ನ್ಯೂಗಿನಿಯಾದಲ್ಲಿ ಜ್ವಾಲಾಮುಖಿ ಸ್ಫೋಟ: 1500ಕ್ಕೂ ಅಧಿಕ ಮಂದಿ ಸ್ಥಳಾಂತರ
Update: 2018-01-14 22:57 IST
ಸಿಡ್ನಿ,ಜ.13: ಪಪುವಾ ನ್ಯೂಗಿನಿಯಾದ ಉತ್ತರ ಕರಾವಳಿ ಸಮೀಪದ ದ್ವೀಪವೊಂದರಲ್ಲಿ ಜ್ವಾಲಾಮುಖಿಯೊಂದು ಸ್ಫೋಟಿಸಿ ಸುಮಾರು 1,500ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆಯೆಂದು ಸ್ಥಳೀಯ ರೆಡ್‌ಕ್ರಾಸ್ ಸಂಸ್ಥೆ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪಪುವಾದ ಮುಖ್ಯಭೂಮಿಯಿದ 24 ಕಿ.ಮೀ. ಉತ್ತರದಲ್ಲಿರುವ ಕಡೋವರ್ ದ್ವೀಪದ ಪರ್ವತವೊಂದರಲ್ಲಿ ಜ್ವಾಲಾಮುಖಿ ಹೊಗೆಯುಗುಳಲಾರಂಭಿಸಿತ್ತು. ಇದರಿಂದಾಗಿ ಕಡೊವರ್ ದ್ವೀಪದ 590 ಮಂದಿಯನ್ನು ಪಕ್ಕದ ಬ್ಲಪ್‌ಬ್ಲಪ್ ದ್ವೀಪಕ್ಕೆ ಸ್ಥಳಾಂತರಿಸಲಾಗಿತ್ತು.
ಹಲವಾರು ದಿನಗಳ ಕಾಲ ಹೊಗೆ ಕಾರಿದ ಜ್ವಾಲಾಮುಖಿಯು ಶುಕ್ರವಾರ ಸ್ಫೋಟಿಸಿದ್ದರಿಂದ, ಅಪಾರ ಪ್ರಮಾಣ ಲಾವಾರಸ ಹರಿದುಬಂದಿತ್ತು ಹಾಗೂ ಬೃಹತ್‌ಗಾತ್ರದ ಕೆಂಪುಬಂಡೆಗಳು ಸಿಡಿದುಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಅಪಾಯದಲ್ಲಿ ಸಿಲುಕಿಕೊಂಡಿರುವ ಸುಮಾರು 1500 ದ್ವೀಪವಾಸಿಗಳನ್ನು ಅಧಿಕಾರಿಗಳು ಶನಿವಾರ ಸ್ಥಳಾಂತರಿಸಿದ್ದಾರೆ.