×
Ad

ಭುಟ್ಟೊ ಹತ್ಯೆ ನಡೆಸಿದ್ದು ತಾಲಿಬಾನ್

Update: 2018-01-15 21:39 IST

ಇಸ್ಲಾಮಾಬಾದ್, ಜ. 15: ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೊ ಹತ್ಯೆಯ ಜವಾಬ್ದಾರಿಯನ್ನು ಪಾಕಿಸ್ತಾನಿ ತಾಲಿಬಾನ್ ವಹಿಸಿಕೊಂಡಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ಹಿರಿಯ ನಾಯಕನೊಬ್ಬ ಬರೆದ ಪುಸ್ತಕದಲ್ಲಿ ಅದು ಮೊದಲ ಬಾರಿಗೆ ಸಾವಿನ ಹೊಣೆಯನ್ನು ಹೊತ್ತಿದೆ.

2007 ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ನಡೆದ ಬಾಂಬ್ ಸ್ಫೋಟವೊಂದರಲ್ಲಿ ಭುಟ್ಟೊ ಸಾವಿಗೀಡಾಗಿದ್ದರು. ಈ ಹತ್ಯೆಯನ್ನು ಪಾಕಿಸ್ತಾನಿ ತಾಲಿಬಾನ್ ನಡೆಸಿದೆ ಎಂಬುದಾಗಿ ಆಗಿನ ಪರ್ವೇಝ್ ಮುಶರ್ರಫ್ ನೇತೃತ್ವದ ಸೇನಾಡಳಿತ ಆರೋಪಿಸಿತ್ತು. ಆದಾಗ್ಯೂ, ಈ ಭಯೋತ್ಪಾದಕ ಸಂಘಟನೆಯಾಗಲಿ, ಅದರ ನಾಯಕರಾಗಲಿ ಈವರೆಗೆ ಈ ಬಗ್ಗೆ ಏನೂ ಹೇಳಿಲ್ಲ.

ಭುಟ್ಟೊ ಮೇಲೆ ದಾಳಿ ನಡೆಸುವ ಹೊಣೆಯನ್ನು ಆತ್ಮಹತ್ಯಾ ಬಾಂಬರ್‌ಗಳಾದ ಬಿಲಾಲ್ ಯಾನೆ ಸಯೀದ್ ಮತ್ತು ಇಕ್ರಾಮುಲ್ಲಾ ಎಂಬವರಿಗೆ ವಹಿಸಲಾಗಿತ್ತು ಎಂಬುದಾಗಿ ತಾಲಿಬಾನ್ ನಾಯಕ ಅಬು ಮನ್ಸೂರ್ ಆಸಿಮ್ ಮುಫ್ತಿ ನೂರ್ ವಾಲಿ ಬರೆದ ಉರ್ದು ಪುಸ್ತಕ ‘ಇಂಕಿಲಾಬ್ ಮೆಹ್ಸೂದ್ ಸೌತ್ ವಝೀರಿಸ್ತಾನ್-ಫ್ರಮ್ ಬ್ರಿಟಿಶ್ ರಾಜ್ ಟು ಅಮೆರಿಕನ್ ಇಂಪೀರಿಯಲಿಸಮ್’ ಹೇಳಿಕೊಂಡಿದೆ.

ಪುಸ್ತಕವನ್ನು ಅಫ್ಘಾನಿಸ್ತಾನದ ಪಕ್ಟಿಕ ಪ್ರಾಂತದ ಬರ್ಮಲ್ ಎಂಬಲ್ಲಿರುವ ಮಸೀದ್ ಕಂಪ್ಯೂಟರ್ ಸೆಂಟರ್‌ನಲ್ಲಿ 2017 ನವೆಂಬರ್ 30ರಂದು ಬಿಡುಗಡೆ ಮಾಡಲಾಗಿದೆ.

‘‘ಬಾಂಬರ್ ಬಿಲಾಲ್ ಮೊದಲು ಮೆರವಣಿಗೆಯಲ್ಲಿ ಸಾಗುತ್ತಿದ್ದ ಬೇನಝೀರ್ ಭುಟ್ಟೊರತ್ತ ಪಿಸ್ತೂಲಿನಿಂದ ಗುಂಡು ಹಾರಿಸಿದನು. ಗುಂಡು ಅವರ ಕುತ್ತಿಗೆಗೆ ಬಡಿಯಿತು. ಬಳಿಕ ಆತ ತನ್ನ ಸ್ಫೋಟಕ ತುಂಬಿದ್ದ ಜಾಕೆಟನ್ನು ಸ್ಫೋಟಿಸಿದನು’’ ಎಂದು ಪುಸ್ತಕ ಹೇಳಿದೆ ಎಂದು ‘ದ ಡೇಲಿ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಹತ್ಯೆಯ ಬೆನ್ನಿಗೇ, ಈ ಇಬ್ಬರು ತಾಲಿಬಾನ್ ಸದಸ್ಯರು ಹತ್ಯೆಯ ಬಗ್ಗೆ ಚರ್ಚೆ ನಡೆಸುತ್ತಿರುವ ಧ್ವನಿಮುದ್ರಿಕೆಯೊಂದನ್ನು ಮುಶರ್ರಫ್ ಸರಕಾರ ಬಿಡುಗಡೆ ಮಾಡಿತ್ತು.

ಹಲವಾರು ತಾಲಿಬಾನ್ ನಾಯಕರ ಚಿತ್ರಗಳನ್ನು ಒಳಗೊಂಡ 588 ಪುಟಗಳ ಪುಸ್ತಕವನ್ನು ರವಿವಾರ ಇಂಟರ್‌ನೆಟ್‌ಗೆ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News