ಖರ್ಚಿಗೆ ಕಾಸಿಲ್ಲದೆ ಬಾಗಿಲು ಮುಚ್ಚಿದ ಅಮೆರಿಕ ಸರಕಾರ

Update: 2018-01-20 14:34 GMT

ವಾಷಿಂಗ್ಟನ್,ಜ.20: ವಿಶ್ವದ ದೊಡ್ಡಣ್ಣ ಅಮೆರಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ ಖರ್ಚಿಗೆ ಕಾಸಿಲ್ಲದೆ ಸರಕಾರವು ಶನಿವಾರ ಅಧಿಕೃತವಾಗಿ ಸ್ಥಗಿತಗೊಂಡಿದೆ. ತನ್ನ ನೌಕರರಿಗೆ ವೇತನ ನೀಡಲೂ ಅದರ ಬಳಿ ದುಡ್ಡಿಲ್ಲ. ಫೆಡರಲ್ ಸರಕಾರವನ್ನು ನಡೆಸಲು ಕಿರು ಅವಧಿಯ ವೆಚ್ಚ ಮಸೂದೆಯನ್ನು ಸೆನೆಟ್ ತಿರಸ್ಕರಿಸಿರುವುದು ಇದಕ್ಕೆ ಕಾರಣ. ಇದರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ಮೊದಲ ವರ್ಷ ಗೊಂದಲದೊಂದಿಗೆ ಅಂತ್ಯಗೊಂಡಿದೆ.

ವೆಚ್ಚ ಮಸೂದೆಯನ್ನು ಸೆನೆಟ್ ಅಂಗೀಕರಿಸಲು ಶುಕ್ರವಾರ ಮಧ್ಯರಾತ್ರಿಯ ಗಡುವು ನಿಗದಿಯಾಗಿತ್ತು. ಆದರೆ ಪೆಂಟಗಾನ್ ಮತ್ತು ಒಕ್ಕೂಟದ ಇತರ ಸಂಸ್ಥೆಗಳಿಗೆ ಕಿರುಅವಧಿಗೆ ಹಣಕಾಸನ್ನು ಒದಗಿಸಲಿದ್ದ ನಿರ್ಣಾಯಕ ಮಸೂದೆಗೆ ತಡೆಯೊಡ್ಡಲು ಕೆಲವು ರಿಪಬ್ಲಿಕನ್ ಸದಸ್ಯರು ಡೆಮಾಕ್ರಾಟಿಕ್ ಪಕ್ಷದ ಸದಸ್ಯರೊಂದಿಗೆ ಕೈ ಜೋಡಿಸಿದ ಬಳಿಕ ಶನಿವಾರ ನಸುಕಿನ 12:01(ಸ್ಥಳೀಯ ಕಾಲಮಾನ) ಸರಕಾರವು ಸ್ಥಗಿತಗೊಳ್ಳಲು ಮುಹೂರ್ತವಾಯಿತು.

ಸರಕಾರವು ಬಾಗಿಲೆಳೆದುಕೊಳ್ಳಲು ಡೆಮಾಕ್ರಾಟಿಕ್‌ಗಳು ಕಾರಣ ಎಂದು ಟ್ರಂಪ್ ದೂರಿದ್ದಾರೆ. ಕಾಕತಾಳೀಯವೆಂಬಂತೆ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸರಿಯಾಗಿ ಒಂದು ವರ್ಷದ ಬಳಿಕ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ತೆರಿಗೆ ಕಡಿತಗಳ ಭಾರೀ ಯಶಸ್ಸನ್ನು ಮತ್ತು ನಮ್ಮ ಶ್ರೀಮಂತ ಆರ್ಥಿಕತೆಗೆ ಅದರಿಂದ ದೊರೆಯುತ್ತಿರುವ ಬೆಂಬಲವನ್ನು ಕುಗ್ಗಿಸಲು ಡೆಮಾಕ್ರಾಟ್‌ಗಳು ಈ ಮುಚ್ಚುಗಡೆಯನ್ನು ಬಯಸಿದ್ದಾರೆ ಎಂದು ಟ್ರಂಪ್ ಹೇಳಿದರು.

ಕೊನೆಯ ಕ್ಷಣದವರೆಗೆ ದ್ವಿಪಕ್ಷೀಯ ಮಾತುಕತೆಗಳ ಬಳಿಕವೂ ಫೆ.16ರವರೆಗೆ ಸರಕಾರಕ್ಕೆ ಹಣಕಾಸನ್ನು ಒದಗಿಸುವ ವೆಚ್ಚ ಮಸೂದೆಯ ಅಂಗೀಕಾರಕ್ಕೆ ಅಗತ್ಯವಾಗಿದ್ದ 60 ಮತಗಳು ದೊರೆಯಲಿಲ್ಲ. ಸೆನೆಟ್ 50-48 ಮತಗಳಿಂದ ಮಸೂದೆಗೆ ತಡೆಯನ್ನೊಡ್ಡಿತು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕಿರು ಅವಧಿ ವೆಚ್ಚ ಮಸೂದೆಯನ್ನು ಗುರುವಾರ ಅಂಗೀಕರಿಸಿತ್ತು.

ಇದು ಗಡೀಪಾರು ಕ್ರಮವನ್ನು ಎದುರಿಸುತ್ತಿರುವ ಅಕ್ರಮ ವಲಸಿಗರ ಕುರಿತು ತಮ್ಮೊಡನೆ ಮಾತುಕತೆ ನಡೆಸಲು ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಮೇಲೆ ಒತ್ತಡ ಹೇರುವ ಡೆಮಾಕ್ರಾಟ್‌ಗಳ ಕಾರ್ಯತಂತ್ರದ ಭಾಗವಾಗಿದೆ.

ಸೋಮವಾರ ಸರಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದೆ ತಮ್ಮ ಮನೆಗಳಲ್ಲಿಯೇ ಉಳಿದುಕೊಳ್ಳುವುದು ಅನಿವಾರ್ಯವಾಗುವುದರೊಂದಿಗೆ ‘ಸರಕಾರ ಬಂದ್’ನ ಹೆಚ್ಚಿನ ಪರಿಣಾಮಗಳು ಅನುಭವಕ್ಕೆ ಬರಲಿವೆ.

ಒಕ್ಕೂಟ ಸರಕಾರದ ಎಂಟು ಲಕ್ಷಕ್ಕೂ ಅಧಿಕ ನೌಕರರು ಅನಿವಾರ್ಯ ಬಿಡುವನ್ನು ಅನುಭವಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅಗತ್ಯ ಸೇವೆಗಳು ಮಾತ್ರ ತೆರೆದಿರಲಿವೆ.

ಹಿಂದಿನ ಬಾರಿ 2013ರ ಅಕ್ಟೋಬರ್‌ನಲ್ಲಿ 16 ದಿನಗಳ ಕಾಲ ಸರಕಾರವು ಸ್ಥಗಿತಗೊಂಡಿತ್ತು. ಅದಕ್ಕೂ ಮೊದಲು 21 ದಿನಗಳ ಕಾಲ ಸರಕಾರವು ಸ್ಥಗಿತಗೊಂಡಿದ್ದು, 1996ರ ಜ.6ರಂದು ಬಿಕ್ಕಟ್ಟು ಅಂತ್ಯಗೊಂಡಿತ್ತು. ಆದರೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್, ಸೆನೆಟ್ ಮತ್ತು ವೈಟ್‌ಹೌಸ್‌ನಲ್ಲಿ ಒಂದೇ ಪಕ್ಷದ ನಿಯಂತ್ರಣವಿರುವಾಗ ಸರಕಾರವು ಸ್ಥಗಿತಗೊಂಡಿರುವುದು ಇತ್ತೀಚಿನ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ.

 ‘ಶುಮರ್ ಶಟ್‌ಡೌನ್’ಗೆ ನಾವು ಸಜ್ಜಾಗುತ್ತಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ ಬಜೆಟ್ ನಿರ್ವಹಣೆ ಕಚೇರಿಯ ನಿರ್ದೇಶ ಮೈಕ್ ಮುಲ್ವಾನೆ ಅವರು, ಸದ್ಯದ ಬಿಕ್ಕಟ್ಟಿನ ಪರಿಣಾಮಗಳು 2013ರಲ್ಲಿಯ ಪರಿಣಾಮಗಳಿಗಿಂತ ಕಡಿಮೆಯಾಗಿರುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಬಿಕ್ಕಟ್ಟನ್ನು ನಾವು ಭಿನ್ನವಾಗಿ ನಿರ್ವಹಿಸಲಿದ್ದೇವೆ. ನಾವು ಅದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವುದಿಲ್ಲ. ಜನರಿಗೆ, ವಿಶೇಷವಾಗಿ ಈ ಸರಕಾರಕ್ಕಾಗಿ ಕೆಲಸ ಮಾಡುವವರಿಗೆ ನೋವನ್ನುಂಟು ಮಾಡುವುದಿಲ್ಲ. ಆದರೆ ಧನ ವಿನಿಯೋಗ ಮಸೂದೆಗಾಗಿ ಈಗಲೂ ನಮಗೆ ಕಾಂಗ್ರೆಸ್‌ನ ಅಗತ್ಯವಿದೆ ಎಂದರು.

ಸೇನೆಯ ಕಾರ್ಯ, ಗಡಿಗಳಲ್ಲಿ ಗಸ್ತು, ಅಗ್ನಿಶಾಮಕ ದಳದ ಕೆಲಸಗಳು ಮುಂದುವರಿಯಲಿವೆ. ಉದ್ಯಾನವನಗಳು ತೆರೆದಿರಲಿವೆ. ಅಂಚೆಯಂತಹ ಎಲ್ಲ ಅಗತ್ಯ ಸೇವೆಗಳು ಕಾರ್ಯ ನಿರ್ವಹಿಸಲಿವೆ. ಆದರೆ ಈ ಕರ್ತವ್ಯಗಳನ್ನು ನಿರ್ವಹಿಸುವವರಿಗೆ ವೇತನಗಳನ್ನು ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಅಕ್ರಮ ವಲಸೆಗೆ ಇತರ ಎಲ್ಲ ವಿಷಯಗಳಿಗಿಂತ ಹೆಚ್ಚಿನ ಆದ್ಯತೆ ದೊರೆಯಬೇಕೆಂದು ಡೆಮಾಕ್ರಾಟಿಕ್‌ಗಳು ಬಯಸಿರುವುದರಿಂದ ಅವರು ಸರಕಾರದ ಹಣಕಾಸಿಗೆ ತಡೆಯೊಡ್ಡಿರುವುದು, ನಮ್ಮ ಯೋಧರಿಗೆ ಹಾನಿಯನ್ನುಂಟು ಮಾಡುವುದು ಮತ್ತು ಒಂಭತ್ತು ಮಿಲಿಯನ್ ಮಕ್ಕಳಿಗೆ ಆರೋಗ್ಯ ಯೋಜನೆಯನ್ನು ದಿಕ್ಕೆಡಿಸುವುದು ಸಂಪೂರ್ಣವಾಗಿ ಅನ್ಯಾಯವಾಗಿದೆ ಎಂದು ಸೆನೆಟ್‌ನ ರಿಪಬ್ಲಿಕನ್ ನಾಯಕ ಮಿಚ್ ಮೆಕನ್ನೆಲ್ ಹೇಳಿದರು.

ವಲಸೆ ಸುಧಾರಣೆ ವಿಷಯವೇ ಬೇರೆ ಮತ್ತು ಅದನ್ನು ವೆಚ್ಚ ಮಸೂದೆಯಿಂದ ಪ್ರತ್ಯೇಕವಾಗಿರಿಸಬೇಕು ಎಂದು ಅವರು ವಾದಿಸಿದರು.

ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟ್ರಂಪ್ ಅವರು ಫ್ಲೋರಿಡಾದ ಮಾರ್-ಎ-ಲಾಗೋಕ್ಕೆ ತನ್ನ ನಿಗದಿತ ವಾರಾಂತ್ಯದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಆದರೆ ಮುಂದಿನ ವಾರ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಡೆಮಾಕ್ರಾಟ್‌ಗಳು ವಿಜೃಂಭಿಸುತ್ತಿರುವ ಟ್ರಂಪ್ ಆರ್ಥಿಕತೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಅದರ ಬದಲು ಸರಕಾರವನ್ನು ಸ್ಥಗಿತಗೊಳಿಸುವಷ್ಟು ಅವರು ಹತಾಶರಾಗಿದ್ದಾರೆ ಎಂದು ಹೇಳಿದ ವೈಟ್ ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಅವರು, ಈ ಬಿಕ್ಕಟ್ಟನ್ನು ‘ಶುಮರ್ ಶಟ್‌ಡೌನ್’ಎಂದು ಬಣ್ಣಿಸಿದರು. ಚಕ್ ಶುಮರ್ ಅವರು ಸೆನೆಟ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್‌ನ ನಾಯಕರಾಗಿದ್ದಾರೆ.

ಟ್ರಂಪ್ ಸರಕಾರವು ದೇಶದಲ್ಲಿರುವ ಅಕ್ರಮ ವಲಸಿಗರ ವಿರುದ್ಧ ಕಟು ಧೋರಣೆಯನ್ನು ಹೊಂದಿದ್ದರೆ, ಅವರು ಅಮೆರಿಕದ ಭಾಗವಾಗಿರಲು ಅವಕಾಶ ನೀಡಬೇಕು ಎನ್ನುವುದು ಡೆಮಾಕ್ರಟಿಕ್ ಪಕ್ಷದ ಆಗ್ರಹವಾಗಿದೆ ಮತ್ತು ಸರಕಾರವು ಸ್ಥಗಿತಕೊಳ್ಳಲು ಈ ವಿವಾದ ಮುಖ್ಯ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News