×
Ad

ಜಕಾರ್ತ ಸ್ಟಾಕ್ ಎಕ್ಸ್‌ಚೇಂಜ್ ಮಹಡಿ ಕುಸಿತ: 77 ಮಂದಿಗೆ ಗಾಯ

Update: 2018-01-16 22:39 IST

ಜಕಾರ್ತ (ಇಂಡೋನೇಶ್ಯ), ಜ. 16: ಇಂಡೋನೇಶ್ಯನ್ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡದ ಒಳಗಿನ ದಾರಿಯೊಂದು ಸೋಮವಾರ ಕುಸಿದಿದ್ದು, ಕನಿಷ್ಠ 77 ಮಂದಿ ಗಾಯಗೊಂಡಿದ್ದಾರೆ.

ಮೇಲಿನ ಮಹಡಿಯ ದಾರಿ ಕುಸಿದಾಗ ಡಝನ್‌ಗಟ್ಟಳೆ ಜನರು ಕೆಳಗಿನ ಅಂತಸ್ತಿನ ಮೇಲೆ ಕುಸಿದು ಬಿದ್ದರು.

ಸ್ಥಳೀಯ ನಾಲ್ಕು ಆಸ್ಪತ್ರೆಗಳಲ್ಲಿ 77 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಕಾರ್ತ ಪೊಲೀಸ್ ವಕ್ತಾರ ಅರ್ಗೊ ಯುವೊನೊ ತಿಳಿಸಿದರು. ಅವರಲ್ಲಿ ಹೆಚ್ಚಿನವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ.

 ಇಂಡೋನೇಶ್ಯದ ರಾಜಧಾನಿಯ ನಿಬಿಡ ಜಲನ್ ಸುದೀರ್ಮನ್ ರಸ್ತೆಯಲ್ಲಿರುವ 32 ಅಂತಸ್ತಿನ ಅವಳಿ ಗೋಪುರಗಳ ಕಟ್ಟಡವು ನಗರದ ಅತ್ಯಂತ ಪ್ರಮುಖ ಕಟ್ಟಡಗಳ ಪೈಕಿ ಒಂದಾಗಿದೆ. ಇಲ್ಲಿ ವಿಶ್ವಬ್ಯಾಂಕ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಾದೇಶಿಕ ಪ್ರಧಾನ ಕಚೇರಿಗಳಿವೆ.

2000ದಲ್ಲಿ ಭಯೋತ್ಪಾದಕರು ಇದನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದರು.

ಆದರೆ, ಸೋಮವಾರದ ಘಟನೆಗೆ ಭಯೋತ್ಪಾದನೆ ಕಾರಣವಲ್ಲ ಎಂದು ಪೊಲೀಸರು ಹೇಳಿದ್ದಾರೆ.

‘‘ಇದೊಂದು ಸ್ಪಷ್ಟ ಅಪಘಾತವಾಗಿದೆ. ಇದು ಅನಿರೀಕ್ಷಿತವಾಗಿ ಸಂಭವಿಸಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News