ಕ್ಷಿಪಣಿ ದಾಳಿಯ ಸಂದೇಶಕ್ಕೆ ಹೆದರಿ ಮನೆತೊರೆದ ಜನರು !
ಹೊನಲುಲು, ಜ.14: ಹವಾಯಿ ದ್ವೀಪದ ತುರ್ತು ನಿರ್ವಹಣಾ ಏಜೆನ್ಸಿಯ ಉದ್ಯೋಗಿಯೊಬ್ಬ ‘ತಪ್ಪಾಗಿ ಗುಂಡಿ’ಯನ್ನು ಒತ್ತಿದ ಕಾರಣ, ಪ್ರಮಾದವಶಾತ್ ಪ್ರಕ್ಷೇಪಕ ಕ್ಷಿಪಣಿಯ ದಾಳಿಯಾಗಲಿದೆಯೆಂಬ ತುರ್ತು ಎಚ್ಚರಿಕೆಸಂದೇಶವೊಂದು ಕಳುಹಿಸಲ್ಪಟ್ಟು, ನಾಗರಿಕರು ತುಸುಹೊತ್ತು ಭಯಭೀತರಾದ ಘಟನೆ ಶನಿವಾರ ನಡೆದಿದೆ.
ಅನಂತರ ಹವಾಯಿ ರಾಜ್ಯದ ಅಧಿಕಾರಿಗಳು ಹಾಗೂ ಅಮೆರಿಕ ಸೇನೆಯ ಪೆಸಿಫಿಕ್ ಕಮಾಂಡ್ ಸ್ಪಷ್ಟೀಕರಣವೊಂದನ್ನು ನೀಡಿ, ಯಾವುದೇ ಕ್ಷಿಪಣಿ ದಾಳಿಯ ಬೆದರಿಕೆಯಿಲ್ಲವೆಂದು ತಿಳಿಸಿತು. ಆದರೆ ಕ್ಷಿಪಣಿ ದಾಳಿಯ ತಪ್ಪು ಎಚ್ಚರಿಕೆ ಸಂದೇಶ ಹರಿದಾಡಿದ್ದರಿಂದ, ಭಯಭೀತರಾದ ಹವಾಯಿಯ ನಾಗರಿಕರು ಮನೆ,ಮಾರು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಪರದಾಡುತ್ತಿದ್ದುದು ಕಂಡುಬಂತು.
‘‘ಹವಾಯಿಗೆ ಪ್ರಕ್ಷೇಪಕ ಕ್ಷಿಪಣಿ ದಾಳಿಯ ಬೆದರಿಕೆ ಎದುರಾಗಿದೆ. ಕೂಡಲೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಿರಿ. ಇದೊಂದು ಅಣಕು ಯುದ್ಧ ಕವಾಯತಲ್ಲ’’ ಎಂಬ ಸಂದೇಶವೊಂದು ಹವಾಯಿ ನಾಗರಿಕರ ಮೊಬೈಲ್ ಫೋನ್‌ಗಳಿಗೆ ತುರ್ತುನಿರ್ವಹಣಾ ಏಜೆನ್ಸಿಯು ರವಿವಾರ ಮುಂಜಾನೆ ಹರಿದುಬಂದಿತ್ತು.
ಬೆಳಗ್ಗೆ 8 ಗಂಟೆಯ ಬಳಿಕ ಈ ಸಂದೇಶವು ಟೆಲಿವಿಶನ್ ಹಾಗೂ ರೇಡಿಯೊಗಳಲ್ಲಿ ಪ್ರಸಾರಗೊಂಡಿತ್ತು. ಅಣ್ವಸ್ತ್ರ ವಾಹಕ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿರುವ ಉತ್ತರ ಕೊರಿಯ ಜೊತೆ ಅಮೆರಿಕದ ವೈಮನಸ್ಸು ಉಲ್ಬಣಿಸಿರುವ ನಡುವೆ, ಈ ಕ್ಷಿಪಣಿ ದಾಳಿಯ ಕುರಿತಾಗಿ ಮುನ್ನೆಚ್ಚರಿಕೆ ಸಂದೇಶ ರವಾನೆಯಾಗಿರುವುದು ಹವಾಯಿಯ ನಾಗರಿಕರನ್ನು ಭಯಭೀತಗೊಳಿಸಿತ್ತು.
ತುರ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ನಿರ್ವಹಿಸುವ ಅಮೆರಿಕದ ಫೆಡರಲ್ ಸಂವಹನ ಆಯೋಗವು, ಈ ಪ್ರಮಾದಕರ ಘಟನೆಯ ಬಗ್ಗೆ ಪೂರ್ಣ ಮಟ್ಟದ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಆಯೋಗದ ಅಧ್ಯಕ್ಷ ಅಜಿತ್ ಪೈ ಹೇಳಿಕೆಯೊಂದನ್ನು ನೀಡಿ, 2012ರಿಂದ ಜಾರಿಯಲ್ಲಿರುವ ವಯರ್‌ಲೆಸ್ ತುರ್ತು ಮುನ್ನೆಚ್ಚರಿಕೆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಬಲಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಪೆಸಿಫಿಕ್ ಸಾಗರದ ದ್ವೀಪಸ್ತೋಮವಾದ ಹವಾಯಿ 10.40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಅಮೆರಿಕ ನೌಕಾಪಡೆಯ ಪೆಸಿಫಿಕ್ ಕಮಾಂಡ್ ಮತ್ತಿತರ ಮಿಲಿಟರಿ ಘಟಕಗಳು ನೆಲೆಗಳನ್ನು ಹೊಂದಿವೆ.