ಬಾಹ್ಯಾಕಾಶದಲ್ಲಿ ಕಳೆದು ಹೋದ ಅಮೆರಿಕದ ನಿಗೂಢ ಉಪಗ್ರಹ

Update: 2018-01-10 17:46 GMT

ವಾಶಿಂಗ್ಟನ್, ಜ. 10: ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್ ಎಕ್ಸ್’ ರವಿವಾರ ಉಡಾಯಿಸಿದ್ದ ಅಮೆರಿಕ ಸರಕಾರದ ರಹಸ್ಯ ಉಪಗ್ರಹ ಕಳೆದುಹೋಗಿದೆ.

ಕೃತಕ ಉಪಗ್ರಹ ‘ಝುಮಾ’ವನ್ನು ಫ್ಲೋರಿಡದ ಕೇಪ್ ಕ್ಯಾನವರಲ್ ವಾಯು ಪಡೆ ನಿಲ್ದಾಣದಿಂದ ರವಿವಾರ ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ರಾಕೆಟ್ ಮೂಲಕ ಉಡಾಯಿಸಲಾಗಿತ್ತು.

ಆದರೆ ಉಪಗ್ರಹವು ನಿಗದಿಯಂತೆ ರಾಕೆಟ್‌ನ ಮೇಲ್ಭಾಗದಿಂದ ಕಳಚಿಕೊಳ್ಳಲಿಲ್ಲ ಹಾಗೂ ಸ್ಥಿರ ಕಕ್ಷೆಯನ್ನು ತಲುಪಲಿಲ್ಲ ಎಂದು ಅಮೆರಿಕ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ರಾಕೆಟ್‌ನಲ್ಲಿದ್ದ ಉಪಗ್ರಹ ಯಾವುದು ಎನ್ನುವುದನ್ನು ಅವರು ಬಹಿರಂಗಪಡಿಸಲಿಲ್ಲ.

ಈ ಉಡಾವಣೆಯ ಸುತ್ತ ನಿಗೂಢತೆ ಆವರಿಸಿತ್ತು. ಈ ಉಪಗ್ರಹವನ್ನು ಯಾವ ಇಲಾಖೆ ಸಿದ್ಧಪಡಿಸಿದೆ ಎನ್ನುವುದು ಕೂಡ ಬಹಿರಂಗವಾಗಿಲ್ಲ.

ಈ ಉಡಾವಣೆಯ ವೈಫಲ್ಯಕ್ಕೆ ಸ್ಪೇಸ್ ಎಕ್ಸ್ ರಾಕೆಟ್‌ನ ದೋಷಗಳು ಕಾರಣವೋ ಅಥವಾ ಝುಮಾ ಉಪಗ್ರಹದ ದೋಷಗಳು ಕಾರಣವೋ ಎನ್ನುವುದು ಗೊತ್ತಾಗಿಲ್ಲ. ತನ್ನ ರಾಕೆಟ್ ನಿಗದಿಯಂತೆ ಕೆಲಸ ಮಾಡಿದೆ ಎಂದು ಸ್ಪೇಸ್ ಎಕ್ಸ್ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News