ದ್ವೀಪವೊಂದನ್ನು ಖರೀದಿಸಲು ಬಯಸಿದ್ದೀರಾ? ಹಾಗಾದರೆ ಈಗಲೇ ಇಲ್ಲಿಗೆ ಹೊರಡಿ...

Update: 2018-01-14 11:25 GMT

ಸ್ಕಾಟ್ಲಂಡ್‌ನ ಉಲ್ವಾ ದ್ವೀಪವನ್ನು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟಕ್ಕಿಡಲಾಗಿದೆ. ದ್ವೀಪವೊಂದನ್ನು ಖರೀದಿಸಿ ನಿಮ್ಮದೇ ಆದ ಪ್ರತ್ಯೇಕ ಜಗತ್ತು ಹೊಂದಿರಲು ಬಯಸಿದ್ದರೆ ಇದೊಂದು ಅದ್ಭುತ ಕೊಡುಗೆಯಾಗಿದೆ.

 ಉಲ್ವಾ ಸ್ಕಾಟ್ಲಂಡ್‌ನ ವಾಯುವ್ಯ ಕರಾವಳಿಯಾಚೆಯ ಹೆಬ್ರೈಡ್ಸ್ ದ್ವೀಪ ಸಮೂಹದಲ್ಲಿನ ಪ್ರತ್ಯೇಕ ದ್ವೀಪವಾಗಿದ್ದು, ಅಲ್ಲಿನ ಜನಸಂಖ್ಯೆ ಕೇವಲ ಆರು. ದ್ವೀಪದ ಮಾಲಿಕ ಜೇಮಿ ಹೋವರ್ಡ್ ಅದನ್ನು 4.2 ಮಿಲಿಯನ್ ಸ್ಟರ್ಲಿಂಗ್ ಪೌಂಡ್(ಸುಮಾರು 36.68 ಕೋ.ರೂ.)ಗಳಿಗೆ ಬಹಿರಂಗ ಮಾರಾಟಕ್ಕಿರಿಸಿದ್ದಾನೆ.

ಬಿಲಿಯಾಧಿಪತಿಗಳು ಈ ದ್ವೀಪವನ್ನು ನಿರ್ಮಿಸಿ ತಮ್ಮದೇ ಆದ ರೆಸಾರ್ಟ್ ನಿರ್ಮಿಸುವ ಹವಣಿಕೆಯಲ್ಲಿದ್ದಾರೆ. ಆದರೆ ಸಚಿವ ನಿಕೋಲಾ ಸ್ಟರ್ಜನ್ ಅವರು ಸಮುದಾಯ ಖರೀದಿಗೆ ಅವಕಾಶ ಕಲ್ಪಿಸುವ ಮೂಲಕ ಈ ರಮಣೀಯ ನಿಸರ್ಗ ಸೌಂದರ್ಯದ ದ್ವೀಪ ಬಿಲಿಯಾಧಿಪತಿಗಳ ಕೈಸೇರುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ಈ ದ್ವೀಪದಲ್ಲಿ ಮತ್ತೆ ಜನರು ವಾಸವಾಗುವಂತೆ ಮಾಡಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರಬಲ ಅವಕಾಶಗಳಿವೆ ಎನ್ನುವುದು ಸಮುದಾಯ ಗುಂಪುಗಳ ಅಭಿಪ್ರಾಯವಾಗಿದೆ. ಈ ದ್ವೀಪದಲ್ಲಿ ಪ್ರವಾಸೋದ್ಯಮವು ಮುಖ್ಯವಾಗಿದ್ದು, ಪ್ರತಿ ಬೇಸಿಗೆಯಲ್ಲಿ ಅಂದಾಜು 5,500 ಪ್ರವಾಸಿಗಳು ಈ ದ್ವೀಪಕ್ಕೆ ಭೇಟಿ ನೀಡುತ್ತಾರೆ.

ಈ ದ್ವೀಪದಲ್ಲಿ 35 ವರ್ಷಗಳ ಕಾಲ ಕೃಷಿಯನ್ನು ಮಾಡಿಕೊಂಡಿದ್ದ ಹೋವರ್ಡ್ ಹೊಸ ಖಾಸಗಿ ಮಾಲಿಕರು ಈ ದ್ವೀಪದಲ್ಲಿ ಹೂಡಿಕೆ ಮಾಡಿ ಅದನ್ನು ಅಭಿವೃದ್ಧಿ ಪಡಿಸಬಹುದೆಂದು ಆಶಯ ಹೊಂದಿದ್ದಾರೆ. ಆದರೆ ದ್ವೀಪದ ಇತರ ನಿವಾಸಿಗಳು ಈ ದ್ವೀಪದ ಒಡೆತನವನ್ನು ಸ್ಥಳೀಯ ಟ್ರಸ್ಟ್ ಹೊಂದಿರಬೇಕು ಎಂದು ಬಯಸಿದ್ದಾರೆ.

ಜನರನ್ನು ದ್ವೀಪಕ್ಕೆ ಆಕರ್ಷಿಸುವ ಉದ್ದೇಶದೊಂದಿಗೆ ಸಮುದಾಯ ಖರೀದಿಗೆ ನಾರ್ಥ್ ವೆಸ್ಟ್ ಮಲ್ ಕಮ್ಯುನಿಟಿ ವುಡ್‌ಲ್ಯಾಂಡ್ ಕಂಪನಿಯು ಆಸಕ್ತಿಯನ್ನು ತೋರಿಸಿದೆ.

  ದ್ವೀಪದ ಖರೀದಿಗಾಗಿ ಕ್ರೌಡ್ ಫಂಡಿಂಗ್ ಮೂಲಕ ಈಗಾಗಲೇ 21,000 ಪೌಂಡ್‌ಗೂ ಅಧಿಕ ಮೊತ್ತವನ್ನು ಸಂಗ್ರಹಿಸಲಾಗಿದೆ. ಉಲ್ವಾ ಖರೀದಿಗೆ ಅಗತ್ಯವಿರುವ 4.2 ಮಿಲಿಯನ್ ಪೌಂಡ್‌ಗಳನ್ನು ಸಂಗ್ರಹಿಸಲು ಈಗ ಕೇವಲ ಆರು ತಿಂಗಳ ಸಮಯಾವಕಾಶ ಉಳಿದುಕೊಂಡಿದೆ. ಉಲ್ವಾದಲ್ಲಿ ಒಟ್ಟು ಎಂಟು ಮನೆಗಳಿದ್ದು, ಈ ಪೈಕಿ ಐದು ಖಾಲಿ ಇವೆ. ಒಂದರಲ್ಲಿ ರಜಾದಿನಗಳಲ್ಲಿ ದ್ವೀಪಕ್ಕೆ ಬರುವ ಪ್ರವಾಸಿಗಳಿಗೆ ತಮ್ಮ ಊಟವನ್ನು ಬೇಯಿಸಿಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ. ದ್ವೀಪದಲ್ಲಿ ಯಾವುದೇ ಟಾರ್ ರಸ್ತೆಗಳಿಲ್ಲ ಮತ್ತು ಕ್ವಾಡ್ ಬೈಕ್‌ಗಳು ಪ್ರಮುಖ ಸಾರಿಗೆ ಸೌಲಭ್ಯವಾಗಿವೆ. ಮಿಂಕ್ ವೇಲ್, ಡಾಲ್ಫಿನ್ ಮತ್ತು ಸೀ ಅಟರ್‌ಗಳು ಇಲ್ಲಿಯ ಸಮುದ್ರದಲ್ಲಿ ಕಾಣಲು ಸಿಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News