ಟ್ರಿಪೋಲಿ ವಿಮಾನ ನಿಲ್ದಾಣದ ಮೇಲೆ ಬಂಡುಕೋರರ ದಾಳಿ: 20 ಸಾವು

Update: 2018-01-16 17:30 GMT

ಟ್ರಿಪೋಲಿ (ಲಿಬಿಯ), ಜ. 16: ಲಿಬಿಯ ರಾಜಧಾನಿ ಟ್ರಿಪೋಲಿಯಲ್ಲಿರುವ ಏಕೈಕ ಕಾರ್ಯನಿರತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದ ಗುಂಡಿನ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲಿನ ಕಾರಾಗೃಹವೊಂದರಲ್ಲಿ ಇರಿಸಲಾದ ತಮ್ಮ ಸಹವರ್ತಿಗಳನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಬಂಡುಕೋರರು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ ಬಳಿಕ ಅಲ್ಲಿ ಕಾಳಗ ಏರ್ಪಟ್ಟಿದೆ.

ರಾಜಧಾನಿಯ ಪೂರ್ವದ ಹೊರವಲಯದಲ್ಲಿ ಇರುವ ಮಾಜಿ ವಾಯುಪಡೆ ನೆಲೆಯಾಗಿರುವ ಮಿಟಿಗ ವಿಮಾನ ನಿಲ್ದಾಣದಲ್ಲಿ ಕಾಳಗ ಆರಂಭಗೊಂಡ ಬಳಿಕ, ಅಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿದ್ದ ಲಿಬಿಯದ 6 ವಿಮಾನಗಳಿಗೆ ಗುಂಡು ಹಾರಾಟದಿಂದ ಹಾನಿಯಾಗಿದೆ.

ಸರಕಾರಿ ಪಡೆಗಳು ಮತ್ತು ಬಂಡುಕೋರರ ನಡುವಿನ ಸಂಘರ್ಷದಲ್ಲಿ 63 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.

ಮಿಟಿಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಕಾರಾಗೃಹವೂ ಇದ್ದು, 2,500ಕ್ಕೂ ಅಧಿಕ ಮಂದಿ ಕೈದಿಗಳಿದ್ದಾರೆ. ಅಲ್ಲಿ ಇರಿಸಲಾಗಿರುವ ಕೆಲವು ಕೈದಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಸಶಸ್ತ್ರ ಗುಂಪೊಂದು ಅಲ್ಲಿಗೆ ದಾಳಿ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News