ಆಸ್ಟ್ರೇಲಿಯನ್ ಓಪನ್: ನಡಾಲ್ ಶುಭಾರಂಭ, ವೀನಸ್, ಸ್ಟೀಫನ್ಸ್ ಗೆ ಶಾಕ್

Update: 2018-01-15 18:15 GMT

ಮೆಲ್ಬೋರ್ನ್, ಜ.15: ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಸೋಮವಾರ 94 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್ 81ನೇ ರ್ಯಾಂಕಿನ ಡೊಮಿನಿಶಿಯನ್‌ರನ್ನು 6-1, 6-1, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ನಡಾಲ್ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಲಿಯೊನಾರ್ಡೊ ಮಯೆರ್‌ರನ್ನು ಎದುರಿಸಲಿದ್ದಾರೆ.

31ರ ಹರೆಯದ ನಡಾಲ್ ಈ ಗೆಲುವಿನ ಮೂಲಕ ಆಸ್ಟ್ರೇಲಿಯನ್ ಓಪನ್ ದಾಖಲೆಯನ್ನು 52-11ಕ್ಕೆ ವಿಸ್ತರಿಸಿದರು. 2009ರ ಫೈನಲ್‌ನಲ್ಲಿ ಫೆಡರರ್‌ರನ್ನು ಮಣಿಸಿರುವ ನಡಾಲ್ ಇದೀಗ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ವಿಲಿಯಮ್ಸ್‌ಗೆ ಶಾಕ್,ವೋಝ್ನಿಯಾಕಿ, ಸ್ವಿಟೋಲಿನಾ ದ್ವಿತೀಯ ಸುತ್ತಿಗೆ:

ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್‌ರ ಸಹೋದರಿ ವೀನಸ್ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಎಡವಿದ್ದಾರೆ. ಕರೊಲಿನ್ ವೋಝ್ನಿಯಾಕಿ ಹಾಗೂ ಎಲಿನಾ ಸ್ವಿಟೋಲಿನಾ ಎರಡನೇ ಸುತ್ತಿಗೆ ತಲುಪಿದ್ದಾರೆ. ವೀನಸ್ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲಿಂದ ಬೆನ್ಸಿಕ್ ವಿರುದ್ಧ 3-6, 5-7 ಅಂತರದಿಂದ ಸೋತಿದ್ದಾರೆ.

 ವೀನಸ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ, ಸಹೋದರಿ ಸೆರೆನಾಗೆ ಶರಣಾಗಿದ್ದರು. ಸೆರೆನಾ 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದರು. ಸೆರೆನಾ ಈ ವರ್ಷದ ಟೂರ್ನಿಯಿಂದ ಕೊನೆ ಗಳಿಗೆಯಲ್ಲಿ ಹಿಂದೆ ಸರಿದಿದ್ದಾರೆ. ಅಮೆರಿಕದ ಆಟಗಾರ್ತಿ, ಯುಎಸ್ ಓಪನ್ ಚಾಂಪಿಯನ್ ಸ್ಲೊಯಾನೆ ಸ್ಟೀಫನ್ಸ್, ಕಳೆದ ವರ್ಷದ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿರುವ ಕೊಕೊ ವಾಂಡ್‌ವೆಘ್ ಹಾಗೂ ವರ್ಷದ ಡಬ್ಲ್ಯುಟಿಎ ಪ್ರಶಸ್ತಿ ವಿಜೇತೆ ಸಿಸಿ ಬೆಲ್ಲಿಸ್ ಮೊದಲ ಸುತ್ತಿನಲ್ಲಿ ನಿರ್ಗಮಿಸಿ ನಿರಾಸೆ ಮೂಡಿಸಿದ್ದಾರೆ.

ವೋಝ್ನಿಯಾಕಿ ರೊಮಾನಿಯಾದ ಮಿಹೇಲಾ ಬುಝಾರ್ನೆಸ್ಕುರನ್ನು 6-2, 6-3 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಬುಝಾರ್ನೆಸ್ಕು ಮುಂದಿನ ಸುತ್ತಿನಲ್ಲಿ ಜಪಾನ್‌ನ ಮಿಸಾ ಎಗುಚಿ ಅಥವಾ ಕ್ರೊಯೇಷಿಯದ ಜಾನಾ ಫೆಟ್‌ರನ್ನು ಎದುರಿಸಲಿದ್ದಾರೆ.

   ನಾಲ್ಕನೇ ಶ್ರೇಯಾಂಕದ ಸ್ವಿಟೋಲಿನಾ ಸರ್ಬಿಯದ ಇವಾನಾ ಜೊರೊವಿಕ್‌ರನ್ನು 6-3, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಕಟೆರಿನಾ ಸಿನಿಯಾಕೋವಾರನ್ನು ಎದುರಿಸಲಿದ್ದಾರೆ. ಸಿನಿಯಾಕೋವಾ ಗ್ರೀಸ್‌ನ ಮರಿಯಾ ಸಕ್ಕಾರಿ ಅವರನ್ನು 6-2, 6-7(5/7), 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ 2010ರ ಫ್ರೆಂಚ್ ಓಪನ್ ಚಾಂಪಿಯನ್ ಫ್ರಾನ್ಸಿಸ್ಕಾ ಸ್ಚಿಯಾವೊನ್‌ರನ್ನು 6-1, 6-4 ಸೆಟ್‌ಗಳಿಂದ ಮಣಿಸಿ ಎರಡನೇ ಸುತ್ತಿಗೆ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News