ಜಸ್ಟಿಸ್ ಲೋಯಾ ಸಾವು ಪ್ರಕರಣ: ಜ.12ರಂದು ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸುಪ್ರೀಂ ಕೋರ್ಟ್

Update: 2018-01-11 09:36 GMT

ಹೊಸದಿಲ್ಲಿ, ಜ.11: ಸೊಹ್ರಾಬುದ್ದೀನ್ ಶೇಖ್ ಎನ್‍ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಸ್ಟಿಸ್  ಬಿ.ಎಚ್. ಲೋಯಾ ಅವರ ಶಂಕಾಸ್ಪದ ಸಾವು ಪ್ರಕರಣದ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಮಹಾರಾಷ್ಟ್ರ ಮೂಲದ ಪತ್ರಕರ್ತ ಬಿ.ಆರ್. ಲೋನೆ ಅವರು ಸಲ್ಲಿಸಿದ ಅಪೀಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜ.12ರಂದು ಕೈಗೆತ್ತಿಕೊಳ್ಳಲಿದೆ.

ಈ ಪ್ರಕರಣದ ತನಿಖೆಯನ್ನು ತುರ್ತಾಗಿ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅಪೀಲನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್  ಅವರನ್ನೊಳಗೊಂಡ ಪೀಠವು ಇಂದು ಪರಿಗಣಿಸಿದ್ದು, ನಾಳೆಗೆ ವಿಚಾರಣೆ ಮುಂದೂಡಿದೆ.

ಈ ಪ್ರಕರಣ ಬಹಳ ಸೂಕ್ಷ್ಮವಾಗಿರುವುದರಿಂದ ಪ್ರಾಮಾಣಿಕ ತನಿಖೆ ಅಗತ್ಯವಿದೆ ಎಂದು ಲೋನೆ ತಮ್ಮ ಅಪೀಲಿನಲ್ಲಿ ತಿಳಿಸಿದ್ದರು. ಲೋಯಾ ಅವರು ನಾಗ್ಪುರಲ್ಲಿ ತಮ್ಮ ಸಹೋದ್ಯೋಗಿಯೊಬ್ಬರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದ ಸಂದರ್ಭ 2014ರ ಡಿಸೆಂಬರ್ 1ರಂದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರೆಂದು ಹೇಳಲಾಗಿತ್ತು.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 'ದಿ ಕಾರವಾನ್' ಪತ್ರಿಕೆಯಲ್ಲಿ ಲೋಯಾ ಅವರ ಸೋದರಿ ತಮಗಿರುವ ಹಲವಾರು ಶಂಕೆಗಳನ್ನು ಹೊರಗೆಡಹಿದ ನಂತರ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಂಡಿತ್ತು. ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಸಹಿತ ಒಟ್ಟು 23 ಮಂದಿ ಆರೋಪಿಗಳಿದ್ದಾರೆ. ಸೊಹ್ರಾಬುದ್ದೀನ್ ಶೇಖ್ ಮತ್ತವರ ಪತ್ನಿ ಕೌಸರ್ ಬೀ ಹಾಗೂ ಅವರ ಸಹವರ್ತಿ ತುಳಸೀದಾಸ್ ಪ್ರಜಾಪತಿಯನ್ನು ನವೆಂಬರ್ 2005ರಲ್ಲಿ ಎನ್‍ಕೌಂಟರ್ ನಲ್ಲಿ ಸಾಯಿಸಲಾಗಿತ್ತಾದರೂ ಇದು ನಕಲಿ ಎನ್‍ಕೌಂಟರ್ ಆಗಿದೆ ಎಂದು ಹಲವರು ಆರೋಪಿಸಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ವಿಚಾರಣೆಯನ್ನು ಮುಂಬೈಗೆ ಸ್ಥಳಾಂತರಿಸಲಾಗಿತ್ತು.

ನ್ಯಾ.ಲೋಯಾ ಸಾವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹೀಗೆ.. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News