ಶಾಲೆಯ ಅವ್ಯವಸ್ಥೆ ಸರಿಪಡಿಸಿ

Update: 2018-01-11 18:31 GMT

ಮಾನ್ಯರೇ,

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹಲವು ಮೂಲಭೂತ ಸೌಲಭ್ಯದ ಕೊರತೆಯಿಂದ ಬಳಲುತ್ತಿದ್ದು, ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ ಇವರಿಗೆ ಬಳಸಲು ಒಂದು ಶೌಚಾಲಯವಿಲ್ಲ. ಮಧ್ಯಾಹ್ನದ ಬಿಸಿಊಟ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಅಲ್ಲದೆ ಬೆಳಗಿನ ಜಾವದಲ್ಲಿ ಸಾರ್ವಜನಿಕರು ಶಾಲೆಯ ಸುತ್ತಮುತ್ತಲೇ ಮಲ ವಿಸರ್ಜನೆ ಮಾಡುತ್ತಾರೆ. ಇದರ ದುರ್ವಾಸನೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸಹಿಸಲಾಗುತ್ತಿಲ್ಲ.

ಮತ್ತೊಂದೆಡೆ ಶಾಲೆಯ ಸುತ್ತಲಿರುವ ಕಾಂಪೌಂಡ್‌ಮತ್ತು ಗೇಟ್ ಸಂಪೂರ್ಣವಾಗಿ ಬಿದ್ದು ಹೋಗಿರುವುದರಿಂದ ಸಂಜೆ ವೇಳೆ ಪುಂಡುಪೋಕರಿಗಳು ಒಳ ನುಗ್ಗಿ ವಿದ್ಯಾರ್ಥಿಗಳ ಆಟೋಟಗಳಿಗಾಗಿ ಶಾಲೆಯ ಆವರಣದಲ್ಲಿ ಅಳವಡಿಸಲಾದ ವಸ್ತುಗಳನ್ನು ಕಿತ್ತೆಸೆಯುತ್ತಿದ್ದಾರೆ. ಶಾಲೆಯ ಕೆಲವು ಕೊಠಡಿಗಳ ಕಿಟಕಿ ಮತ್ತು ಬಾಗಿಲುಗಳು ಸಮರ್ಪಕವಾಗಿಲ್ಲದಿರುವುದರಿಂದ ರಾತ್ರಿ ಸಮಯದಲ್ಲಿ ಕೇಲವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇದರ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಗಮನ ಹರಿಸುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಅನುಕೂಲ ಮಾಡಿ ಕೊಡಬೇಕು.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News