ಬ್ಲ್ಯಾಕ್ ಟೀ ಸೇವಿಸಿ ಈ ಆರೋಗ್ಯ ಲಾಭಗಳನ್ನು ನಿಮ್ಮದಾಗಿಸಿ

Update: 2018-01-14 12:06 GMT

ಬ್ಲಾಕ್ ಟೀ ಸೇವನೆ ಇತ್ತೀಚಿಗೆ ಜನಪ್ರಿಯಗೊಳ್ಳುತ್ತಿದೆ. ಅದರಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ನಮ್ಮ ಶರೀರದಲ್ಲಿಯ ಜೀವಕೋಶಗಳಿಗೆ ವಿವಿಧ ಕ್ಯಾನ್ಸರ್‌ಗಳಿಂದ ರಕ್ಷಣೆಯನ್ನು ನೀಡುತ್ತವೆ. ವಿಶೇಷವಾಗಿ ಅಂಡಾಶಯ ಕ್ಯಾನ್ಸರ್‌ನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬ್ಲಾಕ್ ಟೀ ಹೊಂದಿದೆ.

ಅದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್)ನ್ನು ತಗ್ಗಿಸಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್(ಎಚ್‌ಡಿಎಲ್)ನ್ನು ಹೆಚ್ಚಿಸಲು ಅದು ನೆರವಾಗುತ್ತದೆ. ದಿನಕ್ಕೆ ಮೂರು ಕಪ್ ಬ್ಲಾಕ್ ಟೀ ಕುಡಿಯುವುದರಿಂದ ಪರಿಧಮನಿ ಹೃದಯ ರೋಗಗಳ ಅಪಾಯವು ಕಡಿಮೆಯಾಗುತ್ತದೆ.

ಬ್ಲಾಕ್ ಟೀ ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ. ಬ್ಲಾಕ್ ಟೀ ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅದರಲ್ಲಿಯ ಕ್ಯಾಟೆಚಿನ್ ಮತ್ತು ಥಿಯಾಫ್ಲಾವಿನ್‌ಗಳು ನಮ್ಮ ಶರೀರವನ್ನು ಇನ್ಸುಲಿನ್‌ಗೆ ಹೆಚ್ಚು ಸಂವೇದನಾಶೀಲವನ್ನಾಗಿಸುತ್ತವೆ ಮತ್ತು ಬಿಟಾ ಜೀವಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತವೆ.

ಬ್ಲಾಕ್ ಟೀ ಹೇರಳ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇವು ಫ್ರೀ ಆಕ್ಸಿಜನ್ ರ್ಯಾಡಿಕಲ್‌ಗಳನ್ನು ನಿವಾರಿಸಲು ನೆರವಾಗುವ ಮೂಲಕ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ವಯಸ್ಸಾಗುತ್ತಿದ್ದಂತೆ ನಮ್ಮ ಮೂಳೆಗಳು ದುರ್ಬಲಗೊಳ್ಳುತ್ತವೆ. ಪ್ರತಿನಿತ್ಯ ಬ್ಲಾಕ್ ಟೀ ಕುಡಿಯುವುದರಿಂದ ಅದು ಕ್ಯಾಲ್ಶಿಯಂಗೆ ಪೂರಕವಾಗಿ ಕಾರ್ಯ ನಿರ್ವಹಿಸಿ ಮೂಳೆಗಳು ತಮ್ಮ ಸಾಂದ್ರತೆಯನ್ನು ಮತ್ತೆ ಪಡೆದುಕೊಳ್ಳುವಂತೆ ಮಾಡುತ್ತದೆ. ಅದು ಮೂಳೆ ಮುರಿತದ ಅಪಾಯಗಳನ್ನು ತಗ್ಗಿಸುತ್ತದೆ ಮತ್ತು ಆಸ್ಟಿಯೊಪೊರೊಸಿಸ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

  ಪಾರ್ಕಿನ್‌ಸನ್ಸ್ ಕಾಯಿಲೆ ಹೆಚ್ಚಾಗಿ ವಯಸ್ಸಾದವರನ್ನು ಕಾಡುತ್ತದೆ. ಆದರೆ ಇಂದಿನ ದಿನಗಳಲ್ಲಿ ಅಧಿಕ ಒತ್ತಡದಿಂದಾಗಿ ಯುವಜನರೂ ಅದಕ್ಕೆ ಗುರಿಯಾಗಬಹುದು. ಬ್ಲಾಕ್ ಟೀ ಮಿದುಳಿನ ನರಗಳಿಗ ರಕ್ಷಣೆ ನೀಡುವ ಪಾಲಿಫಿನಾಲ್‌ಗಳನ್ನು ಹೊಂದಿದೆ ಮತ್ತು ಈ ಕಾಯಿಲೆಯ ಅಪಾಯವನ್ನು ತಗ್ಗಿಸುತ್ತದೆ.

 ತಿಂದ ಆಹಾರ ಸರಿಯಾಗಿ ಪಚನವಾದರೆ ಅದು ನಮ್ಮ ಶರೀರಕ್ಕೆ ವಿವಿಧ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಬ್ಲಾಕ್ ಟೀ ಕುಡಿಯುವುದರಿಂದ ನಮ್ಮ ಕರುಳಿನಲ್ಲಿಯ ಒಳ್ಳೆಯ ಸೂಕ್ಷ್ಮಜೀವಿಗಳ ಸಂಖ್ಯೆಯು ಹೆಚ್ಚುತ್ತದೆ ಮತ್ತು ಪಚನ ಕಾರ್ಯವು ಉತ್ತಮಗೊಳ್ಳುತ್ತದೆ. ಅದರಲ್ಲಿಯ ಪಾಲಿಫಿನಾಲ್‌ಗಳು ಕರುಳಿನಲ್ಲಿಯ ಅಪಾಯಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ಹೊಟ್ಟೆ ಹುಣ್ಣಿನಿಂದ ರಕ್ಷಣೆ ನೀಡುತ್ತವೆ.

ಅಲ್ಲದೆ ಬ್ಲಾಕ್ ಟೀ ದೇಹದ ತೂಕವನ್ನು ಇಳಿಸಿಕೊಳ್ಳಲು, ಅಸ್ತಮಾದಿಂದ ಶಮನ ಪಡೆಯಲು, ದೈನಂದಿನ ಜೀವನದಲ್ಲಿಯ ಒತ್ತಡಗಳನ್ನು ನಿವಾರಿಸಲು ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಸಹಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News