ಪೇಸ್, ಬೋಪಣ್ಣ, ಶರಣ್ ಗೆಲುವಿನಾರಂಭ

Update: 2018-01-18 18:25 GMT

ಮೆಲ್ಬೋರ್ನ್, ಜ.18: ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಅವರು ಪೂರವ್ ರಾಜಾ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಗುರುವಾರ ಗೆಲುವಿನ ಆರಂಭ ಪಡೆದಿದ್ದಾರೆ.

ಭಾರತದ ರೋಹನ್ ಬೋಪಣ್ಣ ಹಾಗೂ ಡಿವಿಜ್ ಶರಣ್ ಕೂಡ ಡಬಲ್ಸ್ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ. ಪೇಸ್-ರಾಜಾ ಜೋಡಿ ನಿಕೊಲಸ್ ಬಾಸಿಲ್‌ಶ್ವಿಲಿ ಹಾಗೂ ಆಂಡ್ರಿಯಸ್ ಹೈಡರ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ 6-2,6-3 ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಪೇಸ್-ರಾಜಾ ಮುಂದಿನ ಸುತ್ತಿನಲ್ಲಿ 5ನೇ ಶ್ರೇಯಾಂಕದ ಜಮ್ಮಿ ಮರ್ರೆ ಹಾಗೂ ಬ್ರುನೊ ಸೊರೆಸ್‌ರನ್ನು ಎದುರಿಸಲಿದ್ದಾರೆ.

ಎಡಗೈ ಆಟಗಾರ ಡಿವಿಜ್ ಶರಣ್ ಅಮೆರಿಕದ ರಾಜೀವ್ ರಾಮ್ ಮತ್ತೊಂದು ಡಬಲ್ಸ್ ಪಂದ್ಯದಲ್ಲಿ ಮರಿಯಸ್ ಕಾಪಿಲ್ ಹಾಗೂ ವಿಕ್ಟರ್ ಟ್ರೊಸ್ಕಿ ಅವರನ್ನು 7-6(5), 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಶರಣ್-ರಾಮ್ ಜೋಡಿ ಮುಂದಿನ ಸುತ್ತಿನಲ್ಲಿ ಫ್ಯಾಬಿಯೊ ಫೊಗ್ನಿನಿ ಹಾಗೂ ಮಾರ್ಸೆಲ್ ಗ್ರಾನೊಲ್ಲರ್ಸ್‌ರೊಂದಿಗೆ ಸೆಣಸಾಡಲಿದ್ದಾರೆ.

ಇದೇ ವೇಳೆ 10ನೇ ಶ್ರೇಯಾಂಕದ ರೋಹನ್ ಬೋಪಣ್ಣ ಅವರು ಎಡ್ವರ್ಡ್-ರೋಜರ್ ವೆಸ್ಸೆಲಿನ್‌ರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದು ರಿಯಾನ್ ಹ್ಯಾರಿಸನ್-ವಾಸೆಕ್ ಪೊಸ್ಪಿಸಿಲ್‌ರನ್ನು 6-2, 7-6(5) ಅಂತರದಿಂದ ಮಣಿಸಿ ಎರಡನೇ ಸುತ್ತಿಗೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News