ಶಾಲೆಗಳಲ್ಲಿ ಭಗವದ್ಗೀತೆ, ಕುರ್ ಆನ್, ಬೈಬಲ್ ಬೋಧನೆ: ಸಚಿವೆ ಮೇನಕಾ ಸಲಹೆ

Update: 2018-01-17 04:16 GMT

ಹೊಸದಿಲ್ಲಿ, ಜ.17: ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಕುರ್ ಆನ್, ಬೈಬಲ್ ಸೇರಿದಂತೆ ಭಾರತದ ಪ್ರಮುಖ ಆರು ಧಾರ್ಮಿಕ ಗ್ರಂಥಗಳನ್ನು ಬೋಧಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಸಲಹೆ ಮಾಡಿದ್ದಾರೆ. ಇದರಿಂದ ವಿವಿಧ ನಂಬಿಕೆಗಳ ಬಗ್ಗೆ ಸಹಿಷ್ಣುತೆ ಬೆಳೆಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಧರ್ಮ ಆಧರಿತ ಘರ್ಷಣೆಗಳು ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಕ್ಕಳಿಗೆ ಇತರ ಧರ್ಮಗಳ ಬಗ್ಗೆ ಸಾಕಷ್ಟು ಜ್ಞಾನ ಇಲ್ಲದಿರುವುದು. ಇದರಿಂದಾಗಿ ಅಂಧ ದ್ವೇಷವನ್ನು ಇತರ ಧರ್ಮಗಳ ಬಗ್ಗೆ ಬೆಳೆಸಿಕೊಳ್ಳುತ್ತಾರೆ. ಭಾರತದ ಪ್ರಮುಖ ಧರ್ಮಗಳಾದ ಹಿಂದೂ, ಜೈನ, ಬೌದ್ಧ, ಸಿಕ್ಖ್ ಹಾಗೂ ಇಸ್ಲಾಂ ಧರ್ಮಗ್ರಂಥಗಳ ಪ್ರಮುಖ ಅಂಶವನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲೇ ಎಲ್ಲ ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಸಾದ್ಯವಾಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಶಿಕ್ಷಣ ಕುರಿತ ಕೇಂದ್ರೀಯ ಸಲಹಾ ಮಂಡಳಿಯ ಸಭೆಯಲ್ಲಿ ಈ ಸಲಹೆಯನ್ನು ಸಚಿವೆ ನೀಡಿದ್ದಾರೆ. ಮಕ್ಕಳಿಗೆ ಕನಿಷ್ಠ ವಾರಕ್ಕೆ ಎರಡು ಬಾರಿ ಆರು ಧರ್ಮಗ್ರಂಥಗಳ ಬೋಧನೆಗೆ ವ್ಯವಸ್ಥೆ ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಕೋರಲು ಅವರು ನಿರ್ಧರಿಸಿದ್ದಾರೆ.
"ನಮ್ಮ ಧರ್ಮಗ್ರಂಥಗಳನ್ನು ಎಷ್ಟು ಮಂದಿ ಓದಿದ್ದೇವೆ? ನಾನು ಕುರ್ ಆನ್ ಓದಿದ್ದೇನೆ. ಪ್ರವಾದಿ ಮುಹಮ್ಮದ್(ಸ.) ಯುದ್ಧ ವಿರೋಧಿ ಎಂದು ನಮ್ಮಲ್ಲಿ ಎಷ್ಟು ಮಂದಿಗೆ ಗೊತ್ತಿದೆ? ನಮ್ಮ ಶಾಲಾ ದಿನಗಳಲ್ಲಿ ನಮಗೆ ನೈತಿಕ ವಿಜ್ಞಾನ ಬೋಧಿಸಲಾಗುತ್ತಿತ್ತು. ಆದರೆ ಅದನ್ನು ಈಗ ಮಾಡುತ್ತಿಲ್ಲ" ಎಂದು ಮೇನಕಾ ಹೇಳಿದ್ದಾರೆ.
ದೇಶದಲ್ಲಿ ಪ್ಲೇ ಸ್ಕೂಲ್‌ಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆಯೂ ಅವರು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News