ಮೊದಲ ಏಕದಿನ: ಇಂಗ್ಲೆಂಡ್‌ಗೆ 5 ವಿಕೆಟ್‌ಜಯ

Update: 2018-01-14 18:43 GMT

ಮೆಲ್ಬೋರ್ನ್, ಜ.14: ಆರಂಭಿಕ ದಾಂಡಿಗ ಜೇಸನ್ ರಾಯ್ ದಾಖಲಿಸಿದ ಜೀವನಶ್ರೇಷ್ಠ ಸ್ಕೋರ್ ನೆರವಿನಲ್ಲಿ ಇಂಗ್ಲೆಂಡ್ ತಂಡ ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ 5 ವಿಕೆಟ್‌ಗಳ ಜಯ ಗಳಿಸಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 305 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ ಇನ್ನೂ 7 ಎಸೆತಗಳನ್ನು ಬಾಕಿ ಉಳಿಸಿ 5 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿ ಗೆಲುವಿನ ದಡ ಸೇರಿತು.

ಆ್ಯಶಸ್ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಸರಣಿ ಕಳೆದುಕೊಂಡ ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

   ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಟಾಸ್ ಜಯಿಸಿ ಆಸ್ಟ್ರೇಲಿಯನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು. ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 304 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಆ್ಯರನ್ ಫಿಂಚ್ 107 ರನ್, ಮಿಚೆಲ್ ಮಾರ್ಷ್ 50ರನ್, ಮಾರ್ಕೊಸ್ ಸ್ಟೋನಿಸ್ 60 ರನ್‌ಗಳ ನೆರವಿನಲ್ಲಿ ಕಠಿಣ ಸವಾಲು ವಿಧಿಸಿತ್ತು.

ಆರಂಭಿಕ ದಾಂಡಿಗ ರಾಯ್ ಸಹಾಯದಿಂದ ಇಂಗ್ಲೆಂಡ್‌ಗೆ ಆಸ್ಟ್ರೇಲಿಯದ ಸವಾಲನ್ನು ಬೆನ್ನಟ್ಟಲು ಯಾವುದೇ ಸಮಸ್ಯೆ ಎದುರಾಗಲಿಲ್ಲ. 27ರ ಹರೆಯದ ರಾಯ್ ಅವರು 180 ರನ್(151ಎ, 16ಬೌ,5ಸಿ) ಗಳಿಸುವ ಮೂಲಕ ಇಂಗ್ಲೆಂಡ್ ನ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ದಾಂಡಿಗರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿದರು.

  ಮೊದಲ ವಿಕೆಟ್‌ಗೆ ಜಾನಿ ಬೈರ್‌ಸ್ಟೋವ್(14) ಅವರೊಂದಿಗೆ 53 ರನ್‌ಗಳ ಜೊತೆಯಾಟ ನೀಡಲು ರಾಯ್ ನೆರವಾದರು. ಬೈರ್‌ಸ್ಟೋವ್ ಔಟಾದ ಬಳಿಕ ಕ್ರೀಸ್‌ಗೆ ಆಗಮಿಸಿದ ಅಲೆಕ್ಸ್ ಹೇಲ್ಸ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ ಕೇವಲ 4 ರನ್ ಗಳಿಸಿದರು. ಮೂರನೇ ವಿಕೆಟ್‌ಗೆ ರಾಯ್ ಮತ್ತು ಜೋ ರೂಟ್ 221 ರನ್‌ಗಳ ಜೊತೆಯಾಟ ನೀಡಿದರು. 49ನೇ ಏಕದಿನ ಪಂದ್ಯದಲ್ಲಿ 92 ಎಸೆತಗಳಲ್ಲಿ ರಾಯ್ 4ನೇ ಶತಕ ಪೂರ್ಣಗೊಳಿಸಿದರು.

     ರಾಯ್ ಅವರು 180 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ರಿಟರ್ನ್ ಕ್ಯಾಚ್ ನೀಡುವುದರೊಂದಿಗೆ ಮೊದಲ ದ್ವಿಶತಕ ವಂಚಿತಗೊಂಡರು. ಜೋ ರೂಟ್ ಔಟಾಗದೆ 91 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News