2017ರಲ್ಲಿ ಪ್ರಧಾನಿ ಮೋದಿ ಹೇಳಿದ ಸುಳ್ಳುಗಳು ಮತ್ತು ಅರ್ಧ ಸತ್ಯಗಳು

Update: 2018-01-14 08:21 GMT

ಹೊಸದಿಲ್ಲಿ, ಜ.14: 2017ರಲ್ಲಿ ಪ್ರಧಾನಿ ಮೋದಿಯವರು ನೀಡಿದ್ದ ಕೆಲ ಹೇಳಿಕೆಗಳ ಬಗ್ಗೆ ಹಾಗು ಅದರ ಸತ್ಯಾಸತ್ಯತೆಯ ಬಗ್ಗೆ altnews.in ವರದಿ ಮಾಡಿದೆ. ಪ್ರಧಾನಿಯವರ ಕೆಲ ಹೇಳಿಕೆಗಳು ಸುಳ್ಳು ಹಾಗು ಅರ್ಧ ಸತ್ಯಗಳಾಗಿದ್ದು, ಅಂತಹ ಕೆಲ ಹೇಳಿಕೆಗಳು ಇಲ್ಲಿವೆ.

1. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತದ ‘ಮೊಟ್ಟ ಮೊದಲ’ ಮೆಟ್ರೋದ ಪ್ರಯಾಣಿಕ

ದಿಲ್ಲಿ ಮೆಟ್ರೊದ ಮಜೆಂಟಾ ಲೇನ್ ಉದ್ಘಾಟನೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದರು. 2002ರಲ್ಲಿ ಮೊದಲ ಬಾರಿಗೆ ದಿಲ್ಲಿಯಲ್ಲಿ ಮೆಟ್ರೊ ಆರಂಭವಾದಾಗ ವಾಜಪೇಯಿ ಇದರ ಮೊದಲ ಪ್ರಯಾಣಿಕರಾಗಿದ್ದರು ಎಂದು ಡಿಸೆಂಬರ್ 25ರಂದು ಮೋದಿ ಹೇಳಿದ್ದರು. ಆದರೆ ಇದು ನಿಜವಲ್ಲ. ಮೊದಲ ಮೆಟ್ರೊ ಸೇವೆ ಆರಂಭವಾದದ್ದು ಕೊಲ್ಕತ್ತಾದಲ್ಲಿ. 1972ರಲ್ಲಿ ಇಂದಿರಾಗಾಂಧಿ ಇದಕ್ಕೆ ಶಿಲಾನ್ಯಾಸ ನೆರವೇರಿಸಿ, 1984ರಲ್ಲಿ ಇದು ಕಾರ್ಯಾರಂಭವಾಗಿತ್ತು. ದಿಲ್ಲಿ ಮೆಟ್ರೋ ದೇಶದ 2ನೆ ಮೆಟ್ರೋ ಆಗಿತ್ತು.

2. ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕ್ ರಾಯಭಾರಿಯನ್ನು ಭೇಟಿಯಾಗಿದ್ದಕ್ಕೆ ಗುಜರಾತ್ ಚುನಾವಣೆಯ ಜತೆ ಸಂಬಂಧ ಕಲ್ಪಿಸಿದ್ದು.

ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕ್ ರಾಯಭಾರಿಯನ್ನು ಭೇಟಿಯಾಗಿದ್ದರು. ಇದರ ಹಿಂದೆ ಸಂಚು ಅಡಗಿದೆ ಎಂದು ಪ್ರಧಾನಿ ಮೋದಿ ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಆದರೆ ಈ ಚರ್ಚೆಯಲ್ಲಿ ಗುಜರಾತ್ ಚುನಾವಣೆಯ ವಿಚಾರವನ್ನು ಚರ್ಚಿಸಿರಲಿಲ್ಲ ಸೇನೆಯ ಮಾಜಿ ಮುಖ್ಯಸ್ಥ ದೀಪಕ್ ಕಪೂರ್ ಹೇಳಿಕೆ ನೀಡಿದ್ದರು. ಚುನಾವಣೆ ಬಳಿಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿ, ಮನಮೋಹನ್ ಸಿಂಗ್ ಅಥವಾ ಅನ್ಸಾರಿಯವರ ಬದ್ಧತೆಯನ್ನು ಎಂದೂ ಪ್ರಶ್ನಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

3. "ನೇರ ಪ್ರಯೋಜನ ವರ್ಗಾವಣೆ ಯೋಜನೆಯನ್ನು ಆರಂಭಿಸಿದ್ದು ನಾವು"

ಕರ್ನಾಟಕಕ್ಕೆ ಅಕ್ಟೋಬರ್‍ನಲ್ಲಿ ಭೇಟಿ ನೀಡಿದ್ದ ಮೋದಿ ನೇರ ಪ್ರಯೋಜನ ವರ್ಗಾವಣೆ ಯೋಜನೆಯನ್ನು ನಾವು ಆರಂಭಿಸಿದ್ದು. ಮಧ್ಯವರ್ತಿಗಳು ಮತ್ತು ಸೋರಿಕೆಯನ್ನು ತಡೆಯುವ ಮೂಲಕ ಸರಕಾರ 57 ಸಾವಿರ ಕೋಟಿ ರೂ.ಗಳನ್ನು ಉಳಿಸಿದೆ ಎಂದಿದ್ದರು. ಆದರೆ ವಾಸ್ತವವೇನೆಂದರೆ ಈ ಯೋಜನೆಯನ್ನು 2013ರ ಬಜೆಟ್‍ನಲ್ಲಿ ಘೋಷಿಸಲಾಗಿತ್ತು.

4. ಮಣಿಶಂಕರ್ ಅಯ್ಯರ್ ಅವರ ಮೊಘಲ್ ಚಕ್ರಾಧಿಪತ್ಯ ಮತ್ತು ಕಾಂಗ್ರೆಸ್ ಪಕ್ಷ ಬಗೆಗಿನ ಹೇಳಿಕೆ ತಿರುಚಿದ್ದು

ಮಣಿಶಂಕರ್ ಅಯ್ಯರ್ ಅವರು ಕಾಂಗ್ರೆಸ್ ಪಕ್ಷವನ್ನು ಮೊಘಲ್ ಆಡಳಿತಕ್ಕೆ ಹೋಲಿಸಿದ್ದಾರೆ ಎಂದು ಮೋದಿ ಗುಜರಾತ್ ಚುನಾವಣೆ ವೇಳೆ ಆಪಾದಿಸಿದ್ದರು. ಆದರೆ ವಾಸ್ತವವಾಗಿ ಅಯ್ಯರ್ ಹೇಳಿಕೆಯನ್ನು ತಿರುಚಲಾಗಿತ್ತು. ವಾಸ್ತವವಾಗಿ ಅವರು ಮೊಘಲ್ ಚಕ್ರಾಧಿಪತ್ಯ ಮತ್ತು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವವಾದಿ ನಿರ್ಧಾರವನ್ನು ಹೋಲಿಸಿ, ರಾಹುಲ್ ಆಯ್ಕೆಯನ್ನು ಅಯ್ಯರ್ ಸಮರ್ಥಿಸಿದ್ದರು.

5.ರಮಝಾನ್-ದೀಪಾವಳಿಯ ದಿನ ಪೂರೈಕೆಯಾದ ವಿದ್ಯುತ್ ಲೆಕ್ಕ ಹಾಕಿದ ಪ್ರಧಾನಿ!

ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಫತೇಪುರ್ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅಂದು ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷವು ರಮಝಾನ್ ನಂದು ದೀಪಾವಳಿಗಿಂತ ಹೆಚ್ಚು ಪೂರೈಕೆಯಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. “ರಮಝಾನ್ ಸಂದರ್ಭ ವಿದ್ಯುತ್ ಪೂರೈಕೆಯಿದ್ದರೆ ದೀಪಾವಳಿಯಂದೂ ವಿದ್ಯುತ್ ಸಂಪರ್ಕವಿರಬೇಕು. ತಾರತಮ್ಯ ಇರಲೇಬಾರದು” ಎಂದು ಮೋದಿ ಹೇಳಿದ್ದರು. ಪ್ರಧಾನಿಯವರ ಈ ಹೇಳಿಕೆಯ ವಿರುದ್ಧ ಭಾರೀ ಆಕ್ರೋಶಗಳೂ ವ್ಯಕ್ತವಾಗಿತ್ತು. ಆದರೆ 2016ರ ಜುಲೈ 6ರಂದು 13,500 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಿದ್ದರೆ, ದೀಪಾವಳಿ ಸಂದರ್ಭದಲ್ಲಿ 15,400 ಮೆಗಾವ್ಯಾಟ್ ವಿದ್ಯುತ್ ಪೂರೈಸಲಾಗಿತ್ತು.

6. ರೈಲು ಹಳಿ ತಪ್ಪಿದ ಘಟನೆಗೂ ಐಎಸ್‍ಐಗೂ ಸಂಬಂಧವಿದೆ

ಇಂಧೋರ್- ಪಾಟ್ನಾ ಎಕ್ಸ್‍ಪ್ರೆಸ್ ರೈಲು 2016ರ ನವೆಂಬರ್‍ನಲ್ಲಿ ಹಳಿ ತಪ್ಪಿ 150 ಮಂದಿ ಮೃತಪಟ್ಟ ಘಟನೆಯನ್ನು 2017ರಲ್ಲಿ ಉಲ್ಲೇಖಿಸಿದ ಮೋದಿ ಇದರ ಹಿಂದೆ ಪಾಕಿಸ್ತಾನದ ಐಎಸ್ ಐನ ಕೈವಾಡವಿದೆ ಎಂದಿದ್ದರು. ಆದರೆ ಉತ್ತರ ಪ್ರದೇಶದ ಡಿಜಿಪಿ ಜಾವೆದ್ ಅಹ್ಮದ್ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದರು. ರೈಲು ಹಳಿ ತಪ್ಪಿದ ಘಟನೆಯಲ್ಲಿ ಐಎಸ್ ಐ ಕೈವಾಡವಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದರು.

7. ದಿನವೊಂದಕ್ಕೆ ಅಪರಾಧದ ಲೆಕ್ಕಹಾಕಿ ನಗೆಪಾಟಲಿಗೀಡಾದ ಪ್ರಧಾನಿ

ಉತ್ತರ ಪ್ರದೇಶ ಚುನಾವಣೆಯ ಸಂದರ್ಭ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ದೇಶದಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿದೆ. ದಿನಕ್ಕೆ 24 ಅತ್ಯಾಚಾರ, 21 ಅತ್ಯಾಚಾರ ಯತ್ನ, 13 ಹತ್ಯೆ, 33 ಅಪಹರಣ, 19 ದೊಂಬಿ, 136 ಕಳ್ಳತನ ಪ್ರಕರಣಗಳು ನಡೆಯುತ್ತವೆ ಎಂದಿದ್ದರು. ಆದರೆ  ಅಪರಾಧ ದರವನ್ನು ಲಕ್ಷ ಜನಸಂಖ್ಯೆಗೆ ಎಷ್ಟು ಅಪರಾಧ ನಡೆದಿದೆ ಎಂಬ ಆಧಾರದಲ್ಲಿ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ ಲೆಕ್ಕ ಹಾಕುತ್ತದೆ ಹೊರತು ಪ್ರಧಾನಿ ಹೇಳಿದಂತೆ ದಿನವೊಂದಕ್ಕಲ್ಲ.

8. ಹವಾಮಾನ ವೈಪರೀತ್ಯದಿಂದ ಸುರಕ್ಷೆ ನೀಡುವ ಬೆಳೆವಿಮೆ ಯೋಜನೆ ಜಾರಿ

“ಪ್ರಧಾನ ಮಂತ್ರಿಗಳ ಬೆಳೆ ವಿಮೆ ಯೋಜನೆಯನ್ನು ನಾವು ಆರಂಭಿಸಿದ್ದೇವೆ. ಹವಾಮಾನ ವೈಪರಿತ್ಯಗಳು ಸಂಭವಿಸಿ ಬೆಳೆ ನಾಶವಾದರೂ ರೈತರು ಈ ಯೋಜನೆಯ ಮೂಲಕ ವಿಮೆ ಪಡೆಯಬಹುದು. ಯಾರಾದರೂ ಈ ಮೊದಲು ಇಂತಹ ಯೋಜನೆಯನ್ನು ನೋಡಿದ್ದೀರ” ಎಂದು ಪ್ರಧಾನಿ ಹೇಳಿದ್ದರು. ಆದರೆ 2003ರಲ್ಲೇ ಈ ಯೋಜನೆ ಆರಂಭವಾಗಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

9. ತೆಂಗಿನಕಾಯಿ ಜ್ಯೂಸ್ ಮತ್ತು ಆಲೂಗಡ್ಡೆ ಫ್ಯಾಕ್ಟರಿ

2017ರ ಮಾರ್ಚ್ 1ರಂದು ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ, ತೆಂಗಿನಕಾಯಿ ಜ್ಯೂಸನ್ನು ಲಂಡನ್ ನಲ್ಲಿ ಮಾರುವ ಮೂಲಕ ರೈತರಿಗೆ ಸಹಾಯ ಮಾಡಲಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆಲೂಗಡ್ಡೆ ಫ್ಯಾಕ್ಟರಿಯನ್ನು ನಿರ್ಮಿಸುವುದಾಗಿಯೂ ಅವರು ಹೇಳಿದ್ದಾರೆ ಎಂದಿದ್ದರು. ಆದರೆ ವಾಸ್ತವ ಏನೆಂದರೆ ರಾಹುಲ್ ಗಾಂಧಿ ತೆಂಗಿನಕಾಯಿ ಅಥವಾ ತೆಂಗಿನ ಕಾಯಿ ಜ್ಯೂಸ್ ಬಗ್ಗೆ ಏನೂ ಹೇಳಿರಲಿಲ್ಲ. ಅವರು ಅನಾನಸು ಜ್ಯೂಸ್ ಬಗ್ಗೆ ಮಾತನಾಡಿದ್ದರು. ಆಲೂಗಡ್ಡೆ ಫ್ಯಾಕ್ಟರಿಯ ಬಗ್ಗೆಯೂ ಪ್ರಧಾನಿ ಹೇಳಿದ್ದು ಸುಳ್ಳೇ ಆಗಿದೆ. ಆಲೂಗಡ್ಡೆ ಚಿಪ್ಸ್ ತಯಾರಿಸಲು ಫ್ಯಾಕ್ಟರಿ ನಿರ್ಮಿಸುವ ಬಗ್ಗೆ ರಾಹುಲ್ ಮಾತನಾಡಿದ್ದರೇ ಹೊರತು ಆಲೂಗಡ್ಡೆ ತಯಾರಿಸುವ ಬಗ್ಗೆಯಲ್ಲ.

Full View

PM Modi - Vajpayee was India's first metro passenger from Pratik Sinha on Vimeo.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News