‘ರಾಯ್ಟರ್ಸ್’ ವರದಿಗಾರರ ವಿರುದ್ಧ ‘ರಹಸ್ಯ ಕಾಯ್ದೆ’ ಹೇರಿದ ಮ್ಯಾನ್ಮಾರ್
ಯಾಂಗನ್ (ಮ್ಯಾನ್ಮಾರ್), ಜ. 10: ಮ್ಯಾನ್ಮಾರ್ ಸರಕಾರವು ಬುಧವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಇಬ್ಬರು ವರದಿಗಾರರ ವಿರುದ್ಧ ಸರಕಾರಿ ರಹಸ್ಯಗಳ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಿದೆ.
ಈ ಅಪರಾಧಕ್ಕೆ ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
31 ವರ್ಷದ ವಾ ಲೋನ್ ಮತ್ತು 27 ವರ್ಷದ ಸೋ ಊ ಅವರನ್ನು ಡಿಸೆಂಬರ್ 12ರಂದು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗುವಂತೆ ಬರಹೇಳಿ ಬಂಧಿಸಲಾಗಿತ್ತು.
ತಾವು ಭೇಟಿಯಾಗಲು ಹೋಗಿದ್ದ ಅಧಿಕಾರಿಗಳು ಕೆಲವು ದಾಖಲೆಗಳನ್ನು ತಮಗೆ ನೀಡಿದ ಕೂಡಲೇ ತಮ್ಮನ್ನು ಬಂಧಿಸಲಾಗಿತ್ತು ಎಂಬುದಾಗಿ ಈ ಪತ್ರಕರ್ತರು ತಮಗೆ ಹೇಳಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ಅವರು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ವರದಿ ಮಾಡುವ ‘ರಾಯ್ಟರ್ಸ್’ ತಂಡದ ಸದಸ್ಯರಾಗಿದ್ದರು.
ಅಮಾನುಷ ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 6.55 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ರಖೈನ್ ರಾಜ್ಯದಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆ ಹೇಳಿದೆ.
‘‘ನಾವು ಸತ್ಯವನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಿದ್ದೆವು. ಅದಕ್ಕಾಗಿ ಅವರು ನಮ್ಮನ್ನು ಬಂಧಿಸಿದ್ದಾರೆ’’ ಎಂದು 30 ನಿಮಿಷಗಳ ವಿಚಾರಣೆಯ ಬಳಿಕ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾ ಲೋನ್ ಹೇಳಿದರು.
ಕಪ್ಪು ಬಟ್ಟೆ ಧರಿಸಿ ಪತ್ರಕರ್ತರ ಪ್ರತಿಭಟನೆ
ಇಬ್ಬರು ‘ರಾಯ್ಟರ್ಸ್’ ಪತ್ರಕರ್ತರ ಬಂಧನದ ವಿರುದ್ಧ ಯಾಂಗನ್‌ನ ಪತ್ರಕರ್ತರು ನ್ಯಾಯಾಲಯದ ಹೊರಗಡೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
‘ಪತ್ರಿಕೋದ್ಯಮವು ಅಪರಾಧವಲ್ಲ’ ಮತ್ತು ‘ಬಂಧಿತ ಪತ್ರಕರ್ತರನ್ನು ಈಗಲೇ ಬಿಡುಗಡೆ ಮಾಡಿ’ ಎಂಬ ಬರಹಗಳನ್ನು ಅವರು ಪ್ರದರ್ಶಿಸಿದರು.