ವ್ಯಾಪಂ ಹಗರಣ: ಸಿಬಿಐ ಕುಣಿಕೆಗೆ ಮಧ್ಯಪ್ರದೇಶ ಸಚಿವ

Update: 2018-01-17 04:16 GMT

ಭೋಪಾಲ್, ಜ.17: ಬಹುಕೋಟಿ ವ್ಯಾಪಂ ಹಗರಣದ ಸಂಬಂಧ ಮಧ್ಯಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವ ಲಕ್ಷ್ಮೀಕಾಂತ್ ಶರ್ಮಾ ಹಾಗೂ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಓ.ಪಿ.ಶುಕ್ಲಾ ಸೇರಿದಂತೆ 95 ಮಂದಿಯ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ಸಚಿವ ಶರ್ಮಾ, ತನಗೆ ಬೇಕಾದ ಅಧಿಕಾರಿ ಪಂಕಜ್ ತ್ರಿವೇದಿ ಎಂಬವರನ್ನು ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಂ)ಯ ನಿಯಂತ್ರಕರಾಗಿ ನೇಮಿಸಿಕೊಂಡಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ದೂರಲಾಗಿದೆ. ಈ ಮಾಹಿತಿಯನ್ನು ಸಿಬಿಐನ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ತ್ರಿವೇದಿಯವರ ಮೂಲಕ, ವ್ಯಾಪಂ ನಡೆಸಿದ ಸಂವಿದಾ ಶಾಲಾ ಶಿಕ್ಷಕ ಪತ್ರತಾ ಪರೀಕ್ಷಾ ವರ್ಗ-3 ಪರೀಕ್ಷೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಒತ್ತಡ ತಂದಿದ್ದಾರೆ ಎಂದು ಆಪಾದಿಸಲಾಗಿದೆ. ಶರ್ಮಾ ಅವರಲ್ಲದೇ ಶುಕ್ಲಾ ಹಾಗೂ ತ್ರಿವೇದಿ ಸೇರಿದಂತೆ 95 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಶರ್ಮಾ ಹಾಗೂ ಶುಕ್ಲಾ ಅವರು 2014ರಲ್ಲಿ ಈಗಾಗಲೇ ಮಧ್ಯಪ್ರದೇಶ ಎಸ್‌ಟಿಎಫ್ ನಡೆಸಿದ ತನಿಖೆಯ ವೇಳೆ ಜೈಲುಪಾಲಾಗಿದ್ದರು. ಎಸ್‌ಐಟಿ 55 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಶರ್ಮಾ ಹೆಸರೂ ಸೇರಿತ್ತು. ಇತರ ಆರು ವ್ಯಾಪಂ ಪ್ರಕರಣಗಳಲ್ಲೂ ಶರ್ಮಾ ಆಪಾದಿತರಾಗಿದ್ದಾರೆ.

ವ್ಯಾಪಂ ಹಗರಣದ ಸಂಬಂಧ ಇದುವರೆಗೆ ಸಿಬಿಐ 110 ಆರೋಪಪಟ್ಟಿ ಸಲ್ಲಿಸಿದ್ದು, 1,600 ಮಂದಿಯ ವಿರುದ್ಧ ಆರೋಪ ಮಾಡಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ 2015ರಲ್ಲಿ ಸಿಬಿಐ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News