ಸಿಎಸ್‌ಕೆಗೆ ಅಶ್ವಿನ್ ಮರು ಸೇರ್ಪಡೆಗೆ ಪ್ರಯತ್ನ: ಧೋನಿ

Update: 2018-01-19 18:04 GMT

ಚೆನ್ನೈ, ಜ.19: ‘‘ರವಿಚಂದ್ರನ್ ಅಶ್ವಿನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು’’ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಜ.27 ಮತ್ತು 28ರಂದು ಐಪಿಎಲ್‌ನ ಮುಂದಿನ ಆವೃತ್ತಿಗೆ ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಐಪಿಎಲ್‌ಗೆ ಮರಳಿದೆ.ಹಳೆಯ ಹುಲಿಗಳಾದ ಧೋನಿ, ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.

ಚೆನ್ನೈನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ ‘‘ ಅಶ್ವಿನ್ ಅವರನ್ನು ಹರಾಜಿನಲ್ಲಿ ಮೊದಲ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುವುದು’’ ಎಂದರು.

 ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ:  ‘‘ದಕ್ಷಿಣ ಆಫ್ರಿಕ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ 20 ವಿಕೆಟ್‌ಗಳನ್ನು ಉಡಾಯಿಸಿದ್ದ ಭಾರತಕ್ಕೆ ಗೆಲ್ಲುವ ಅವಕಾಶ ಇತ್ತು. ಆದರೆ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲು ಅನುಭವಿಸಿತು’’ ಎಂದು ಧೋನಿ ಹೇಳಿದರು.

ಟೆಸ್ಟ್‌ನಿಂದ ನಿವೃತ್ತಿಯಾಗಿರುವ ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡದ ವಿಕೆಟ್ ಕೀಪರ್ ಆಗಿ ಮುಂದುವರಿದಿದ್ದಾರೆ.

ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 72 ರನ್‌ಗಳ ಸೋಲು ಅನುಭವಿಸಿತ್ತು. ಎರಡನೇ ಟೆಸ್ಟ್‌ನಲ್ಲಿ 135 ರನ್ ಸೋಲು ಅನುಭವಿಸಿ ಮೂರು ಟೆಸ್ಟ್‌ಗಳ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ. ಮೂರನೇ ಟೆಸ್ಟ್ ಪಂದ್ಯ ಜ.24ರಿಂದ 28ರ ತನಕ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News