ಪದೇ ಪದೇ ಮೂತ್ರವಿಸರ್ಜನೆಯಾಗುತ್ತದೆಯೇ...? ಹಾಗಿದ್ದರೆ ಇದನ್ನು ಓದಿ

Update: 2018-01-16 10:42 GMT

ಪದೇ ಪದೇ ಮೂತ್ರವಿಸರ್ಜನೆ ಹಲವರು ವೌನವಾಗಿ ಸಹಿಸಿಕೊಳ್ಳುತ್ತಿರುವ ಸಮಸ್ಯೆಯಾಗಿದೆ. ಕೆಲವೊಮ್ಮೆ ಇದು ಮುಜುಗರಕ್ಕೂ ಕಾರಣವಾಗುತ್ತದೆ. ಒಂದು ಅಂದಾಜಿನಂತೆ ವಿಶ್ವದಲ್ಲಿಂದು 24 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯರು ಮತ್ತು ವಯಸ್ಸಾದವರಿಗಂತೂ ಪದೇ ಪದೇ ಮೂತ್ರವಿಸರ್ಜನೆ ಗಂಭೀರ ಸಮಸ್ಯೆಯಾಗಿದೆ.

ಪದೇ ಪದೇ ಮೂತ್ರವಿಸರ್ಜನೆಯಾಗುತ್ತದೆ ಎಂದರೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಮೂತ್ರಕೋಶದ ಸಾಮಾನ್ಯ ಸಾಮರ್ಥ್ಯದಲ್ಲಿ ಸಮಸ್ಯೆಯಿದೆ ಎಂದು ಅರ್ಥ. ಈ ಸಮಸ್ಯೆಯ ಪ್ರಮುಖ ಲಕ್ಷಣಗಳು ಹೀಗಿವೆ.

► ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಬಾತ್‌ರೂಮಿಗೆ ಹೋಗುವ ಅವಸರ

► ಮೂತ್ರವನ್ನು ತಡೆಹಿಡಿಯಲು ಸಾಧ್ಯವಾಗದಿರುವುದು

► ಜೋರಾಗಿ ಕೆಮ್ಮಿದಾಗ ಅಥವಾ ಸೀನಿದಾಗ ಮೂತ್ರ ಸೋರಿಕೆಯಾಗುವುದು

► ರಾತ್ರಿ ವೇಳೆ ಮೂತ್ರ ವಿಸರ್ಜನೆಗಾಗಿ ಪದೇ ಪದೇ ಏಳುವುದು

 ವಯಸ್ಸಾಗುತ್ತ ಹೋದಂತೆ ಈ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಇದರಿಂದಾಗಿ ಎಲ್ಲಿಯಾದರೂ ಪ್ರವಾಸ ಹೋಗುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ. ಕೆಲಸದ ಸಂದರ್ಭದಲ್ಲಿ ವ್ಯತ್ಯಯವುಂಟಾಗುತ್ತದೆ. ಇಷ್ಟೇ ಅಲ್ಲ, ಒಳ್ಳೆಯ ನಿದ್ರೆಯಿಂದಲೂ ವಂಚಿತರಾಗುವಂತಾಗುತ್ತದೆ. ಆದರೆ ಸಮಾಧಾನ ನೀಡುವ ಸಂಗತಿಯೆಂದರೆ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳು ಅಥವಾ ವೈದ್ಯಕೀಯ ಚಿಕಿತ್ಸೆಯ ಮೂಲಕ ಈ ಸಮಸ್ಯೆಯನ್ನು ನಿರ್ವಹಿಸಬಹುದಾಗಿದೆ ಅಥವಾ ಸಂಪೂರ್ಣವಾಗಿ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಪದೇ ಪದೇ ಮೂತ್ರವಿಸರ್ಜನೆಯು ಸರಿಪಡಿಸಬಹುದಾದ ಸಮಸ್ಯೆಯಾಗಿದ್ದು ಇದಕ್ಕಾಗಿ ಲೆಕ್ಕಾಚಾರದಲ್ಲಿ ದ್ರವ ಸೇವನೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವಿಕೆ ಮತ್ತು ಮೂತ್ರಕೋಶವು ರವಾನಿಸುವ ಮೂತ್ರ ವಿಸರ್ಜನೆಯ ಸಂಕೇತಗಳಿಗೆ ತುಂಬ ಮಹತ್ವ ನೀಡುವುದನ್ನು ನಿವಾರಿಸಲು ಕೆಲಸದಲ್ಲಿ ವ್ಯಸ್ತವಾಗುವಿಕೆ ಇತ್ಯಾದಿಗಳು ಅಗತ್ಯವಾಗಿವೆ ಎನ್ನುತ್ತಾರೆ ಖ್ಯಾತ ಯುರೋಲಾಜಿಸ್ಟ್ ಡಾ.ರಾಮನ್ ತನ್ವರ್.

ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಯನ್ನು ಶಮನಗೊಳಿಸಲು ಕೆಲವು ಸರಳ ಕ್ರಮಗಳು ಇಲ್ಲಿವೆ.

ವಸ್ತಿಕುಹರಕ್ಕೆ ವ್ಯಾಯಾಮ

ಪದೇ ಪದೇ ಮೂತ್ರವಿಸರ್ಜನೆಯ ಸೌಮ್ಯ ಲಕ್ಷಣಗಳುಳ್ಳ ಮಹಿಳೆಯರಿಗೆ ಪೆಲ್ವಿಸ್ ಅಥವಾ ವಸ್ತಿಕುಹರದ ವ್ಯಾಯಾಮವು ನೆರವಾಗುತ್ತದೆ. ಇದು ಸರಳ ವ್ಯಾಯಾಮ ವಾಗಿದ್ದು, ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಮಾಡಬಹುದು. ವಸ್ತಿಕುಹರದ ಸ್ನಾಯುಗಳನ್ನು ಐದು ಸೆಕೆಂಡ್‌ಗಳ ಕಾಲ ಹಿಂಡುವುದು ಈ ವ್ಯಾಯಾಮವಾಗಿದೆ. ದಿನಕ್ಕೆ ಹತ್ತು ಬಾರಿ ಇದನ್ನು ಪುನರಾವರ್ತಿಸಬೇಕು.

ಆರಾಮವಾಗಿ ಟಾಯ್ಲೆಟ್ ಕೆಲಸ ಮುಗಿಸಿ

ಟಾಯ್ಲೆಟ್‌ನಲ್ಲಿರುವಾಗ ಅವಸರ ಮಾಡಬೇಡಿ. ಮೂತ್ರವಿಸರ್ಜನೆಯು ಮುಗಿದ ನಂತರ ಕೆಲಕಾಲ ಹಾಯಾಗಿದ್ದು ಬಳಿಕ ಮತ್ತೆ ಮೂತ್ರವಿಸರ್ಜನೆಗೆ ಪ್ರಯತ್ನಿಸಿ. ಇದಕ್ಕೆ ‘ಡಬಲ್ ವಾಯ್ಡಿಂಗ್’ ಎಂದು ಕರೆಯಲಾಗುತ್ತದೆ ಮತ್ತು ಇದು ಮೂತ್ರಕೋಶವನ್ನು ನಿಜಕ್ಕೂ ಖಾಲಿಯಾಗಿಸಲು ನೆರವಾಗುತ್ತದೆ. ಅಲ್ಲದೆ ನೀವು ಟಾಯ್ಲೆಟ್‌ಗೆ ನಿಯಮಿತವಾಗಿ ಹೋಗುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ, ಆದರೆ ಅತಿಯಾಗಿ ಟಾಯ್ಲೆಟ್‌ಗೆ ಹೋಗುತ್ತಿರಬೇಡಿ.

ಪಾನೀಯ ಸೇವನೆಯ ಮೇಲೆ ನಿಗಾಯಿರಲಿ

ನಮ್ಮ ಶರೀರಕ್ಕೆ ದ್ರವದ ಅಗತ್ಯವಿದೆ, ಹೀಗಾಗಿ ಸಾಕಷ್ಟು ನೀರು ಕುಡಿಯುವುದು ಅಗತ್ಯ. ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರು ಕುಡಿಯಲೇಬೇಕು. ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರವು ಹೆಚ್ಚು ಸಾಂದ್ರಗೊಳ್ಳುತ್ತದೆ ಮತ್ತು ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಕೆಫೀನ್ ಸೇವನೆ ಕಡಿಮೆಯಾಗಲಿ

ಕಾಫಿ,ಟೀ,ಕೋಲಾ ಇತ್ಯಾದಿಗಳು ಅತ್ಯಧಿಕ ಕೆಫೀನ್‌ನ್ನು ಒಳಗೊಂಡಿರುತ್ತವೆ ಮತ್ತು ಕೆಫೀನ್ ಮೂತ್ರ ವಿಸರ್ಜನೆ ಮಾಡಬೇಕೆಂಬ ತುಡಿತವನ್ನು ಹೆಚ್ಚಿಸುತ್ತದೆ. ಹೀಗಾಗಿ ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆ ಕಾಡುತ್ತಿದ್ದರೆ ಕೆಫೀನ್ ಒಳಗೊಂಡಿರುವ ಪಾನೀಯಗಳಿಂದ ದೂರವಿರುವುದು ಒಳ್ಳೆಯದು.

ಆಹಾರದ ಬಗ್ಗೆ ಗಮನವಿರಲಿ

ಮದ್ಯಸಾರ,ಕೃತಕ ಸಿಹಿಕಾರಕಗಳು, ಚಾಕಲೇಟ್, ಕೆಫೀನ್‌ಯುಕ್ತ ಪಾನೀಯಗಳು, ಲಿಂಬೆ, ಕಿತ್ತಳೆ ಮತ್ತು ಮೂಸಂಬಿಯಂತಹ ಸಿಟ್ರಸ್ ಹಣ್ಣುಗಳು, ಹೆಚ್ಚು ಮಸಾಲೆಯುಕ್ತ ಆಹಾರ, ಟೊಮೆಟೊ ಬಳಸಿ ತಯಾರಿಸಿದ ಆಹಾರ ಇತ್ಯಾದಿಗಳು ಮೂತ್ರಕೋಶದ ಕೆರಳುವಿಕೆಯನ್ನುಂಟು ಮಾಡುವುದರಿಂದ ಅಂತಹವುಗಳಿಂದ ದೂರವಿರುವುದು ಒಳ್ಳೆಯದು. ನಿಮ್ಮ ಆಹಾರ ಸೇವನೆ ಅಭ್ಯಾಸದ ಮೇಲೆ ಕಣ್ಣಿರಿಸಲು ಪ್ರಯತ್ನಿಸಿ ಮತ್ತು ಮೂತ್ರಕೋಶದ ಚಟುವಟಿಕೆಯನ್ನು ಹೆಚ್ಚಿಸುವ ಆಹಾರಗಳನ್ನು ಪಟ್ಟಿಯಿಂದ ಹೊಡೆದು ಹಾಕಿ.

ಈ ಜೀವನಶೈಲಿ ಬದಲಾವಣೆಗಳಿಗೆ ನಿಮ್ಮ ಶರೀರವು ಸ್ಪಂದಿಸುತ್ತಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಮೂತ್ರಕೋಶದ ಸಮಸ್ಯೆಯನ್ನು ನೀಗಿಸಲು ಬೊಟಾಕ್ಸ್ ಚುಚ್ಚುಮದ್ದಿ ನಂತಹ ಔಷಧಿಗಳಿವೆ. ಇದು ಮೂತ್ರಕೋಶದ ದಾಸ್ತಾನು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಸರಳ ಶಸ್ತ್ರಚಿಕಿತ್ಸೆಗಳೂ ಲಭ್ಯವಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News