ಸಂಘ ಪರಿವಾರದಿಂದ ದಲಿತ ಯುವಕನಿಗೆ ಹಲ್ಲೆ: ಮುಝಪ್ಫರ್‌ನಗರದಲ್ಲಿ ಪ್ರತಿಭಟನೆ

Update: 2018-01-17 17:34 GMT

ಲಕ್ನೊ, ಜ. 17: ಉತ್ತರಪ್ರದೇಶದ ಮುಝಪ್ಫರ್ ನಗರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು 22 ವರ್ಷದ ದಲಿತ ಯುವಕನಿಗೆ ಥಳಿಸಿ, ‘ಜೈ ಶ್ರೀರಾಮ್’ ಎಂದು ಹೇಳುವಂತೆ ಬಲವಂತಪಡಿಸಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.

ದಲಿತ ಯುವಕ ವಿಪಿನ್ ಕುಮಾರ್ ಅವರ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಮಂಗಳವಾರ ಹಲ್ಲೆ ನಡೆಸಿದ ಬಳಿಕ ಇಲ್ಲಿ ದಲಿತರು ಹಾಗೂ ಠಾಕೂರರ ನಡುವೆ ಘರ್ಷಣೆ ಆರಂಭವಾಗಿದೆ.

ದಲಿತರು ತಮ್ಮ ಮನೆಯಲ್ಲಿ ಡಾ. ಅಂಬೇಡ್ಕರ್ ಅವರ ಫೋಟೊಗಳನ್ನು ಇರಿಸಿಕೊಳ್ಳುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಅವರು ಹಿಂದೂ ದೇವರ ಫೋಟೊಗಳನ್ನು ತೆಗೆಯಬಾರದು ಎಂದು ಸಂಘಪರಿವಾದ ಕಾರ್ಯಕರ್ತರು ಹೇಳುವುದು ವೀಡಿಯೋದಲ್ಲಿ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ವಿಪಿನ್‌ನ ತಂದೆ ಪುರ್ಕಾಜಿ ಪೊಲೀಸ್ ಠಾಣೆಯಲ್ಲಿ ಕೆಲವರ ವಿರುದ್ಧ ದೂರು ದಾಖಲಿಸಿದ್ದಾರೆ. ಅನಂತರ ಭೀಮ್ ಸೇನೆ, ಬುದ್ಧ ಮಹಾಸಭಾ ಹಾಗೂ ಜೈ ಸಿಂಧು ಸಂಘ ಮುಝಪ್ಫರ್‌ನಗರದಲ್ಲಿರುವ ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.

ಜನವರಿ 17ರ ಒಳಗೆ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಹೀದ್ ಉದಮ್ ಸಿಂಗ್ ಸೇನೆ ಬೆದರಿಕೆ ಒಡ್ಡಿದ ಬಳಿಕ ಭೀಮ್ ಸೇನೆ ಬುಧವಾರ ಪ್ರತಿಭಟನೆ ನಡೆಸಿತು.

ಅನಂತರ ಪೊಲೀಸರು ಆರೋಪಿಗಳ ಕುಟುಂಬದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇದು ಆರೋಪಿಗಳ ಸಮುದಾಯ ಪ್ರತಿಭಟನೆ ನಡೆಸಲು ಕಾರಣವಾಯಿತು. ಅನಂತರ ಮಹಿಳೆಯರನ್ನು ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News