ಕಡಲತಡಿಯೇಕೆ ಕಳಂಕಿತಗೊಂಡಿತು?

Update: 2018-01-18 17:59 GMT

ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆ ಏನು?..ಅಸಲಿಗೆ ಇಲ್ಲಿ ಸಮಸ್ಯೆಗಳೇ ಇಲ್ಲವೇ? ಅಥವಾ ಇದ್ದರೂ ಆ ಸಮಸ್ಯೆಗಳು ಜನರ ಬದುಕಿಗೆ ಕೊಳ್ಳಿಯಿಡುವ ಸಮಸ್ಯೆಗಳೇ?

ಹೌದು..ಇದೊಂದು ಕರ್ನಾಟಕದ ವಿಶಿಷ್ಟ ಜಿಲ್ಲೆ. ನೈಸರ್ಗಿಕವಾಗಿ ಬಹಳ ಸುಂದರ ಪ್ರದೇಶ. ಮಳೆಗಾಲಕ್ಕೆ ಮಳೆ, ಬೇಸಿಗೆಯಲ್ಲಿ ಬಿಸಿಲು. ಇನ್ನು ಚಳಿಗಾಲಕ್ಕೆ ರುಚಿಗೆ ತಕ್ಕಷ್ಟು ಚಳಿ. ಯಾವುದರಲ್ಲೂ ವ್ಯತ್ಯಯವಿಲ್ಲ. ಇಲ್ಲಿ ಹೆಚ್ಚಿರುವವರು ಶ್ರೀಮಂತ, ಮಧ್ಯಮ, ಬಡ ವರ್ಗಗಳು. ಅತೀ ಬಡವರು ಅಥವಾ ಹೊಟ್ಟೆಗಿಟ್ಟಿಲ್ಲದೋರು ತುಂಬಾ ವಿರಳ ಎನ್ನಬಹುದು. ಜನರು ಬುದ್ಧಿವಂತರು ಮತ್ತು ವಿದ್ಯಾವಂತರು. ಅದರರ್ಥ ಎಲ್ಲರೂ ಉನ್ನತಮಟ್ಟದ ಶಿಕ್ಷಣ ಪಡೆದವರು ಎಂದಲ್ಲ.ಆದರೆ ಅಶಿಕ್ಷಿತರಾಗಿರುವುದು ಸಮಸ್ಯೆಯಾಗಿ ಕಾಡಿಲ್ಲ. ಶಿಕ್ಷಣ ಪಡೆದವರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನರಸಿಕೊಂಡರೆ, ಉಳಿದವರು ಸ್ವಂತ ಉದ್ಯೋಗ, ಕೃಷಿ, ತೋಟಗಾರಿಕೆ, ಕಾರ್ಖಾನೆ ಕೆಲಸ, ಮೀನುಗಾರಿಕೆ, ಪಶು ಸಂಗೋಪನೆ, ಹೀಗೆ ವಿವಿಧ ರೀತಿಯ ಕೆಲಸಗಳಲ್ಲಿ ತಮ್ಮ ಜೀವನ ಕಟ್ಟಿ ಕೊಂಡಿದ್ದಾರೆ. ದುಡಿಮೆಯ ಜೊತೆ ರಾಜಿ ಮಾಡಿಕೊಳ್ಳುವವರು ವಿರಳ. ವಿದ್ಯೆ, ಕೃಷಿ ಹಾಗೂ ಉನ್ನತ ಉದ್ಯೋಗಗಳಲ್ಲಿ ಹಿಂದೂಗಳು ಮುಂದಿದ್ದರೆ, ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಮುಸ್ಲಿಮರು ಮುಂದಿದ್ದಾರೆ. ಈ ಭಾಗದ ಮುಸ್ಲಿಮರಿಗೆ ಬ್ಯಾರಿ(ತುಳುವಿನಲ್ಲಿ ಬ್ಯಾರ ಅಂದರೆ ವ್ಯಾಪಾರ, ಹಾಗಾಗಿ ಬ್ಯಾರ ಮಾಡುವವರು ಬ್ಯಾರಿಗಳು)ಗಳೆನ್ನಲು ಇದೇ ಕಾರಣ. ಇನ್ನು ಎಲ್ಲಾ ಕ್ಷೇತ್ರದಲ್ಲೂ ಪರಿಣತಿ ಹೊಂದಿರುವ ಕ್ರೈಸ್ತರಿದ್ದಾರೆ. ಮೀನುಗಾರಿಕೆ ಕರಾವಳಿಯ ಮುಖ್ಯ ಉದ್ಯೋಗ. ಕರಾವಳಿಯ ಮಾಂಸಾಹಾರಿಗಳಿಗೆ ಮೀನು ದಿನನಿತ್ಯದ ಪ್ರಮುಖ ಆಹಾರ. ದೇಶ-ವಿದೇಶಗಳಲ್ಲಿ ಈ ಭಾಗದ ಮೀನುಗಳಿಗೆ ಯಥೇಚ್ಛ ಬೇಡಿಕೆ ಇರುವುದರಿಂದ ಇದರ ಮಾರುಕಟ್ಟೆ ಅಬಾಧಿತ. ಮೀನುಗಾರಿಕೆಯಲ್ಲಿ ನಿರತರಾದವರಿಗೆ ಮಳೆಗಾಲದ ಪ್ರಮುಖ ಮೂರು ತಿಂಗಳಲ್ಲಿ ಕೃಷಿ, ಕೋಳಿ ಸಾಕಣೆ, ಪಶು ಸಾಕಣೆ ಹೀಗೆ ಅವರದೇ ಆದ ಕೆಲಸಗಳು. ಹಾಗಾಗಿ ಮೀನನ್ನು ನಂಬಿದವರು ಮೋಸ ಹೋಗಿಲ್ಲ. ಹಾಗಂತ ಇಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಸಮುದ್ರದ ಕಿನಾರೆಯಲ್ಲಿ ವಾಸಿಸುವ ಮಂದಿಗೆ ಕಡಲ್ಕೊರೆತದಿಂದ ದಡಗಳಿಗಪ್ಪಳಿಸುವ ಅಲೆಗಳಿಂದ ಹಲವಾರು ಬಾರಿ ಹಾನಿಗಳಾಗಿವೆ. ಶಾಶ್ವತ ಪರಿಹಾರಕ್ಕಾಗಿ ಸರಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಸಂಪೂರ್ಣವಾಗಿ ಕೈಗೂಡಿಲ್ಲ. ಆದರೂ ಇದೊಂದು ಅತೀ ದೊಡ್ಡ ಸಮಸ್ಯೆಯಾಗಿ ಕಾಡಿಲ್ಲ. ತಾಜಾ ಮೀನುಗಳಿಗೆ ಬೆಂಬಲ ಬೆಲೆಯ ಆವಶ್ಯಕತೆಯೂ ಇಲ್ಲ. ಒಣಗಿಸಿದರೆ ಒಣ ಮೀನಿಗೂ ಬೇಡಿಕೆ. ಅಲ್ಲೊಂದಿಷ್ಟು ವ್ಯಾಪಾರ ವಹಿವಾಟು. ಮೀನಿನ ತೈಲ ಮೊದಲಾದವುಗಳಿಗಿರುವ ಕಾರ್ಖಾನೆ.ಅಲ್ಲೊಂದಷ್ಟು ಜನರಿಗೆ ಕೆಲಸ. ಮೀನಿನ ರಫ್ತು ಸಂಬಂಧೀ ಕಾರ್ಖಾನೆ, ವಾಹನಗಳು, ಕಾರ್ಮಿಕರು.

  ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕೃಷಿ, ತೋಟವನ್ನು ನೆಚ್ಚಿಕೊಂಡವರು ಕಡಿಮೆ. ನೆಚ್ಚಿಕೊಂಡವರಿಗೆ ಮಳೆ ಕೈಕೊಡಲಾರದು. ಇನ್ನು ಈ ಯಥೇಚ್ಛ ಮಳೆಯ ಕಾರಣ ಹಲವರಿಗೆ ಕೃಷಿ ಜೀವನೋಪಾಯವಲ್ಲದಿದ್ದರೂ ಹವ್ಯಾಸವೆನ್ನಬಹುದು. ನೆರೆಯಿಂದಾಗಿ ಆಗುವ ಅಪಾಯ ಬಹಳ ಸಣ್ಣದು. 1970ರ ನೆರೆಯನ್ನು ಜನ ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಹೇಳಿಕೊಳ್ಳುವ ಉದಾಹರಣೆಗಳಿಲ್ಲ. ಉಬ್ಬು ತಗ್ಗುಗಳಿಂದ ಆವೃತವಾಗಿರೋ ಪ್ರದೇಶವಾದ್ದರಿಂದ, ನೀರು ಸರಾಗವಾಗಿ ಹರಿಯುವುದು ಒಂದು ಕಾರಣವಿರಬಹುದು. ಕುಡಿಯುವ ನೀರಿನ ಸಮಸ್ಯೆ ತೀರಾ ಕಡಿಮೆ. ಬಾವಿ, ಬೋರ್‌ವೆಲ್‌ಗಳಲ್ಲಿ ಸದಾ ಶುದ್ಧ ನೀರು. ಇಲ್ಲಿ ಬಾಷ್ಪೀಕರಿಸಿದ ನೀರಿನ ಆವಶ್ಯಕತೆ ಇಲ್ಲ. ಕರ್ನಾಟಕದ ಉಳಿದ ಜಿಲ್ಲೆಗಳಂತೆ ಕುಡಿಯುವ ನೀರಿಗಾಗಿ, ಕೃಷಿ ನೀರಿಗಾಗಿ ಕ್ರಾಂತಿ ನಡೆಸುವಂತಹ ಪರಿಸ್ಥಿತಿ ಇಲ್ಲಿಲ್ಲ. ಎತ್ತಿನ ಹೊಳೆ ಯೋಜನೆ ವಿರುದ್ಧ ಪ್ರತಿಭಟನೆಗಳಾದರೂ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇದರ ಕಾವು ಏರಿಲ್ಲವೆನ್ನುವುದು ಗಮನಾರ್ಹ. ಜಿಲ್ಲೆಯ ಬಹುಪಾಲು ಜನರಿಗೆ ನೇತ್ರಾವತಿ, ಜೀವನದಿಯಾಗಿ ಉಳಿದಿಲ್ಲವೆಂಬುದೂ ಇದಕ್ಕೆ ಒಂದು ಕಾರಣವಿದ್ದಿರಬಹುದು.

 ಹೀಗೆ ಪಟ್ಟಿ ಮಾಡುತ್ತಾ ಹೋದಾಗ ವಿವಿಧ ರೀತಿಯಲ್ಲಿ ಎಲ್ಲಾ ಭಾಗದ ಜನರಿಗೆ ಏಕಕಾಲದಲ್ಲಿ ಸಮಸ್ಯೆಯಾಗಿರುವ, ಹೋರಾಡಿ ಜಯಿಸಬೇಕಾದಂತಹ ಯಾವುದೇ ಸಮಸ್ಯೆ ಇಲ್ಲಿಲ್ಲ. ಎಂಆರ್‌ಪಿಎಲ್‌ನಂತಹ ಬೃಹತ್ ಕಾರ್ಖಾನೆಗಳೂ ಹಲವರಿಗೆ ಜೀವನೋಪಾಯವನ್ನೊದಗಿಸಿವೆ. ಇನ್ನು ಈ ಭಾಗದ ಮುಸ್ಲಿಮರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗವೆಂಬುದು ಅತೀ ದೊಡ್ಡ ವರ. ಹಾಗಾಗಿ ಉನ್ನತ ವ್ಯಾಸಂಗವೆಂಬುದು ಇವರಿಗೆ ಅನಿವಾರ್ಯವಾಗಿ ಕಂಡಿಲ್ಲ. ಇನ್ನು ಸ್ವಉದ್ಯೋಗಿಗಳೇನು ಕಮ್ಮಿ ಇಲ್ಲ. ಅಂಗಡಿ ಮುಂಗಟ್ಟು, ಆಟೊರಿಕ್ಷಾ, ಕ್ಯಾಬ್, ಬಸ್ ಡ್ರೈವರ್‌ಗಳು ಇತ್ಯಾದಿ. ಅಲ್ಲದೆ ಆಸ್ಪತ್ರೆ, ವಿದ್ಯಾ ಸಂಸ್ಥೆಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ, ಬಂದರು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲಾ ಕ್ಷೇತ್ರದಲ್ಲೂ ದಕ್ಷಿಣ ಕನ್ನಡ ಪ್ರಬಲವಾಗಿದೆ ಮತ್ತು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ. ಇಲ್ಲಿ ನ ಎಲ್ಲಾ ತಾಲೂಕುಗಳೂ ಅಭಿವೃದ್ಧಿ ಹೊಂದುತ್ತಿವೆ. ಶಿಕ್ಷಣ ಪ್ರತಿಷ್ಠಾನ ಗಳು, ವೈದ್ಯಕೀಯ ಕಾಲೇಜ್‌ಗಳು ಜಿಲ್ಲೆಗೆ ಅದರದೇ ಆದ ಮೆರುಗು ನೀಡಿದೆ. ಆರೋಗ್ಯದ ದೃಷ್ಟಿಯಿಂದಲೂ ಬಹಳ ಕ್ಷೇಮವೆನ್ನಬಹುದು. ಪ್ರತಿಷ್ಟಿತ ಆಸ್ಪತ್ರೆಗಳೂ, ಪ್ರಖ್ಯಾತ ವೈದ್ಯರೂ ಇದ್ದಾರೆ. ಹಾಗಾಗಿ ರಾಜ್ಯ ಮಾತ್ರವಲ್ಲದೆ ದೇಶವಿದೇಶಗಳಿಂದ ಚಿಕಿತ್ಸೆಗಾಗಿ ರೋಗಿಗಳು ಆಗಮಿಸುತ್ತಾರೆ. ಹಾಗೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಜಿಲ್ಲೆಯ ಕೊಡುಗೆ ಅಪಾರ. ಜಿಲ್ಲೆಗೆ ತಕ್ಕಷ್ಟೇ ಜನಸಂಖ್ಯೆ. ಬೆಂಗಳೂರಿನಂತಹ ದೊಡ್ಡ ನಗರವಲ್ಲ.ಹಾಗಾಗಿ ವಾಹನ ದಟ್ಟಣೆಯ ಕಿರಿಕಿರಿ ಹೆಚ್ಚಿಲ್ಲ.

ಈ ಜಿಲ್ಲೆಯ ಇನ್ನೊಂದು ವಿಶೇಷ ಇಲ್ಲಿನ ಸ್ಥಳೀಯ ಭಾಷೆಗಳು. ಇಲ್ಲಿಯ ಬಹು ಪಾಲು ಜನರಿಗೆ ಕನ್ನಡ ಮಾತೃ ಭಾಷೆಯಲ್ಲ. ಹಿಂದೂಗಳಿಗೆ ತುಳು, ಮುಸ್ಲಿಮರಿಗೆ ಬ್ಯಾರಿ, ಕ್ರೈಸ್ತರಿಗೆ ಕೊಂಕಣಿ.ಆದರೂ ಪರಸ್ಪರರ ಭಾಷೆಗಳ ಮೇಲೆ ಹಿಡಿತವಿದೆ. ಸರಕಾರಿ ಸಂಬಂಧಿ ಸಂಸ್ಥೆಗಳಲ್ಲೆದರಲ್ಲೂ ಬಳಸುವುದು ಕನ್ನಡವೇ.ಐದಾರು ಭಾಷೆಗಳ ಮೇಲೆ ಹಿಡಿತವಿರುವವರು ಬಹುಪಾಲು ಮಂದಿ. ಭಾಷಾ ವ್ಯಾಮೋಹವಿಲ್ಲ. ಕೆಲವರಿಂದ ತುಳುನಾಡ ಬೇಡಿಕೆ ಇದೆ. ಆದರೆ ಅಷ್ಟೊಂದು ಬೆಂಬಲವಿಲ್ಲ. ಎಲ್ಲಾ ಭಾಷೆಗಳನ್ನು ಪ್ರೀತಿಸುವ ಮಂದಿ. ಕನ್ನಡ, ತುಳು, ಬ್ಯಾರಿ, ಕೊಂಕಣಿ, ಮಲೆಯಾಳಂ, ಹಿಂದಿ, ಮರಾಠಿ, ತಮಿಳು, ತೆಲುಗು ಇತ್ಯಾದಿ. ಅರೇಬಿಕ್ ಭಾಷೆಯನ್ನು ಬಲ್ಲ ಒಂದಷ್ಟು ಮುಸ್ಲಿಮರೂ ಇದ್ದಾರೆ. ಕಾಸರಗೋಡು ಗಡಿಯಲ್ಲಿ ಮಲೆಯಾಳಂ, ಬ್ಯಾರಿ, ತುಳು ಭಾಷಿಕರಿದ್ದಾರೆ. ಆದರೆ ಈ ಸಮಸ್ಯೆ, ಸಾಮಾನ್ಯ ಜನರನ್ನು ಬಾಧಿಸಿಲ್ಲವೆನ್ನಬಹುದು.

 ಆದರೆ ಒಂದೊಂದು ಭಾಗಕ್ಕೆ ಸೀಮಿತವಾಗಿರುವ ಹಲವಾರು ಸಮಸ್ಯೆಗಳಿವೆ. ಸಮುದ್ರದ ದಡದಲ್ಲಿರುವವರಿಗೆ ಕಡಲ್ಕೊರೆತದಿಂದ ಉಂಟಾಗುವ ಸಮಸ್ಯೆ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಅಸಮರ್ಪಕ ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಒಡೆತನದ ದರ್ಬಾರ್, ಕಾರ್ಖಾನೆಗಳು ಹೊರಬಿಡುವ ವಿಷ ಪದಾರ್ಥ ನದಿ, ಸಮುದ್ರ ಸೇರುತ್ತಿರುವುದು ಒಂದು ಸಮಸ್ಯೆಯೇ. ಈ ಸಂಬಂಧ ಹೋರಾಟಗಳು ನಡೆದಿಲ್ಲವೆನ್ನುವಂತಿಲ್ಲ. ಪ್ರವಾಸೋದ್ಯಮದ ಬೆಳವಣಿಗೆಗೆ ವಿಫುಲ ಅವಕಾಶವಿದ್ದರೂ ಯಾಕೋ ಅಭಿವೃದ್ಧಿ ಮರೀಚಿಕೆಯಾಗೇ ಉಳಿದಿದೆ.

 ನೆಲ, ಜಲ, ಭಾಷೆ, ಗಡಿ ಅಥವಾ ಇನ್ನಿತರ ಮೂಲಭೂತ ಆವಶ್ಯಕತೆಗಳ ಬಗೆಗಿನ ಹೆಚ್ಚಿನ ಸಮಸ್ಯೆಗಳು ಇಲ್ಲಿಲ್ಲ. ಅಂದರೆ ಈ ವಿಚಾರಗಳನ್ನಿಟ್ಟುಕೊಂಡು ಕ್ರಾಂತಿಯುತ ರಾಜಕೀಯ ಮಾಡಿ ಲಾಭ ಪಡೆದುಕೊಳ್ಳುವ ಯಾವುದೇ ದಾರಿ ಈ ಭಾಗದ ರಾಜಕೀಯ ಪಕ್ಷಗಳಿಗೋ, ರಾಜಕಾರಣಿಗಳಿಗೋ ಇಲ್ಲವೆನ್ನಬಹುದು. ಇರುವ ಸಮಸ್ಯೆಗಳಿಗೆ ಕನಿಷ್ಠ ತಾತ್ಕಾಲಿಕ ಪರಿಹಾರ ಆಯಾ ಕಾಲಕ್ಕೆ ದೊರಕುತ್ತಿದೆ.

ಇನ್ನು ಧಾರ್ಮಿಕತೆ. ಕೇರಳವನ್ನು ‘ದೈವತ್ತಿಂಡೆ ಸ್ವಂದಂ ನಾಡ್’ ಅನ್ನುವುದಾದರೆ, ಈ ಜಿಲ್ಲೆಯನ್ನು ‘ದೇವರ ಜಿಲ್ಲೆ’ ಎನ್ನಬಹುದು. ಎಲ್ಲ ಧರ್ಮದವರಿಗೂ ಪವಿತ್ರವಾದ ಮಂದಿರ-ಮಸೀದಿ-ಚರ್ಚ್‌ಗಳು ಇಲ್ಲಿ ಯಥೇಚ್ಛವಾಗಿವೆ. ಈ ಭಾಗದ ಜನತೆ ಆಚಾರ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲಾರರು. ದೇಶದಲ್ಲಾಚರಿಸುವ ಬಹುಪಾಲು ಹಬ್ಬಗಳು ಇಲ್ಲಿ ಆಚರಿಸಲ್ಪಡುತ್ತವೆ. ಇನ್ನು ಭೂತಾರಾಧನೆ ಇಲ್ಲಿನ ವಿಶೇಷ. ಎಲ್ಲಾ ಧರ್ಮಗಳ ಧಾರ್ಮಿಕ ನಂಬಿಕೆಗಳೇ ಇಲ್ಲಿಯ ಜನರು ತಮ್ಮ ಬಲವೆಂದುಕೊಂಡಿದ್ದಾರೆ.

ಕೆಲವೊಮ್ಮೆ ಬಲವೇ ನಮ್ಮ ದೌರ್ಬಲ್ಯವಾಗುತ್ತದೆ. ಇಲ್ಲಿ ಆಗಿರುವುದೂ ಅಷ್ಟೇ. ಓಟ್ ಬ್ಯಾಂಕ್‌ಗೆ ಲಾಭವಾಗುವಂತಹ ದೊಡ್ಡ ಸಮಸ್ಯೆಗಳಿಲ್ಲದಾಗ ಅಪಾರ ಧಾರ್ಮಿಕ ಶೃದ್ಧೆಯನ್ನೇ ಬಂಡವಾಳವಾಗಿಸಿ ಇಲ್ಲಿ ರಾಜಕೀಯ ಶುರು ಮಾಡಲಾಯಿತು. ಹೇಗೆ ಶುರುವಾಯಿತು, ಯಾರಿಂದ ಶುರುವಾಯಿತು, ಏಕೆ ಶುರುವಾಯಿತು ತಿಳಿದಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ಇದನ್ನು ಬಳಸಲಾಗುತ್ತಿರುವುದು ಮತ್ತು ರಾಜಕೀಯ ಶಕ್ತಿಗಳ ಕೈವಾಡವಿರುವುದು ನಗ್ನ ಸತ್ಯ. ಪರಸ್ಪರರನ್ನು ಕಚ್ಚಾಡಿಸಿ ಲಾಭ ಪಡೆಯುವ ಹುನ್ನಾರವಷ್ಟೇ. ಈ ಕೋಮುದಳ್ಳುರಿ ಜಿಲ್ಲೆಗೆ ಈ ರೀತಿ ಬಾಧಿಸಿರುವುದರ ಹಿಂದೆ ರಾಜಕೀಯವಿರುವುದು ಜಿಲ್ಲೆಯ ಜನತೆಗೆ ತಿಳಿಯದ ವಿಚಾರವೇನಲ್ಲ. ಆದ್ದರಿಂದಲೇ ಅದೆಷ್ಟೇ ಜಗಳಗಳಾದರೂ ಸಾಮಾನ್ಯ ವರ್ಗ ಪರಸ್ಪರರ ಮೇಲಿನ ನಂಬಿಕೆ ಕಳೆದುಕೊಂಡಿಲ್ಲ. ಆ ಒಂದು ಸಂದರ್ಭದಲ್ಲಿ ಹಿಂಸಾಚಾರವಾಗುವುದು ಬಿಟ್ಟರೆ ಉಳಿದ ಸಮಯಗಳಲ್ಲಿ ಇಲ್ಲಿ ಎಲ್ಲವೂ ಸರಳ. ಈ ಸಮಸ್ಯೆಯಿಂದ ಹೊರಬಂದರೆ ಬಹುಶಃ ದ.ಕ ಜಿಲ್ಲೆ ಬಹಳ ದೊಡ್ಡ ಕಂಟಕದಿಂದ ದೂರವಾದಂತೆ...

ಧರ್ಮಗಳೇನೇ ಇರಲಿ, ನಮ್ಮೆಲ್ಲರನ್ನು ಸೃಷ್ಟಿಸಿದ ಸೃಷ್ಟಿಕರ್ತನೊಬ್ಬನೇ ಎಂಬ ಸತ್ಯವನ್ನು ಅರಿತು ನಾವು ಬಾಳಿದರೆ, ಈ ಜಗತ್ತಿನಲ್ಲಿ ಅರ್ಧದಷ್ಟು ಧಾರ್ಮಿಕ ಕಲಹಗಳು ಇಲ್ಲವಾಗುವುದು ಮತ್ತು ಅದರ ಜೊತೆಗೆ ಬಹುಪಾಲು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೂ ನಾಶವಾಗುವುದು..

ಆದರೆ ನಾವು ಈ ಸತ್ಯವನ್ನು ವಾಸ್ತವೀಕರಿಸಿ ಬದುಕಲಾರೆವು. ಏಕೆಂದರೆ ಇಂತಹ ಭಿನ್ನಾಭಿಪ್ರಾಯಗಳೇ ಬಹುಪಾಲು ಜನರ ಅಸ್ತಿತ್ವಕ್ಕೂ, ಆಹಾರಕ್ಕೂ ದಾರಿಯಾಗಿರುವುದು.

Writer - ಇರ್ಫಾನ್ ಹಕ್

contributor

Editor - ಇರ್ಫಾನ್ ಹಕ್

contributor

Similar News