ಕರ್ನಾಟಕಕ್ಕೆ ರೋಚಕ ಗೆಲುವು ತಂದುಕೊಟ್ಟ ಅಂಪೈರ್!

Update: 2018-01-11 14:14 GMT

ವಿಶಾಖಪಟ್ಟಣ, ಜ.11: ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ದಕ್ಷಿಣ ವಲಯದ ಟ್ವೆಂಟಿ-20 ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಹೈದರಾಬಾದ್‌ನ ವಿರುದ್ಧ ರೋಚಕ ಜಯ ಸಾಧಿಸಿದೆ. ಆದರೆ, ಕರ್ನಾಟಕದ ಗೆಲುವಿನ ಹಿಂದೆ ಅಂಪೈರ್ ಔದಾರ್ಯ ಕೆಲಸ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡ 5 ವಿಕೆಟ್‌ಗೆ 203 ರನ್ ಗಳಿಸಿತ್ತು. ಅಂಪೈರ್ ಔದಾರ್ಯದಿಂದ ಹೈದರಾಬಾದ್ ಗೆಲುವಿಗೆ 206 ರನ್ ಪರಿಷ್ಕತ ಗುರಿ ನೀಡಿತು. ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯ ಕೊನೆಗೊಂಡ ಬಳಿಕ ಹೈದರಾಬಾದ್ ಆಟಗಾರರ ಅಂಪೈರ್ ನಿರ್ಧಾರವನ್ನು ಪ್ರತಿಭಟಿಸಿದರು. ಅದರಿಂದ ಯಾವುದೇ ಪ್ರಯೊಜನವಾಗಲಿಲ್ಲ. ಕರ್ನಾಟಕ ತಂಡದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಮುಹಮ್ಮದ್ ಸಿರಾಜ್ ಎಸೆತವನ್ನು ಮಿಡ್ ವಿಕೆಟ್‌ನತ್ತ ತಳ್ಳಿ ಎರಡು ರನ್ ಗಳಿಸಿದರು. ಫೀಲ್ಡಿಂಗ್ ಮಾಡುತ್ತಿದ್ದ ಹೈದರಾಬಾದ್‌ನ ಎಡಗೈ ಸ್ಪಿನ್ನರ್ ಮೆಹದಿ ಹಸನ್ ಚೆಂಡನ್ನು ತಡೆಯುವ ಯತ್ನದಲ್ಲಿ ಅವರ ಎಡ ಕಾಲು ಬೌಂಡರಿಲೈನ್‌ಗೆ ತಾಗಿರುವುದು ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಅಂಪೈರ್ ಉಲ್ಲಾಸ್ ಈ ಬಗ್ಗೆ ಮೂರನೇ ಅಂಪೈರ್ ಮೊರೆ ಹೋಗದೆ ಪಂದ್ಯವನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದ್ದರು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು.

ಕರ್ನಾಟಕ ಬೌಲಿಂಗ್ ಮಾಡಲು ಮೈದಾನಕ್ಕೆ ವಾಪಸಾದ ಬಳಿಕ ನಾಯಕ ವಿನಯ್‌ಕುಮಾರ್ ಅವರು ಅಂಪೈರ್‌ರೊಂದಿಗೆ ದೀರ್ಘ ಸಮಯ ಮಾತನಾಡಿದರು. ಆನಂತರ ಕರ್ನಾಟಕದ ಒಟ್ಟು ಸ್ಕೋರ್‌ಗೆ ಎರಡು ರನ್ ಸೇರಿಸಲಾಯಿತು. ಹೈದರಾಬಾದ್ ಗೆಲುವಿಗೆ 206 ಪರಿಷ್ಕೃತ ಗುರಿ ನೀಡಲಾಯಿತು. ಕಾಕತಾಳೀಯವೆಂಬಂತೆ ಹೈದರಾಬಾದ್ 2 ರನ್‌ನಿಂದ ಪಂದ್ಯವನ್ನು ಸೋತಿದೆ.

ಪಂದ್ಯ ಕೊನೆಗೊಂಡ ಬಳಿಕ ಕರ್ನಾಟಕ ಸ್ಕೋರ್‌ಗೆ 2 ರನ್ ಸೇರ್ಪಡೆಗೊಳಿಸಿರುವುದು, ತನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದಕ್ಕೆ ಹೈದರಾಬಾದ್ ನಾಯಕ ಅಂಬಟಿ ರಾಯುಡು ಅಂಪೈರ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಅಂಪೈರ್ ವರ್ತನೆ ಖಂಡಿಸಿ ಹೈದರಾಬಾದ್ ತಂಡದ ಸದಸ್ಯರು ಮೈದಾನವನ್ನು ತೊರೆಯದೇ ಸೂಪರ್ ಓವರ್ ನಡೆಸಲು ಒತ್ತಾಯಪಡಿಸಿದರು. ಎರಡೂ ತಂಡಗಳ ನಡುವಿನ ವಾಗ್ವಾದದಿಂದಾಗಿ ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಆಂಧ್ರ-ಕೇರಳ ಪಂದ್ಯ ಸರಿಯಾದ ಸಮಯಕ್ಕೆ ಆರಂಭವಾಗಲಿಲ್ಲ. ಆ ಪಂದ್ಯವನ್ನು 13 ಓವರ್‌ಗೆ ಕಡಿತಗೊಳಿಸಲಾಯಿತು.

  ‘‘ನಮ್ಮ ಇನಿಂಗ್ಸ್ ಆರಂಭವಾದಾಗ ಸ್ವಲ್ಪ ಗೊಂದಲವಿತ್ತು. ನೀವು ಸ್ಕೋರನ್ನು ಬದಲಿಸಬಾರದು. ನಮ್ಮ ಗುರಿ 204 ರನ್. ನಾವು ಅಷ್ಟು ಸ್ಕೋರನ್ನು ಮಾತ್ರ ಚೇಸಿಂಗ್ ಮಾಡುತ್ತೇವೆಂದು ಅಂಪೈರ್‌ಗೆ ಹೇಳಿದ್ದೆವು. ಅವೆಲ್ಲವನ್ನೂ ಮತ್ತೆ ನೋಡುತ್ತೇನೆ. ಈಗ ನೀವು ಪಂದ್ಯ ಆರಂಭಿಸಿ ಎಂದು ಹೇಳಿದ್ದರು. ಪಂದ್ಯ ಮುಗಿದ ಬಳಿಕ ಅಂಪೈರ್ ಬಳಿ ತೆರಳಿ ಸೂಪರ್ ಓವರ್ ನಡೆಸುವಂತೆ ಕೇಳಿಕೊಂಡಿದ್ದೆವು. ಸ್ಕೋರ್ ಸಮಬಲಗೊಂಡ ಕಾರಣ ನಾವು ಈ ಬೇಡಿಕೆ ಇಟ್ಟಿದ್ದೆವು. ಆದರೆ ನಮ್ಮ ಬೇಡಿಕೆಯನ್ನು ಈಡೇರಿಸಲಿಲ್ಲ. ನಿಯಮದ ಪ್ರಕಾರ ಅಂಪೈರ್ ತಕ್ಷಣವೇ ಆಟಗಾರನ ತಪ್ಪು ಗಮನಿಸಿ ತೀರ್ಪು ನೀಡಬೇಕಾಗಿತ್ತು. ಆದರೆ, ಇಲ್ಲಿ ಹಾಗೆ ಆಗಿಲ್ಲ’’ ಎಂದು ರಾಯುಡು ಹೇಳಿದ್ದಾರೆ.

ಇದೇ ವೇಳೆ ಕರ್ನಾಟಕದ ಪರ ಕರುಣ್ ನಾಯರ್ ಅಗ್ರ ಸ್ಕೋರರ್ (77, 42 ಎಸೆತ, 10 ಬೌಂಡರಿ, 1 ಸಿಕ್ಸರ್) ಎನಿಸಿಕೊಂಡಿದ್ದರೆ, ಕೃಷ್ಣಪ್ಪ ಗೌತಮ್(57, 31 ಎಸೆತ, 4 ಬೌಂಡರಿ, 4 ಸಿಕ್ಸರ್)ನಾಯರ್‌ಗೆ ಸಮರ್ಥ ಸಾಥ್ ನೀಡಿದರು.

ಹೈದರಾಬಾದ್‌ನ ರವಿ ಕರಿನ್(2-33) ಉತ್ತಮ ಬೌಲಿಂಗ್ ಮಾಡಿದರು. ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಅಕ್ಷತ್ ರೆಡ್ಡಿ(70, 29 ಎಸೆತ, 3 ಬೌಂಡರಿ, 7ಸಿಕ್ಸರ್)ಭರ್ಜರಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಸಮೀಪ ತಲುಪಿಸಿದ್ದರು. ಆದರೆ, ಹೈದರಾಬಾದ್ 2 ರನ್ ಕೊರತೆ ಎದುರಿಸಿತು. ಕರ್ನಾಟಕದ ಪರ ಹಿರಿಯ ಬೌಲರ್ ಸ್ಟುವರ್ಟ್ ಬಿನ್ನಿ (3-29) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News