2 ವರ್ಷಗಳಲ್ಲಿ ರೊಹಿಂಗ್ಯಾ ವಾಪಸಾತಿ ಪ್ರಕ್ರಿಯೆ ಪೂರ್ಣ: ಬಾಂಗ್ಲಾ

Update: 2018-01-16 17:44 GMT

ಢಾಕಾ (ಬಾಂಗ್ಲಾದೇಶ), ಜ. 16: ಮ್ಯಾನ್ಮಾರ್‌ಗೆ ರೊಹಿಂಗ್ಯಾ ಮುಸ್ಲಿಮರ ವಾಪಸಾತಿ ಆರಂಭಗೊಂಡ ಬಳಿಕ, 2 ವರ್ಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಾನು ಒಪ್ಪಿಕೊಂಡಿರುವುದಾಗಿ ಬಾಂಗ್ಲಾದೇಶ ಮಂಗಳವಾರ ಹೇಳಿದೆ.

ಈ ಸಂಬಂಧ ಕಳೆದ ವರ್ಷ ಸಹಿ ಹಾಕಲಾದ ಒಪ್ಪಂದವನ್ನು ಜಾರಿಗೊಳಿಸುವ ಬಗ್ಗೆ ಉಭಯ ದೇಶಗಳ ನಡುವೆ ಸಭೆ ನಡೆದ ಬಳಿಕ ಬಾಂಗ್ಲಾದೇಶದ ವಿದೇಶ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಆದಾಗ್ಯೂ, ವಾಪಸಾತಿ ಪ್ರಕ್ರಿಯೆ ಯಾವಾಗ ಆರಂಭಗೊಳ್ಳುವುದೆಂದು ಹೇಳಿಕೆ ತಿಳಿಸಿಲ್ಲ. ಆದರೆ, ವಾಪಸಾತಿ ವೇಳೆ ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ. ವಾಪಸ್ ಬರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮೊದಲು ಮ್ಯಾನ್ಮಾರ್ ತಾತ್ಕಾಲಿಕ ಆಶ್ರಯಗಳನ್ನು ಒದಗಿಸಬೇಕಾಗುತ್ತದೆ.

 ಒಪ್ಪಂದದ ಪ್ರಕಾರ, ಬಾಂಗ್ಲಾದೇಶವು 5 ರವಾನೆ ಶಿಬಿರಗಳನ್ನು ಸ್ಥಾಪಿಸಬೇಕು ಹಾಗೂ ಈ ಶಿಬಿರಗಳು ಗಡಿಯ ಮ್ಯಾನ್ಮಾರ್ ಬದಿಯಲ್ಲಿರುವ 2 ಸ್ವೀಕಾರ ಕೇಂದ್ರಗಳಿಗೆ ರೊಹಿಂಗ್ಯಾರನ್ನು ಕಳುಹಿಸುತ್ತದೆ.

‘‘ಮ್ಯಾನ್ಮಾರ್ ನಿವಾಸಿಗಳು ಬಾಂಗ್ಲಾದೇಶಕ್ಕೆ ಹರಿದು ಬರುವುದನ್ನು ನಿಲ್ಲಿಸುವ ಬದ್ಧತೆಯನ್ನು ಆ ದೇಶ ಪುರುಚ್ಚರಿಸಿದೆ’’ ಎಂದು ಹೇಳಿಕೆ ತಿಳಿಸಿದೆ.

ಉಭಯ ದೇಶಗಳ ಅಧಿಕಾರಿಗಳ ಸಭೆ ಮ್ಯಾನ್ಮಾರ್ ರಾಜಧಾನಿ ನೇಪಿಟವ್‌ನಲ್ಲಿ ನಡೆಯಿತು. ಇದು ಕಳೆದ ವರ್ಷದ ನವೆಂಬರ್‌ನಲ್ಲಿ ರೂಪುಗೊಂಡ ವಾಪಸಾತಿ ಒಪ್ಪಂದದ ವಿವರಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿಯ ಮೊದಲ ಸಭೆಯಾಗಿದೆ.

ಸಭೆಯ ಬಳಿಕ, ಮ್ಯಾನ್ಮಾರ್ ಸರಕಾರ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ ಹಾಗೂ ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ಸರಕಾರದ ವಕ್ತಾರರು ಲಭ್ಯರಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News