ವರ್ಚ್ಯುವಲ್ ಐಡಿ ಎಂದರೇನು? ಅದು ಆಧಾರ್‌ಗಿಂತ ಹೇಗೆ ಭಿನ್ನವಾಗಿದೆ?

Update: 2018-01-15 08:36 GMT

ಆಧಾರ್ ವ್ಯವಸ್ಥೆಗಳ ದೌರ್ಬಲ್ಯ ಮತ್ತು ಅವುಗಳು ಖಾಸಗಿತನಕ್ಕೆ ತಂದೊಡ್ಡುವ ಅಪಾಯಗಳ ಕುರಿತು ವರ್ಷಗಟ್ಟಲೆ ಟೀಕೆಗಳು ವ್ಯಕ್ತವಾದ ಬಳಿಕ, ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು, (ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಯುಐಡಿಎಐ) ತಾನು ಆಧಾರ್‌ಗಿಂತ ಹೆಚ್ಚು ಸುರಕ್ಷಿತವೆಂದು ಭಾವಿಸುವ, ಒಂದು ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದೆ. ಅದೇ ‘ವರ್ಚ್ಯುವಲ್ ಐಡಿ’ (ವಿಐಡಿ). ಇದು ನಿಮ್ಮ ಹನ್ನೆರಡು ಅಂಕೆಗಳ ಆಧಾರ್ ಸಂಖ್ಯೆಯ ಬದಲಿಗೆ ಬರಲಿದೆ; ವಿಶಿಷ್ಟ ಐಡಿಯನ್ನು ಬಹಿರಂಗಪಡಿಸದೆ ಇದನ್ನು ನಿಮ್ಮ ಗುರುತು ಸಾಬೀತು ಪಡಿಸಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ. ಅಂತೂ, ಯುಐಡಿಎಐ ಇದೀಗ ನಿಮ್ಮ ಆಧಾರ್ ಸಂಖ್ಯೆಯನ್ನು ಇತರರು ಪಡೆಯುವ ಗಂಭೀರ ಅಪಾಯಗಳಿವೆ ಎಂಬುದನ್ನು ಒಪ್ಪಿಕೊಂಡಂತಾಗಿದೆ.

ಆದರೆ ವರ್ಚ್ಯುವಲ್ ಐಡಿ ಎಂದರೇನು?

ವರ್ಚ್ಯುವಲ್ ಐಡಿ ಅಥವಾ ಗುರುತು ಸಂಖ್ಯೆ ಎಂದರೆ ನಿಮ್ಮ ಆಧಾರ್ ಸಂಖ್ಯೆಗೆ ಜೋಡಿಸಲಾಗುವ ಹದಿನಾರು ಡಿಜಿಟ್‌ಗಳ ಒಂದು ರ್ಯಾಂಡಮ್ ಸಂಖ್ಯೆ. ಈ ಸಂಖ್ಯೆಯನ್ನು ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುವ ಯಾವುದೇ ಏಜನ್ಸಿಗೆ, ಸರಕಾರಿ/ಖಾಸಗಿ ಸಂಸ್ಥೆಗೆ ನೀಡಬಹುದು.

ಅದು ಹೇಗೆ ಕಾರ್ಯವೆಸಗುತ್ತದೆ?

ಸರಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ವರ್ಚ್ಯುವಲ್ ಐಡಿಯನ್ನು ಆಧಾರ್ ಸಂಖ್ಯೆಗೆ ತಳುಕು ಹಾಕಲಾಗುವುದು. ಪರಿಣಾಮವಾಗಿ ನಿಮ್ಮ ವರ್ಚ್ಯುವಲ್ ಐಡಿಯನ್ನು ಮಾತ್ರ ಪಡೆದವರು ನಿಮ್ಮ ಆಧಾರ್ ಸಂಖ್ಯೆಯನ್ನು ಪಡೆಯಲು ಸಮರ್ಥರಾಗುವುದಿಲ್ಲ.
ನೀವು ಒಂದು ಟೆಲಿಕಾಂ ಕಂಪೆನಿಗೆ ಅಥವಾ ಒಂದು ಸ್ಥಳೀಯ ಸರಕಾರಿ ಸಂಸ್ಥೆಗೆ ನಿಮ್ಮ ವರ್ಚ್ಯುವಲ್ ಐಡಿ ನೀಡಿದಾಗ, ಅವರು ಅದನ್ನು ಕಂಪ್ಯೂಟರ್ ಸಿಸ್ಟಮ್‌ನಲ್ಲಿ ದಾಖಲಿಸಿಕೊಂಡು, ಬಳಿಕ ಒಂದು ಯುಐಡಿ ಟೋಕನ್ ಪಡೆಯುತ್ತಾರೆ. ಅದನ್ನು ಬಳಸಿದಾಗ ಅವರು ನಿಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯಂತಹ ಸೀಮಿತ ವಿವರಗಳನ್ನು ಪಡೆಯುತ್ತಾರೆ. ಆದರೆ ಅವರಿಗೆ ಎಂದೂ ನಿಮ್ಮ ಆಧಾರ್ ಸಂಖ್ಯೆಯನ್ನು ನೋಡಲು ಆಗುವುದಿಲ್ಲ.

ಯುಐಡಿ ಆಧಾರ್‌ಗಿಂತ ಹೇಗೆ ಭಿನ್ನ ಮತ್ತು ಸುರಕ್ಷಿತ?

ಆಧಾರ್‌ನ ಮುಖ್ಯ ಸಮಸ್ಯೆ ಎಂದರೆ ಅದನ್ನು ಪಡೆದ ಏಜೆನ್ಸಿಗಳು ಸುಲಭವಾಗಿ ಅದನ್ನು ದಾಸ್ತಾನು ಮಾಡಿ ಇಡಬಹುದು ಮತ್ತು ಅದನ್ನು ಬಳಸಿ ವ್ಯಕ್ತಿಯೊಬ್ಬನ ಖಾಸಗಿ ಮಾಹಿತಿಗಳನ್ನು ಹೊರತೆಗೆದು ದುರುಪಯೋಗಪಡಿಸಿಕೊಳ್ಳಬಹುದು, ಹಣಕಾಸು ವಿಷಯಗಳಲ್ಲಿ ಮೋಸ ಮಾಡಲೂಬಹುದು. ಆದರೆ ಮಾ.1ರಿಂದ ಜಾರಿಗೆ ತರಲಾಗುವ ಹೊಸ ವ್ಯವಸ್ಥೆಯು ಇಂತಹ ದುರುಪಯೋಗ/ಮೋಸವಾಗದಂತೆ ಒಂದು ಭದ್ರತಾ ವಲಯವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ; ನಿಮ್ಮ ಆಧಾರ್ ಸಂಖ್ಯೆಯನ್ನು ಪಡೆಯುವುದು ಅಸಾಧ್ಯ ಅಥವಾ ತುಂಬಾ ಕಷ್ಟವಾಗುವಂತೆ ಮಾಡುತ್ತದೆ.

ಹೊಸ ವ್ಯವಸ್ಥೆಯಲ್ಲಿ ನಿಮ್ಮ ವರ್ಚ್ಯುಯಲ್ ಐಡಿಯನ್ನು ಮಾತ್ರ ತೋರಿಸಲಾಗುತ್ತದೆ ಮತ್ತು ಅದನ್ನು ನಿಮ್ಮ ಆಧಾರ್ ಸಂಖ್ಯೆಗೆ ಮ್ಯಾಪ್ ಮಾಡಲಾಗಿದೆ ಎಂಬುದನ್ನು ದೃಢೀಕರಿಸುವ ಯುಐಡಿ ಟೋಕನ್ ಮಾತ್ರ ಏಜೆನ್ಸಿಗಳಿಗೆ ಲಭಿಸುತ್ತದೆ. ವರ್ಚುಯಲ್ ಐಡಿಯಿಂದ ಆಧಾರ್ ಸಂಖ್ಯೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಭದ್ರತೆಯ ಒಂದು ಮುಖ್ಯ ಅಂಶವೆಂದರೆ ವರ್ಚುಯಲ್ ಐಡಿ ತಾತ್ಕಾಲಿಕ ಮತ್ತು ಅದನ್ನು ರದ್ದುಪಡಿಸಬಹುದು. ಅಂದರೆ ನಿಮ್ಮ ಖಾಸಗಿ ಮಾಹಿತಿಯನ್ನು ಮುಂದಕ್ಕೆ ಪಡೆಯಬಹುದೆಂದು ತಿಳಿದುಕೊಂಡು ಖಾಸಗಿ ಏಜೆನ್ಸಿಯೊಂದು ನಿಮ್ಮ ವರ್ಚುಯಲ್ ಐಡಿಯನ್ನು ದಾಸ್ತಾನು ಮಾಡಿಟ್ಟುಕೊಂಡರೂ ಅದರಿಂದೇನೂ ಉಪಯೋಗವಾಗುವುದಿಲ್ಲ. ಏಕೆಂದರೆ ವಚ್ಯುಯಲ್ ಐಡಿಗಳು ಶಾಶ್ವತವಲ್ಲ ಮತ್ತು ಅವುಗಳನ್ನು ಬದಲಾಯಿಸಬಹುದು.

ವರ್ಚ್ಯುವಲ್ ಐಡಿ ನಿಜವಾಗಿಯೂ ಹೆಚ್ಚು ಸುರಕ್ಷಿತವೇ?

ದಾಖಲೆಗಳ ಪ್ರಕಾರ, ಕಾಗದದ ಮೇಲೆ ಈ ಹೊಸ ಪ್ರಕ್ರಿಯೆ ಆಧಾರ್‌ಗಿಂತ ಹೆಚ್ಚು ಸುರಕ್ಷಿತ. ಆದರೆ, ಈಗ ಏಳುವ ಪ್ರಶ್ನೆ, ಇಷ್ಟು ಸಮಯದವರೆಗೆ ಯಾಕೆ ಈ ಹೊಸ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತಂದಿರಲಿಲ್ಲ? ಇಷ್ಟೊಂದು ವಿಳಂಬ ಯಾಕಾಗಿ? ಏಜನ್ಸಿಗಳು ಜನರ ಆಧಾರ್ ಸಖ್ಯೆಗಳನ್ನು ಸಂಗ್ರಹಿಸಿ ಕಾಪಿಟ್ಟುಕೊಳ್ಳುವುದನ್ನು ತಡೆಯುವುದು ವರ್ಚ್ಯುವಲ್ ಐಡಿಯ ಉದ್ದೇಶ. ಆದರೆ, ಸ್ವತಃ ಸರಕಾರಿ ಏಜನ್ಸಿಗಳೇ ಆಧಾರ್ ಸಂಖ್ಯೆಗಳನ್ನು ಸೋರಿಕೆ ಮಾಡಿವೆ. ಮತ್ತು ಅಂತರ್ಜಾಲ ಕಾರ್ಯವೆಸಗುವ ರೀತಿಯನ್ನು ಗಮನಿಸಿದರೆ ಈಗಾಗಲೇ ದೇಶದ ಜನತೆಯ ದತ್ತಾಂಶ ಇಂಟರ್‌ನೆಟ್ ಜಾಲದಲ್ಲಿ ಸಂಪೂರ್ಣವಾಗಿ ಕಾಪಿಮಾಡಲ್ಪಟ್ಟಿರಬಹುದು. ಇನ್ನು ಮುಂದಕ್ಕೆ ಹೆಚ್ಚು ಸುರಕ್ಷಿತವಿರಬಹುದು. ಆದರೆ, ಈಗಾಗಲೇ ಬೆಕ್ಕು ಚೀಲದಿಂದ ಹೊರಬಂದಿರಬಹುದು.

 ನನ್ನ ಬಳಿ ಈಗ ಆಧಾರ್ ಇದೆ. ನಾನೀಗ ಏನು ಮಾಡಬೇಕು? ಹೊಸ ವ್ಯವಸ್ಥೆ ಮಾರ್ಚ್ 1ರ ಬಳಿಕವಷ್ಟೆ ಜಾರಿಗೆ ಬರುತ್ತದೆ. ಜೂನ್ 1ರ ವೇಳೆಗೆ ಏಜನ್ಸಿಗಳು ಕಡ್ಡಾಯವಾಗಿ ವರ್ಚ್ಯುವಲ್ ಐಡಿ ಬಳಸಲು ಆರಂಭಿಸಲೇ ಬೇಕು ಎಂದು ಯುಐಡಿಎಐ ಹೇಳಿದೆ. ಅಂದರೆ, ಮಾರ್ಚ್ 1ರಿಂದ ಜೂನ್ 1ರ ಒಳಗಾಗಿ ಆಧಾರ್‌ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ತಮ್ಮ ವರ್ಚ್ಯುವಲ್ ಐಡಿಗಳನ್ನು ಜನರೇಟ್ ಮಾಡಲೇಬೇಕು, ಪಡೆಯಲೇಬೇಕು. ಇದನ್ನು ಯುಐಡಿಎಐಯ ವೆಬ್‌ಸೈಟ್‌ನಲ್ಲಿ, ಆಧಾರ್ ಸೇರ್ಪಡೆ ಕೇಂದ್ರಗಳಲ್ಲಿ ಮತ್ತು ಎಮ್ ಆಧಾರ್ ಮೊಬೈಲ್ ಆಪ್‌ಗಳಲ್ಲಿ ಪಡೆಯಬಹುದು.

ನಿಮಗಿನ್ನೂ ಏನು ತಿಳಿದಿಲ್ಲ?

ವರ್ಚ್ಯುವಲ್ ಐಡಿಗೆ ಸಂಬಂಧಿಸಿದ ಕಾಲಮಿತಿ ಈಗ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

ನೆನಪಿಡಿ, ಪಡಿತರ ಇತ್ಯಾದಿಗಳ ವಿತರಣೆಯನ್ನು ಮತ್ತು ಸುಧಾರಿಸುವ ಮತ್ತು ಯಾವುದೇ ಗುರುತಿಲ್ಲದವರಿಗೆ ಒಂದು ಗುರುತು ನೀಡುವ ಕಾರ್ಯಕ್ರಮವಾಗಿ ಆಧಾರ್ ಕಾರ್ಡನ್ನು ಅನುಷ್ಠಾನಗೊಳಿಸಲಾಯಿತು. ಆಗ ಆಧಾರ್‌ಗಾಗಿ ಪರದಾಡಿ ಅದನ್ನು ಪಡೆದ ಬಡವರು ಮತ್ತು ಇನ್ನೂ ಆಧಾರ್ ಪಡೆಯದವರು ಈಗ ಮತ್ತೆ ಒಂದು ವರ್ಚ್ಯು ವಲ್ ಐಡಿ ಪಡೆದು ಸಬ್ಸಿಡಿಗಳನ್ನು ಪಡೆಯಲಿಕ್ಕಾಗಿ, ಮತ್ತೆ ಪನಃ ಪರದಾಡಬೇಕು; ಇಲ್ಲದ ಪಾಡು ಪಡಬೇಕು. ಮತ್ತು ಈ ಹೊಸ ಐಡಿ ತಾತ್ಕಾಲಿಕ ಎಂದಿರುವ ಯುಐಡಿಎಐ ಎಷ್ಟು ಸಮಯದವರೆಗೆ ಒಂದು ವರ್ಚ್ಯುವಲ್ ಐಡಿ ಬಳಸಲು ಯೋಗ್ಯ ಎಂದು ಇನ್ನೂ ಹೇಳಿಲ್ಲ. ತುಂಬಾ ಕಡಿಮೆ ಅಂದರೆ ಕೆಲವೇ ತಿಂಗಳು ಎಂದಾದಲ್ಲಿ ಅದೊಂದು ದೊಡ್ಡ ಅನನುಕೂಲ. ತುಂಬಾ ದೀರ್ಘ ಅವಧಿಯವರೆಗೆ ಇದನ್ನು ಬಳಸಬಹುದಾದಲ್ಲಿ ಮತ್ತೆ ಪುನಃ ಏಜೆನ್ಸಿಗಳು ಅದನ್ನು ದುರ್ಬಳಕೆ ಮಾಡುವುದಿಲ್ಲವೆಂದು ಏನು ಗ್ಯಾರಂಟಿ ಇದೆ?

ಕೃಪೆ: scroll.in

Writer - ರೋಹನ್ ವೆಂಕಟರಾಮಕೃಷ್ಣನ್

contributor

Editor - ರೋಹನ್ ವೆಂಕಟರಾಮಕೃಷ್ಣನ್

contributor

Similar News

ಜಗದಗಲ
ಜಗ ದಗಲ