ಉತ್ತರ ಕೊರಿಯದ ಇನ್ನೊಂದು ದೋಣಿ ಜಪಾನ್ ತೀರಕ್ಕೆ: 8 ಮೃತದೇಹಗಳು ಪತ್ತೆ
ಟೋಕಿಯೊ, ಜ. 16: ಹಾನಿಗೀಡಾಗಿರುವ ದೋಣಿಯೊಂದು ಮಧ್ಯ ಜಪಾನ್‌ನಲ್ಲಿ ಸಮುದ್ರ ತೀರವನ್ನು ಸೇರಿದ್ದು, ಅದರಿಂದ 8 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇದು ಉತ್ತರ ಕೊರಿಯದ ದೋಣಿಯಾಗಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೃತದೇಹಗಳನ್ನೊಳಗೊಂಡ ಹಾಗೂ ಹಾನಿಗೀಡಾಗಿರುವ ಉತ್ತರ ಕೊರಿಯದ್ದೆಂದು ಹೇಳಲಾದ ಹಲವು ದೋಣಿಗಳು ಈಗಾಗಲೇ ಜಪಾನ್ ಸಮುದ್ರ ತೀರಕ್ಕೆ ಬಂದಿರುವುದನ್ನು ಸ್ಮರಿಸಬಹುದಾಗಿದೆ.
ಮಧ್ಯ ಜಪಾನ್‌ನ ಕನಝವದಲ್ಲಿ ಕಳೆದ ವಾರ ತೀರ ಸೇರಿದ ದೋಣಿಯ ಅವಶೇಷದಿಂದ 7 ಪುರುಷರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಇನ್ನೊಬ್ಬ ಪುರುಷನ ಅತ್ಯಂತ ಕೊಳೆತ ದೇಹವನ್ನು ದೋಣಿಯ ಸಮೀಪದಿಂದ ಪತ್ತೆಹಚ್ಚಲಾಗಿದೆ.
‘‘ಮೃತದೇಹಗಳು ಕೊಳೆಯಲು ಆರಂಭಿಸಿದ್ದು, ಅವುಗಳನ್ನು ಗುರುತಿಸುವುದು ಕಷ್ಟ’’ ಎಂದು ಅಧಿಕಾರಿಗಳು ಹೇಳಿದರು.
ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ದೋಣಿಯನ್ನು ಸಂಪೂರ್ಣವಾಗಿ ತಪಾಸಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದರು.
ಆದಾಗ್ಯೂ, ಇದು ಜಪಾನ್ ತೀರಕ್ಕೆ ಬಂದ ಉತ್ತರ ಕೊರಿಯದ ಇನ್ನೊಂದು ಮೀನುಗಾರಿಕಾ ದೋಣಿ ಎಂಬುದಾಗಿ ತಟರಕ್ಷಣಾ ಅಧಿಕಾರಿಗಳು ಭಾವಿಸಿದ್ದಾರೆ.