ಭಾರತೀಯನ ಅಮೆರಿಕನ್ ಪೌರತ್ವ ರದ್ದು
Update: 2018-01-10 23:03 IST
ವಾಶಿಂಗ್ಟನ್, ಜ. 10: ಭಾರತೀಯರೊಬ್ಬರ ಅಮೆರಿಕ ಪೌರತ್ವವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ರದ್ದುಪಡಿಸಿದೆ. ಅಕ್ರಮ ವಲಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸರಕಾರದ ಯೋಜನೆಯ ಮೊದಲ ಬಲಿ ಇದಾಗಿದೆ.
ನ್ಯೂಜರ್ಸಿಯ ಕಾರ್ಟರೆಟ್ ನಿವಾಸಿ 43 ವರ್ಷದ ಬಲ್ಜಿಂದರ್ ಸಿಂಗ್ ಅಮೆರಿಕದ ಮಹಿಳೆಯೊಬ್ಬರನ್ನು ಮದುವೆಯಾಗುವ ಮೂಲಕ 2006ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದಿದ್ದರು.
ಆದರೆ, ಅವರು 1991ರಲ್ಲಿ ಯಾವುದೇ ಪ್ರಯಾಣ ದಾಖಲೆಗಳು ಅಥವಾ ಗುರುತು ಚೀಟಿಗಳಿಲ್ಲದೆ ದೇವಿಂದರ್ ಸಿಂಗ್ ಎಂಬ ಹೆಸರಿನಲ್ಲಿ ಅಮೆರಿಕಕ್ಕೆ ಬಂದಿದ್ದರು ಎಂದು ಕಾನೂನು ಇಲಾಖೆ ತಿಳಿಸಿದೆ.
ಕಳೆದ ಶುಕ್ರವಾರ ನ್ಯೂಜರ್ಸಿಯ ಫೆಡರಲ್ ನ್ಯಾಯಾಧೀಶರೊಬ್ಬರು ಅವರ ಪೌರತ್ವವನ್ನು ಹಿಂದಕ್ಕೆ ಪಡೆದುಕೊಂಡರು. ಈ ಮೂಲಕ ಬಲ್ಜಿಂದರ್ ಸಿಂಗ್ ಅಮೆರಿಕದ ‘ಕಾನೂನುಬದ್ಧ ಖಾಯಂ ನಿವಾಸಿ’ ಎಂಬ ಸ್ಥಾನಮಾನಕ್ಕೆ ಮರಳಿದರು. ಆದರೆ, ಈ ಸ್ಥಾನಮಾನ ಹೊಂದಿರುವವರನ್ನು ಗಡಿಪಾರು ಮಾಡಬಹುದಾಗಿದೆ.