ತನ್ನ ಮಗುವಿನ ಜೊತೆ ಈ ನಿರೂಪಕಿ ಸುದ್ದಿ ಓದಿದ್ದೇಕೆ?
ಇಸ್ಲಾಮಾಬಾದ್, ಜ. 11: ಪಾಕಿಸ್ತಾನದ ಕಸೂರ್ ಎಂಬ ನಗರದಲ್ಲಿ ನಡೆದ 8 ವರ್ಷದ ಬಾಲಕಿಯೊಬ್ಬಳ ಬರ್ಬರ ಅತ್ಯಾಚಾರ ಮತ್ತು ಕೊಲೆಯಿಂದ ದೇಶ ತಲ್ಲಣಿಸಿರುವಂತೆಯೇ, ಟಿವಿ ಚಾನೆಲೊಂದರ ನಿರೂಪಕಿಯೊಬ್ಬರು ಬುಧವಾರ ತನ್ನ ಮಗಳೊಂದಿಗೆ ಸುದ್ದಿಯನ್ನು ಓದುವುದರ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
‘ಸಮಾ ಟಿವಿ’ಯ ಸುದ್ದಿ ನಿರೂಪಕಿ ಕಿರಣ್ ನಾಝ್ ತನ್ನ ಮಗುವನ್ನು ತನ್ನ ಮಡಿಲಲ್ಲಿ ಕುಳ್ಳಿರಿಸಿ, ‘‘ಇಂದು ನಾನು ಕಿರಣ್ ನಾಝ್ ಅಲ್ಲ. ಇಂದು ನಾನೊಬ್ಬ ತಾಯಿ. ಅದಕ್ಕಾಗಿ ನಾನಿಲ್ಲಿ ನನ್ನ ಮಗಳೊಂದಿಗೆ ಇಲ್ಲಿ ಕುಳಿತಿದ್ದೇನೆ’’ ಎಂದು ಹೇಳುತ್ತಾ ಕಾರ್ಯಕ್ರಮವನ್ನು ಆರಂಭಿಸಿದರು.
ಒಂದೂವರೆ ನಿಮಿಷ ಭಾವನಾತ್ಮಕವಾಗಿ ಮಾತನಾಡಿದ ನಾಝ್, ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರಗಳು ಮತ್ತು ಕೊಲೆಗಳನ್ನು ಖಂಡಿಸಿದರು. ‘‘ಅತ್ಯಂತ ಸಣ್ಣ ಶವಪೆಟ್ಟಿಗೆಗಳು ಅತ್ಯಂತ ಭಾರವಾಗಿರುತ್ತವೆ ಎಂಬ ಮಾತು ಸತ್ಯ. ಮೃತ ಮಗುವಿನ ಶವಪೆಟ್ಟಿಗೆಯ ಹೊರೆ ಇಡೀ ಪಾಕಿಸ್ತಾನದ ಮೇಲಿದೆ’’ ಎಂದರು.
8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಪಂಜಾಬ್ ಪ್ರಾಂತದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಬುಧವಾರ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ದೇವರೇ ನ್ಯಾಯ ಕೊಡುತ್ತಾರೆ
ಭಾರತದ ಗಡಿಯಿಂದ ಸ್ವಲ್ಪವೇ ದೂರದಲ್ಲಿರುವ ಕಸೂರ್ ಪಟ್ಟಣದಲ್ಲಿ ಜನವರಿ 4ರಂದು ಟ್ಯೂಶನ್ ತರಗತಿಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿಯ ಹೆತ್ತವರು ಸೌದಿ ಅರೇಬಿಯಕ್ಕೆ ಯಾತ್ರೆಗೆ ತೆರಳಿದ್ದರು.
ಬಾಲಕಿಯು ಅಪರಿಚಿತ ವ್ಯಕ್ತಿಯೊಂದಿಗೆ ಇರುವ ಸಿಸಿಟಿವಿ ಚಿತ್ರವೊಂದನ್ನು ಬಾಲಕಿಯ ಕುಟುಂಬ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿಯು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವರದಿಗಳು ಹೇಳಿವೆ.
‘‘ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆಗೆ ಶೋಕ ವ್ಯಕ್ತವಾಗುತ್ತದೆ, ತನಿಖೆ ನಡೆಯುತ್ತದೆ, ಆಯೋಗಗಳ ರಚನೆಯಾಗುತ್ತದೆ, ಸ್ವಯಂಪ್ರೇರಿತ ಕ್ರಮಗಳು ಜರಗುತ್ತವೆ. ಆದರೆ, ಬಾಲಕಿಗೆ ನಿಮ್ಮ ನ್ಯಾಯ ಬೇಕಾಗಿಲ್ಲ. ನ್ಯಾಯ ನಿರ್ಣಯದ ದಿನದಂದು ಆಕೆ ದೇವರಲ್ಲಿ ತನ್ನ ಸಾವನ್ನು ಪ್ರಶ್ನಿಸುತ್ತಾಳೆ ಮತ್ತು ತನ್ನ ತಪ್ಪೇನೆಂದು ಕೇಳುತ್ತಾಳೆ. ಆಗ ದೇವರೇ ಅವಳಿಗೆ ನ್ಯಾಯ ಕೊಡುತ್ತಾರೆ’’ ಎಂದು ನಾಝ್ ಹೇಳಿದರು.