ನ್ಯೂಝಿಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಜನಾಂಗೀಯ ಮೆನು: ವ್ಯಾಪಕ ಟೀಕೆ

Update: 2018-01-12 17:05 GMT

ವೆಲ್ಲಿಂಗ್ಟನ್, ಜ.12: ನ್ಯೂಝಿಲ್ಯಾಂಡ್‌ನ ರೆಸ್ಟೋರೆಂಟ್ ಒಂದರಲ್ಲಿ ಜನಾಂಗೀಯ ನಿಂದನೆ ಮಾಡುವ ರೀತಿಯ ಹೆಸರುಗಳುಳ್ಳ ಭೋಜನದ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇಲ್ಲಿನ ಕ್ರೈಸ್ಟ್‌ಚರ್ಚ್‌ನಲ್ಲಿ ಕಾರ್ಯಾಚರಿಸುತ್ತಿರುವ ಬಾಂಬೂಝಲ್ ಹೆಸರಿನ ರೆಸ್ಟೋರೆಂಟ್‌ನಲ್ಲಿ ಈ ರೀತಿಯ ಭೋಜನ ಪಟ್ಟಿ ಸಿದ್ಧಪಡಿಸಲಾಗಿದೆ.

ಈ ರೆಸ್ಟೋರೆಂಟ್‌ನಲ್ಲಿ ಸಿಗುವ ಕೆಲವು ತಿನಿಸುಗಳಿಗೆ ಚಿರ್ರಿ ಗರಿಕ್ ಅನ್ ಪ್ರವ್ನ್ ಡಂಪ್ರಿಂಗ್, ಹೊ ಲಿ ಕೊಕ್, ಝೂ ಡೈನಾಸ್ಟಿ ಮತ್ತು ಸ್ನೇಕ್ ಮದರ್ ಮುಂತಾದ ಹೆಸರುಗಳನ್ನು ಇಡಲಾಗಿತ್ತು. ಇದನ್ನು ಗಮನಿಸಿದ ಅಲೈಸ್ ಗಲೆಟ್ಲಿ ಎಂಬಾಕೆ ಈ ತಿನಿಸುಗಳ ಹೆಸರು ಸಹಿತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಈ ಬಗ್ಗೆ ಮೊದಲ ಬಾರಿ ವಿರೋಧ ವ್ಯಕ್ತಪಡಿಸಿದ್ದರು.

ರೆಸ್ಟೋರೆಂಟ್ ಮಾಲಕರ ಪ್ರಕಾರ ಕಳೆದ ಎರಡು ವರ್ಷಗಳಿಂದ ಅವರು ಈ ಹೆಸರುಗಳುಳ್ಳ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದು ಅವುಗಳ ಹೆಸರುಗಳ ಬಗ್ಗೆ ಈವರೆಗೆ ಯಾರೂ ಆಕ್ಷೇಪವೆತ್ತಿಲ್ಲ. ಗ್ರಾಹಕರು ಇದನ್ನು ಹಾಸ್ಯವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಆದರೆ ಸದ್ಯ ಬಂದಿರುವ ಟೀಕೆಗಳನ್ನು ಗಣನೆಗೆ ತೆಗೆದುಕೊಂಡು ಬದಲಾವಣೆಗಳನ್ನು ಮಾಡುವುದಾಗಿ ರೆಸ್ಟೋರೆಂಟ್ ಮಾಲಕರು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News