96 ಕೋ. ರೂ. ನಿಷೇಧಿತ ನೋಟಗಳನ್ನು ವಶಪಡಿಸಿದ ಪೊಲೀಸರು ಕಂಗಾಲಾದದ್ದೇಕೆ ?

Update: 2018-01-18 17:52 GMT

ಕಾನ್ಪುರ, ಜ. 18: ನಗದು ನಿಷೇಧದ ಬಳಿಕ 96 ಕೋ. ರೂ. ನಿಷೇಧಿತ ನೋಟನ್ನು ಬುಧವಾರ ವಶಪಡಿಸಿಕೊಂಡಿರುವ ಕಾನ್ಪುರ ಪೊಲೀಸರಿಗೆ ಈಗ ಅದನ್ನು ಎಲ್ಲಿ ದಾಸ್ತಾನು ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ. ನೋಟುಗಳನ್ನು ಸುರಕ್ಷಿತವಾಗಿ ಇರಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಕಾನ್ಪುರದ ಎಸ್‌ಎಸ್‌ಪಿ ಅಖಿಲೇಶ್ ಕುಮಾರ್ ಹೇಳಿದ್ದಾರೆ.

ಇಲ್ಲಿನ ಸ್ವರೂಪ್ ನಗರದಿಂದ ವಶಪಡಿಸಿಕೊಳ್ಳಲಾದ ನೋಟುಗಳನ್ನು ಲೆಕ್ಕ ಹಾಕಲು 12 ಗಂಟೆಗಳ ಕಾಲ ಬೇಕಾಯಿತು. 80 ಜನರು ಹಾಗೂ 34 ಮೆಷಿನ್‌ಗಳನ್ನು ಬಳಸಲಾಯಿತು. ನೋಟು ಲೆಕ್ಕ ಹಾಕಿದ ಬಳಿಕ ತುಂಬಿಡಲು 200 ಚೀಲಗಳು ಅಗತ್ಯತೆ ಇತ್ತು. ಚೀಲಗಳನ್ನು ಹೇಗಾದರೂ ಮಾಡಿ ವ್ಯವಸ್ಥೆ ಮಾಡಿದರೂ ಇಷ್ಟೊಂದು ಪ್ರಮಾಣದ ನೋಟುಗಳ ಚೀಲಗಳನ್ನು ಸುರಕ್ಷಿತವಾಗಿ ಎಲ್ಲಿರಿಸುವುದು ಎಂಬ ಪ್ರಶ್ನೆ ಪೊಲೀಸರಿಗೆ ಎದುರಾಯಿತು.

ಕೊನೆಗೆ ನಾಯ್ ಸರಕಾ ಪ್ರದೇಶದಿಂದ ಪೆಟ್ಟಿಗೆಗಳನ್ನು ತಂದು ನೋಟುಗಳನ್ನು ಅದರಲ್ಲಿ ತುಂಬಿಸಲಾಯಿತು. ಪೆಟ್ಟಿಗೆಗಳನ್ನು ಇರಿಸಲು ಟ್ರೆಶರಿಯಲ್ಲಿ ವಿನಂತಿಸಲಾಯಿತು. ಆದರೆ, ಅಲ್ಲಿನ ಅಧಿಕಾರಿಗಳು ‘ಇಲ್ಲಿ ಈಗಾಗಲೇ ಸರಕುಗಳು ತುಂಬಿವೆ. ನೋಟುಗಳ ಪೆಟ್ಟಿಗೆಗಳನ್ನು ಇರಿಸಲು ಸ್ಥಳವಿಲ್ಲ ಎಂದರು. ‘ನೋಟುಗಳನ್ನು ಆರ್‌ಬಿಐನ ಕಾನ್ಪುರ ಶಾಖೆಗೆ ಹಸ್ತಾಂತರಿಸೋಣ’ ಎಂದು ಕೆಲವು ಪೊಲೀಸರು ಸಲಹೆ ನೀಡಿದರು. ಆದರೆ, ಬ್ಯಾಂಕ್ ಈ ನೋಟುಗಳನ್ನು ಸ್ವೀಕರಿಸಲಾರದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಅಂತಿಮವಾಗಿ ಸಂಜೆ ನೋಟುಗಳ ಪೆಟ್ಟಿಗೆಗಳನ್ನು ಪೊಲೀಸ್ ಕ್ವಾರ್ಟರ್ಸ್‌ನಲ್ಲಿರುವ ರಕ್ಷಣಾ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಇರಿಸಲು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News