಳಿಯ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡ, ಖಿನ್ನತೆ ಹಾಗೂ ದಣಿವನ್ನು ತಗ್ಗಿಸುತ್ತದೆ.

* ಸಂಧಿವಾತ

ಜಾಗಿಂಗ್ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ. ಅದು ಕಶೇರು ಮತ್ತು ಪ್ರಷ್ಠಗಳ ಮೂಳೆಗಳನ್ನು ಬಲಗೊಳಿಸುತ್ತದೆ. ಸಂಧಿವಾತವನ್ನು ತಡೆಯುತ್ತದೆ. ಈಗಾಗಲೇ ಸಂಧಿವಾತದಿಂದ ಬಳಲುತ್ತಿರುವವರು ಜಾಗಿಂಗ್‌ನ ಬದಲಾಗಿ ವೇಗದ ನಡಿಗೆಯಲ್ಲಿ ತೊಡಗಿಕೊಳ್ಳಬಹುದು.

* ಚಿಂತನೆಗೆ ನೆರವಾಗುತ್ತದೆ

ನೀವು ಜಟಿಲ ಸ್ಥಿತಿಯಲ್ಲಿದ್ದು ಏನು ಮಾಡಬೇಕು ಎನ್ನುವುದನ್ನು ಚಿಂತಿಸಲು ಸಾಧ್ಯವಾಗುತ್ತಿಲ್ಲವಾದರೆ ಜಾಗಿಂಗ್ ಆರಂಭಿಸುವುದು ಒಳ್ಳೆಯದು. ಅದು ಒತ್ತಡವನ್ನು ತಗ್ಗಿಸಿ ನಿಮ್ಮ ಚಿಂತನೆಗಳಿಗೆ ಪೂರಕವಾಗುವ ಮೂಲಕ ನೀವು ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಜಾಗಿಂಗ್ ಮಾಡುತ್ತಿರುವಾಗ ನಿಮಗೆ ಮುಖ್ಯವಾದುದು ಯಾವುದು ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ ಮತ್ತು ಪರಿಹಾರವನ್ನು ಕಂಡುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

* ವಯಸ್ಸಾಗುವುದನ್ನು ತಡೆಯುತ್ತದೆ

ಜಾಗಿಂಗ್ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮನ್ನು ಒಳ್ಳೆಯ ಸ್ಥಿತಿಯಲ್ಲಿರಿಸುತ್ತದೆ. ಹೆಚ್ಚಿನ ಶಕ್ತಿ ಮತ್ತು ಧನಾತ್ಮಕತೆ ನೀವು ಇನ್ನೂ ಯುವಕರಂತೆ ಕಾಣುವಂತೆ ಮಾಡುತ್ತವೆ. ಅದು ಚರ್ಮದಲ್ಲಿಯ ರಕ್ತನಾಳಗಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಶರೀರವನ್ನು ತಾಜಾ ಮತ್ತು ಚೇತೋಹಾರಿಯನ್ನಾಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News