ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಇಲ್ಲಿವೆ ಸರಳ ಮಾರ್ಗಗಳು

Update: 2018-01-11 11:34 GMT

ಶೇ.80ರಷ್ಟು ಹೃದ್ರೋಗಿಗಳ ಸಾವಿಗೆ ಕಾರಣವಾಗುತ್ತಿರುವ ಕೊಲೆಸ್ಟ್ರಾಲ್ ಸಾಮಾನ್ಯ ಸಮಸ್ಯೆಯಾಗಿದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ವ್ಯಕ್ತಿಯ ಸಾವಿಗೂ ಕಾರಣವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗಿರುವ ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೃದಯ ಕಾಯಿಲೆ, ಮೂತ್ರಪಿಂಡ ವೈಫಲ್ಯ ಮತ್ತು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.

ಕೊಲೆಸ್ಟ್ರಾಲ್ ನೀರಿನಲ್ಲಿ ಕರಗುವುದಿಲ್ಲ ಮತ್ತು ಶರೀರದಲ್ಲಿ ರಕ್ತದ ಹರಿವಿನೊಂದಿಗೆ ಸಾಗುತ್ತದೆ. ಶರೀರಕ್ಕೆ ಪ್ರತಿದಿನ ಕೊಲೆಸ್ಟ್ರಾಲ್ ಅಗತ್ಯವಿದೆ, ಆದರೆ ಅದಕ್ಕಾಗಿ ಪ್ರತಿದಿನ ಫಾಸ್ಟ್‌ಫುಡ್ ತಿನ್ನಬೇಕೆಂದು ಅರ್ಥವಲ್ಲ. ಕೆಟ್ಟ ಕೊಲೆಸ್ಟ್ರಾಲ್‌ನ್ನು ತಗ್ಗಿಸಲು ನೈಸರ್ಗಿಕ ಮಾರ್ಗಗಳಿಲ್ಲಿವೆ.

ಕಿತ್ತಳೆ ರಸದ ಸೇವನೆ

ಪ್ರತಿದಿನ ಬೆಳಿಗ್ಗೆ ಎರಡು ಗ್ಲಾಸ್ ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತ್ವರಿತವಾಗಿ ತಗ್ಗಿಸಲು ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ. ಅದು ಶರೀರದಲ್ಲಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ. ರಸಕ್ಕೆ ಸಕ್ಕರೆಯನ್ನು ಸೇರಿಸಬೇಡಿ. ಅದರ ಆರೋಗ್ಯಕರ ಪರ್ಯಾಯವಾಗಿರುವ ಜೇನನ್ನು ಬೆರಸಿಕೊಂಡು ಸೇವಿಸಿ.

ಊಟ ಲಘುವಾಗಿರಲಿ

ಒಂದೇ ಬಾರಿಗೆ ಭೂರಿ ಭೋಜನ ಮಾಡುವುದಕ್ಕಿಂತ ದಿನಕ್ಕೆ ಆರೇಳು ಬಾರಿ ಲಘು ಆಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವು ಶೀಘ್ರವಾಗಿ ಇಳಿಯುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಿನಿ ಊಟಗಳನ್ನು ಮಾಡುವುದರಿಂದ ಪರಿಧಮನಿ ಹೃದ್ರೋಗಗಳ ಅಪಾಯ ಶೇ.10ರಿಂದ ಶೇ.20ರಷ್ಟು ಕಡಿಮೆಯಾಗುತ್ತದೆ.

ಇಡೀ ಧಾನ್ಯದ ಬ್ರೆಡ್

ಬಿಳಿಯ ಬ್ರೆಡ್‌ನ ಬದಲು ಕಂದು ಬಣ್ಣದ ಬ್ರೆಡ್ ತಿನ್ನಿ. ಅದು ಎಚ್‌ಡಿಎಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಇಡಿಯ ಧಾನ್ಯದ ಬ್ರೆಡ್ ಹೃದ್ರೋಗಗಳ ವಿರುದ್ಧ ಹೋರಾಡಲು ಅಗತ್ಯವಾದ ನಾರಿನಂಶವನ್ನು ಶರೀರಕ್ಕೆ ಒದಗಿಸುತ್ತದೆ. ನಿಮ್ಮ ಆಹಾರದಲ್ಲಿ ಕಂದು ಅಕ್ಕಿ ಮತ್ತು ಗೋದಿಯ ಪಾಸ್ತಾವನ್ನು ಸೇರಿಸಿಕೊಳ್ಳಿ. ಅದು ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುವ ನಾರಿನಂಶವನ್ನು ಒಳಗೊಂಡಿರುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯು ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ತಗ್ಗಿಸುವ ಮಾನೊಸ್ಯಾಚುರೇಟೆಡ್ ಫ್ಯಾಟ್ ಅನ್ನು ಒಳಗೊಂಡಿರುತ್ತದೆ. ಸಲಾಡ್ ಡ್ರೆಸಿಂಗ್‌ಗೆ ಅಥವಾ ಅಡುಗೆಗೆ ಆಲಿವ್ ಎಣ್ಣೆಯ ಬಳಕೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಉತ್ತಮ ಪರ್ಯಾಯವಾಗಿದೆ.

ದಾಲ್ಚಿನ್ನಿ

ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ಆರು ಗ್ರಾಮ್‌ನಷ್ಟು ದಾಲ್ಚಿನ್ನಿಯನ್ನು ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿಕೊಳ್ಳಬಹುದಾಗಿದೆ. ಇದನ್ನು ಸಾರಿನಲ್ಲಿ, ಖಾದ್ಯಗಳಲ್ಲಿ, ಅಷ್ಟೇ ಏಕೆ ಅನ್ನಕ್ಕೂ ಸೇರಿಸಬಹುದಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುವ ಜೊತೆಗೆ ದೇಹತೂಕ ಇಳಿಸಲೂ ಸಹಕಾರಿಯಾಗಿದೆ.

ದ್ರಾಕ್ಷಿ ಹಣ್ಣು

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವವರು ದ್ರಾಕ್ಷಿ ಹಣ್ಣುಗಳನ್ನು ತಿನ್ನಬಹುದಾಗಿದೆ. ಅದು ಕೊಲೆಸ್ಟ್ರಾಲ್ ಅನ್ನು ತಗ್ಗಿಸುವ ನೀರಿನಲ್ಲಿ ಕರಗಬಲ್ಲ ನಾರು ಮತ್ತು ಸಮೃದ್ಧ ಪೆಕ್ಟಿನ್ ಅನ್ನು ಒಳಗೊಂಡಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣ ದಲ್ಲಿಡಲು ಬೆರಿ ಮತ್ತು ಸೇಬುಹಣ್ಣುಗಳನ್ನೂ ತಿನ್ನಬಹುದು.

ಓಟ್ ಮೀಲ್

ಓಟ್ ಅಥವಾ ತೋಕೆ ಗೋದಿಯು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ಅದು ಕರಗಬಲ್ಲ ನಾರು, ಬಿಟಾ-ಗ್ಲುಕಾನ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಶೇ.12ರಿಂದ ಶೇ.24ರಷ್ಟು ಕಡಿಮೆ ಮಾಡುತ್ತದೆ. ಬೆಳಗ್ಗಿನ ತಿಂಡಿಯಾಗಿ ಓಟ್‌ಮೀಲ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಬಹುದು.

ಸಕ್ಕರೆಯ ಬದಲು ಜೇನು ಬಳಸಿ

ನೈಸರ್ಗಿಕ ಜೇನು ಹೃದಯ ಕಾಯಿಲೆಗಳು ಮತ್ತು ಮಿದುಳಿನ ಆಘಾತವನ್ನು ತಡೆಯಬಲ್ಲ, ಕೊಲೆಸ್ಟ್ರಾಲ್ ಅನ್ನು ತಗ್ಗಿಸುವ ಪೋಷಕಾಂಶಗಳನ್ನು ಒಳಗೊಂಡಿದೆ. ಜೇನು ಕೊಲೆಸ್ಟ್ರಾಲ್ ಮಟ್ಟವನ್ನು ಗಣನೀಯವಾಗಿ ತಗ್ಗಿಸುವುದರಿಂದ ಅದು ಸಕ್ಕರೆಗೆ ಆರೋಗ್ಯಕರ ಪರ್ಯಾಯವಾಗಿದೆ.

ಒಮೆಗಾ-3 ಫ್ಯಾಟಿ ಆ್ಯಸಿಡ್ ಸಮೃದ್ಧ ಆಹಾರ

ಒಮೆಗಾ-3 ಫ್ಯಾಟಿ ಆ್ಯಸಿಡ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅದು ಸಾಲ್ಮನ್, ಬಂಗುಡೆ, ಟುನಾದಂತಹ ಮೀನುಗಳಲ್ಲಿ ಸಮೃದ್ಧವಾಗಿದೆ. ಸಿಗಡಿ ಮತ್ತು ಮೀನೆಣ್ಣೆ ಪೂರಕಗಳಲ್ಲಿಯೂ ಒಮೆಗಾ-3 ಫ್ಯಾಟಿ ಆ್ಯಸಿಡ್ ಇದೆ.

ಪ್ರತಿನಿತ್ಯ ವ್ಯಾಯಾಮ

ನಮ್ಮ ಶರೀರವು ಕ್ರಿಯಾಶೀಲ ಮತ್ತು ಆರೋಗ್ಯಕರವಾಗಿರಲು ಪ್ರತಿ ದಿನ ವ್ಯಾಯಾಮದ ಅಗತ್ಯವಿದೆ. 30 ನಿಮಿಷಗಳ ವ್ಯಾಯಾಮ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಬಿರುಸಿನ ನಡಿಗೆಯೂ ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಧೂಮ್ರಪಾನ ಬೇಡ

ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳಿಂದ ದೂರವಿರಬೇಕು ಎಂದಾದರೆ ಧೂಮ್ರಪಾನದಿಂದಲೂ ದೂರವಿರಬೇಕು. ಧೂಮ್ರಪಾನಿಗಳು ತಮ್ಮ ಚಟವನ್ನು ಬಿಟ್ಟರೆ ಎಚ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ ಮತ್ತು ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News