ಪಪುವಾ ನ್ಯೂ ಗಿನಿ ವಿರುದ್ಧ ಭಾರತ ಫೇವರಿಟ್

Update: 2018-01-15 18:09 GMT

ವೆಲ್ಲಿಂಗ್ಟನ್, ಜ.15: ಆಸ್ಟ್ರೇಲಿಯ ತಂಡವನ್ನು ಭರ್ಜರಿ ಅಂತರದಿಂದ ಮಣಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಪೃಥ್ವಿ ಶಾ ನೇತೃತ್ವದ ಭಾರತ ತಂಡ ಮಂಗಳವಾರ ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿ ತಂಡವನ್ನು ಎದುರಿಸಲಿದೆ.

ಮೂರು ಬಾರಿ ಅಂಡರ್-19 ವಿಶ್ವಕಪ್ ಜಯಿಸಿರುವ ಭಾರತ ರವಿವಾರ ನಡೆದ ತನ್ನ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 100 ರನ್ ಅಂತರದಿಂದ ಮಣಿಸಿತ್ತು.

ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಝಿಂಬಾಬ್ವೆಯನ್ನು ಎದುರಿಸಲಿದೆ. ಆಸ್ಟ್ರೇಲಿಯವನ್ನು ಈಗಾಗಲೇ ಮಣಿಸಿರುವ ಭಾರತ ಸುಲಭವಾಗಿ ನಾಕೌಟ್ ಹಂತಕ್ಕೇರುವುದು ನಿಶ್ಚಿತವಾಗಿದೆ.

ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ನಾಯಕ ಶಾ, ಶಾ ಆರಂಭಿಕ ಜೊತೆಗಾರ ಮನ್ಜೋತ್ ಕಾರ್ಲ ಹಾಗೂ ಶುಭಂ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ವೇಗಿದ್ವಯರಾದ ಶಿವಂ ಮಾವಿ ಹಾಗೂ ಕಮಲೇಶ್ ನಾಗರ್‌ಕೋಟಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಈಸ್ಟ್ ಏಷ್ಯಾ ಪೆಸಿಫಿಕ್ ಕ್ವಾಲಿಫೈಯರ್‌ನಲ್ಲಿ ಅಜೇಯ ದಾಖಲೆಯೊಂದಿಗೆ ಪುಪುವಾ ನ್ಯೂ ಗಿನಿ ತಂಡ 8 ನೇ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. ನ್ಯೂಗಿನಿ ತಂಡ 2014ರಲ್ಲಿ ಯುಎಇನಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಆಡಿತ್ತು.

ಭಾರತ ಎಲ್ಲ ವಿಭಾಗಗಳಲ್ಲಿ ಶಕ್ತಿಶಾಲಿಯಾಗಿದೆ. ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಭಾರತ ಒಂದು ಅತ್ಯಂತ ಯಶಸ್ವಿ ತಂಡವಾಗಿದೆ. ಮೂರು ಬಾರಿ ಪ್ರಶಸ್ತಿ ಜಯಿಸಿರುವ ಭಾರತ ಎರಡು ಬಾರಿ ರನ್ನರ್ಸ್‌ಅಪ್ ಪ್ರಶಸ್ತಿಗೆ ಭಾಜನವಾಗಿತ್ತು.

2014ರಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಭಾರತ ತಂಡ ವೆಸ್ಟ್‌ಇಂಡೀಸ್‌ಗೆ ಸೋತಿತ್ತು. ಕಳೆದ ಬಾರಿ ಕೊನೆಯ ಹಂತದಲ್ಲಿ ಎಡವಿದ್ದ ಭಾರತ ಈ ಬಾರಿ ಆ ತಪ್ಪನ್ನು ತಿದ್ದಿಕೊಳ್ಳಲು ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News